Advertisement

ಇ-ಸ್ವತ್ತು ಸಾಫ್ಟ್ ವೇರ್‌ಗೆ ಭೂಗಳ್ಳರ ಖನ್ನಾ?

02:35 PM Jul 17, 2023 | Team Udayavani |

ರಾಮನಗರ: ಗ್ರಾಪಂಗಳಲ್ಲಿ ಖಾತೆ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೂಪಿಸಿರುವ ಇ-ಸ್ವತ್ತು ತಂತ್ರಾಂಶ ಇದೀಗ ಭೂಗಳ್ಳರಿಗೆ ಅನುಕೂಲವಾಗಿ ಪರಿಣಮಿಸಿದ್ದು, ವೆಬ್‌ ಪೋರ್ಟಲ್‌ಗೆ ಖನ್ನ ಹಾಕಿ ನಕಲಿ ಇ-ಖಾತೆಗಳನ್ನು ಸೃಷ್ಟಿಸುವ ಜಾಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಗತಿ ಇದೀಗ ಮತ್ತೂಮ್ಮೆ ಬಯಲಾಗಿದೆ.

Advertisement

2021ರಲ್ಲಿ ಬೆಂ. ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಪಂನಲ್ಲಿ ಅಕ್ರಮವಾಗಿ ಲಾಗಿನ್‌ ಆಗಿ 36 ನಕಲಿ ಇ-ಖಾತೆಗಳನ್ನು ಸೃಷ್ಟಿಸಿರುವ ಸಂಬಂಧ ಪ್ರಕ ರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ರಾಮನಗರ ಜಿಲ್ಲೆಯ ಡಾಟಾ ಎಂಟ್ರಿ ಆಪರೇಟರ್‌ ಮತ್ತು ಪಿಡಿಒ ಸೇರಿದಂತೆ ಐದಾರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದೀಗ ತಾಲೂಕಿನ ಹರೀಸಂದ್ರ ಗ್ರಾಪಂನ ಪಿಡಿಒ ತನ್ನ ಇ-ಸ್ವತ್ತು ಲಾಗಿನ್‌ ಅನ್ನು ತೆರೆಯಲು ಯಾರೋ ಪ್ರತ್ನಿಸಿದ್ದಾರೆ ಎಂದು ದೂರು ನೀಡುವುದರೊಂದಿಗೆ ಜಿಲ್ಲೆಯಲ್ಲಿ ಇ-ಸ್ವತ್ತು ತಂತ್ರಾಂಶಕ್ಕೆ ಖನ್ನ ಹಾಕಿ ನಕಲಿ ಇ- ಖಾತೆಗಳನ್ನು ಸೃಷ್ಟಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಭೂಗಳ್ಳರ ಕೈಚಳಕ: ಬೆಂಗಳೂರು ನಗರಕ್ಕೆ ಸಮೀಪ ದಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡುವ ರಿಯಲ್‌ಎಸ್ಟೇಟ್‌ ಉದ್ಯಮ ಬಿರುಸಾಗಿ ನಡೆ ಯುತ್ತಿದೆ. ಸರ್ಕಾರದ ನಿಯಮಾನುಸಾರ ಲೇಔಟ್‌ ಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುವುದು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಲಾಭದಾಯಕವಲ್ಲ. ಹೀಗಾಗಿ ಅವರು ಭೂಪರಿವರ್ತನೆ ಸೇರಿದಂತೆ ಸಾಕಷ್ಟು ನಿಯಮಗಳನ್ನು ಉಲ್ಲಂಘಿಸಿ ಬಡಾವಣೆ ಗಳನ್ನು ನಿರ್ಮಿ ಸಿದ್ದು, ಈ ಬಡಾವಣೆಗಳಿಗೆ ಗ್ರಾಪಂಗಳಲ್ಲಿ ಖಾತೆ ಕೊಡು ವುದು ಸಾಧ್ಯವಿಲ್ಲದ ಕಾರಣ ಅಧಿಕಾರಿಗಳು ನಿರಾಕರಿಸು ತ್ತಾರೆ. ಇದಕ್ಕಾಗಿ ಇ-ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ಮಾಡಿ ತಮ್ಮ ಸ್ವತ್ತಿಗೆ ಖಾತೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಈದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದಕ್ಕೆ ಗ್ರಾಪಂಗಳ ಕೆಲ ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮೀಲಾಗಿರುವುದು ಗುಟ್ಟಾಗಿ ಉಳಿದಿರುವ ಸಂಗತಿಯೇನು ಅಲ್ಲ.

ಹಲವು ದೂರುಗಳು ದಾಖಲು: ಜಿಲ್ಲೆಯ ಶ್ರೀಮಂತ ಪಂಚಾಯ್ತಿ ಎನಿಸಿರುವ ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಇ-ಖಾತೆಯನ್ನು ಇದೇ ರೀತಿ ಮಾಡಿಕೊಡಲಾಗಿದೆ ಎಂದು ಅಲ್ಲಿನ ಪಿಡಿಒ ಜಿಲ್ಲಾ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದ್ದ ನಕಲಿ ಇ-ಖಾತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬೈರಮಂಗಲ ಪಿಡಿಒ ಹಾರೋಹಳ್ಳಿ ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ಹಾಗೂ ಕನಕಪುರದ ಖಾಸಗಿ ಸೈಬರ್‌ ಮಾಲೀಕನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿ ದ್ದರು. ಇಷ್ಟಾದರೂ ಜಿಲ್ಲೆಯಲ್ಲಿ ಈ ದಂಧೆಗೆ ಕಡಿವಾಣ ಬಿದ್ದಿಲ್ಲ, ನಕಲಿ ಇ-ಖಾತೆಗಳ ಸೃಷ್ಟಿ ನಡೆಯುತ್ತಿದೆ ಎಂಬುದಕ್ಕೆ ಹರೀಸಂದ್ರ ಗ್ರಾಪಂ ಪಿಡಿಓ ಲಾಗಿನ್‌ ಐಡಿ, ಪಾಸ್‌ವಡ್‌ ಬಳಸಿ ಬೇರೆಡೆ ಲಾಗಿನ್‌ ಆಗಲು ಪ್ರಯತ್ನಿಸಿರುವುದು ಸಾಕ್ಷಿಯಾಗಿದೆ.

ಇ-ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ಮಾಡಿ ಬೇನಾಮಿ ಇ-ಖಾತೆ ಸೃಷ್ಟಿಸುವ ಮೂಲಕ ಒಂದೆಡೆ ಸರ್ಕಾರ ಮತ್ತೂಂದೆಡೆ ಅಮಾಯಕರನ್ನು ವಂಚಿಸುತ್ತಿರುವ ಜಾಲವನ್ನು ಬೇಧಿಸಲು ಪೊಲೀಸ್‌ ಇಲಾಖೆ ಮುಂದಾಗ ಬೇಕಿದೆ. ಈ ದಂಧೆಯ ಹಿಂದೆ ಪಂಚಾಯತ್‌ ರಾಜ್‌ ಇಲಾಖೆ, ಭೂಮಾಫಿಯಾದ ಪ್ರಮುಖ ಕುಳಗಳು ಶಾಮೀಲಾಗಿದ್ದು, ಈ ದಂಧೆಯನ್ನು ಮಟ್ಟಹಾಕಲು ಪೊಲೀಸ್‌ ಇಲಾಖೆ ಮುಂದಾಗುವರೇ ಕಾಯ್ದು ನೋಡಬೇಕಿದೆ.

Advertisement

ಪಿಡಿಒ ಬಲಿಪಡೆದಿರುವ ದಂಧೆ: ಇ-ಸ್ವತ್ತು ತಂತ್ರಾಂಶವನ್ನು ಹ್ಯಾಕ್‌ಮಾಡುವ ದಂಧೆ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದು ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಪಂನಲ್ಲಿ 36 ನಕಲಿ ಖಾತೆ ಸೃಷ್ಟಿಸುವಲ್ಲಿ ಬಿಡದಿ ಸಮೀಪದ ಬೈರಮಂಗಲ ಪಿಡಿಒ ರವಿ ಎಂಬುವರ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದರು. ಹಿಂದೆ ಹಾರೋಹಳ್ಳಿ ಗ್ರಾಪಂ ಪಿಡಿಒ ಆಗಿದ್ದಾಗ ಈತ ಪಿಡಿಪ ಹಾಗೂ ಗ್ರಾಪಂ ಅಧ್ಯಕ್ಷರ ಡಾಂಗಲ್‌ ಬಳಸಿ ಅಕ್ರಮ ಇ-ಖಾತೆ ಸೃಷ್ಟಿಸಿದ್ದರು. ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆಯೇ ಇವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದರು. ಆದರೂ ಜಿಲ್ಲೆಯಲ್ಲಿ ಈ ದಂಧೆಗೆ ಮಾತ್ರ ಕಡಿವಾಣ ಬಿದ್ದಿಲ್ಲ.

ಏನಿದು ಇ-ಸ್ವತ್ತು ಸಾಫ್ಟ್‌ವೇರ್‌ ಹ್ಯಾಕಿಂಗ್‌ ದಂಧೆ: ಗ್ರಾಮಾಡಳಿತವನ್ನು ಆನ್‌ಲೈನ್‌ ಗೊಳಿಸುವ ಜೊತೆಗೆ ದಾಖಲೆಗಳನ್ನು ಡಿಜಿಟಲಿಕರಣ ಮಾಡುವ ಉದ್ದೇಶದಿಂದ 2014ರಲ್ಲಿ ಗ್ರಾಪಂಗಳ ವ್ಯಾಪ್ತಿಯ ಎಲ್ಲಾ ಸ್ವತ್ತುಗಳಿಗೆ ಇ-ಖಾತೆ ನೀಡುವಂತೆ ಪಂಚಾಯತ್‌ರಾಜ್‌ ಇಲಾಖೆ ಆದೇಶಿಸಿತ್ತು. ಅದರಂತೆ ಇ-ಖಾತೆ ಯನ್ನು ಇ-ತಂತ್ರಾಂಶದಲ್ಲಿ ನೀಡಬೇಕು ಎಂದಾದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳ ಪ್ರತಿಯನ್ನು ಅಪ್‌ಲೋಡ್‌ ಮಾಡಬೇಕು. ಸೂಕ್ತ ದಾಖಲೆಗಳನ್ನು ನೀಡದೆ ಹೋದರೆ ಅದು ಖಾತೆ ಮಾಡಿಕೊಡಲು ಅವಕಾಶ ನೀಡುವುದಿಲ್ಲ. ಇ-ಸ್ವತ್ತು ಸಾಪ್ಟ್ವೇರ್‌ನ ಮೂಲಕ ಗ್ರಾಪಂ ನಲ್ಲಿ ಸ್ವತ್ತಿನ ಇ-ಖಾತೆಗೆ ಅರ್ಜಿ ಸಲ್ಲಿಸುವ ಸಾರ್ವಜನಿಕರ ಅರ್ಜಿಯನ್ನು ನಮೂದು ಮಾಡಲಾಗುತ್ತದೆ. ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಗ್ರಾಪಂ ಕಾರ್ಯದರ್ಶಿ ಅಥವಾ ಎಸ್‌ಡಿಎ ಲಾಗಿನ್‌ಗೆ ಪರಿಶೀಲನೆಗೆ ನೀಡಲಾಗುತ್ತದೆ. ಅಗತ್ಯ ಕ್ರಮಗಳನ್ನು ಪೂರೈಸಿದಬಳಿಕ ಪಿಡಿಒ ಈ ಲಾಗಿನ್‌ನಲ್ಲಿ ಸಹಿ ಮಾಡಿ ಇ-ಖಾತೆ ಅನುಮೋದನೆಗಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಾಗಿನ್‌ಗೆ ಕಳುಹಿಸುತ್ತಾರೆ. ಕಾರ್ಯನಿರ್ವಾಹಕ ಅಧಿಕಾರಿ ದಾಖಲೆಗಳನ್ನು ಪರಿಶೀಲಿಸಿ ಲಾಗಿನ್‌ನಲ್ಲಿ ಡಿಜಿಟಲ್‌ ಸಹಿ ಮಾಡಿ ಅನುಮೋದನೆ ನೀಡದ ಬಳಿಕ ಮತ್ತೆ ಇ-ಖಾತೆಯ ದಾಖಲೆ ಪಿಡಿಒ ಲಾಗಿನ್‌ಗೆ ಮರಳುತ್ತದೆ. ಅಂತಿಮವಾಗಿ ಇ-ಖಾತೆ ಪಾರಂ ಆಗಿರುವ ನಮೂನೆ 9 ಮತ್ತು 10ಕ್ಕೆ ಸಹಿಮಾಡಿ ಪ್ರಿಂಟ್‌ಔಟ್‌ ತೆಗೆಯುವುದು ಆಯಾ ಗ್ರಾಪಂ ಪಿಡಿಓ. ಎನ್‌ ಐಸಿ(ರಾಷ್ಟ್ರೀಯ ಮಾಹಿತಿ ಕೇಂದ್ರ) ತಯಾರಿಸಿರುವ ಈ ತಂತ್ರಾಂಶಕ್ಕೆ ಪ್ರವೇಶ ಪಡೆಯಲು ಅಗತ್ಯ ವಿರುವ ಸಿಬ್ಬಂದಿ ಮತ್ತು ಅ—ಕಾರಿಗಳಿಗೆ ಲಾಗಿನ್‌ಐಡಿ ಮತ್ತು ಪಾಸ್‌ವರ್ಡ್‌ ನೀಡಲಾಗಿದೆ. ಅಲ್ಲದೆ ಅವರ ಡಿಜಿಟಲ್‌ ಸಹಿ ಹೊಂದಿರುವ ಡಾಂಗಲ್‌ ಅನ್ನು ನೀಡಲಾಗುತ್ತದೆ. ಈ ಡಾಂಗಲ್‌, ಪಾಸ್‌ವರ್ಡ್‌ ಹಾಗೂ ಐಡಿ ಬಳಸಿ ಇಸ್ವತ್ತು ತಂತ್ರಾಂಶಕ್ಕೆ ಲಾಗಿನ್‌ ಆಬೇಕು. ಗ್ರಾಪಂ ಸಿಬ್ಬಂದಿಗಳು ಎಂದಿನಂತೆ ಲಾಗಿನ್‌ ಆಗಿ ತಮ್ಮ ಕೆಲಸ ಮುಗಿಸುತ್ತಾರೆ. ಆದರೆ ಹ್ಯಾಕರ್‌ಗಳು ಯಾವುದೋ ಪಂಚಾಯ್ತಿ ಪಿಡಿಓ, ಸಿಬ್ಬಂದಿಯ ಲಾಗಿನ್‌ ಐಡಿ ಪಾಸ್‌ ವರ್ಡ್‌ಗಳನ್ನು ಬಳಸಿ ಲಾಗಿನ್‌ ಆಗಿ ಇನ್ಯಾವುದೋ ಪಂಚಾಯ್ತಿಗಳಿಗೆ ಸೇರಿದ ಇ-ಖಾತೆಯನ್ನು ಯಾರಿಗೂ ತಿಳಿಯದಂತೆ ಸೃಷ್ಟಿಸಿ, ಜನರಿಗೆ ಇ-ಖಾತೆ ಇದೆ ಎಂದು ಜಮೀನುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಾರೆ, ಇದರಿಂದಾಗಿ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು ಬೇನಾಮಿ ಇ-ಖಾತೆಗೆ ಸಾಕಷ್ಟ ಹಣವನ್ನೂ ಪಡೆಯುತ್ತಿದ್ದಾರೆ.

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next