Advertisement

ಇನ್ನು ಭಾರತದಲ್ಲಿ ಇ-ಸಿಗರೇಟ್ ಸಂಪೂರ್ಣ ಬ್ಯಾನ್ ; ಸಂಸತ್ತಿನಲ್ಲಿ ಮಸೂದೆ ಅಂಗೀಕಾರ

10:01 AM Dec 03, 2019 | Hari Prasad |

ನವದೆಹಲಿ: ದೇಶದಲ್ಲಿ ಇನ್ನು ಮುಂದಕ್ಕೆ ಇ-ಸಿಗರೇಟ್ ಉತ್ಪಾದನೆ, ಮಾರಾಟ, ಸಾಗಾಟ, ಶೇಖರಣೆ ಮತ್ತು ಪ್ರಚಾರಕ್ಕೆ ಶಾಶ್ವತ ಬ್ರೇಕ್ ಬೀಳಲಿದೆ. ಈ ಕುರಿತಾದ ಮಸೂದೆಗೆ ರಾಜ್ಯಸಭೆ ಇಂದು ತನ್ನ ಧ್ವನಿಮತದ ಅಂಗೀಕಾರ ನೀಡಿದೆ. ಲೋಕ ಸಭೆಯಲ್ಲಿ ಈ ಮಸೂದೆ ಕಳೆದ ತಿಂಗಳು ಅಂಗೀಕಾರಗೊಂಡಿತ್ತು.

Advertisement

ಎಲೆಕ್ಟ್ರಾನಿಕ್ ಸಿಗರೇಟ್ ಗಳ ಮೆಲಿನ ನಿಷೇಧ ಕಾಯ್ದೆ, 2019ನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಈ ಮಸೂದೆಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಮಸೂದೆಯನ್ನು ನಾವು ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಒಳಗಾಗದೇ ರೂಪಿಸಿದ್ದೇವೆ ಎಂದು ಸಚಿವರು ಪ್ರಾರಂಭದಲ್ಲಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.

ತಂಬಾಕಿನ ಲಾಬಿಗೆ ಮಣಿದಿರುವ ಸರಕಾರ ಈ ಮಸೂದೆಯನ್ನು ಮಂಡಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಕೆಲವು ಸದಸ್ಯರು ಗಂಭೀರ ಆರೋಪವನ್ನು ಮಾಡಿದರು. ಮಾತ್ರವಲ್ಲದೇ ಸರಕಾರ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಧೈರ್ಯವನ್ನೂ ತೋರಲಿ ಎಂದೂ ಸಹ ಸದನ ಸದಸ್ಯರು ಅಭಿಪ್ರಾಯಪಟ್ಟರು.
ಇದಕ್ಕೆ ಉತ್ತರವಾಗಿ ಮಾತನಾಡಿದ ಸಚಿವ ಹರ್ಷವರ್ಧನ್ ಅವರು ತಂಬಾಕು ಉತ್ಪನ್ನಗಳು ನಿಷೇಧಕ್ಕೊಳಗಾದಲ್ಲಿ ಇದರಿಂದ ಸಂತೋಷಪಡುವವರಲ್ಲಿ ನಾನೇ ಮೊದಲಿಗ ಎಂದು ಅವರು ಹೇಳಿದರು.

ನಿಕೊಟಿನ್ ಮತ್ತು ಇತರೇ ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನವನ್ನು ಬಿಸಿ ಮಾಡುವ ಎಲೆಕ್ಟ್ರಾನಿಕ್ ಉಪಕರಣ ಎಂದು ಈ ಮಸೂದೆಯು ಇ-ಸಿಗರೇಟ್ ಕುರಿತಾಗಿ ವಿವರಣೆ ನೀಡುತ್ತದೆ.

ಈ ಕಾನೂನನ್ನು ಪ್ರಥಮ ಬಾರಿಗೆ ಉಲ್ಲಂಘಿಸುವ ವ್ಯಕ್ತಿಗಳಿಗೆ ಒಂದು ವರ್ಷದ ಜೈಲುವಾಸ, ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಇವೆರಡನ್ನೂ ವಿಧಿಸುವ ಅವಕಾಶವನ್ನು ಈ ಕಾಯ್ದೆಯಲ್ಲಿ ನೀಡಲಾಗಿದೆ. ಆ ಬಳಿಕದ ಉಲ್ಲಂಘನೆಗಳಿಗೆ ಮೂರು ವರ್ಷದ ಜೈಲುಶಿಕ್ಷೆ ಮತ್ತು ಐದು ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next