Advertisement

DySP ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ

01:41 AM Aug 29, 2020 | Hari Prasad |

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಭಾರೀ ಕೋಲಾಹಲ ಉಂಟುಮಾಡಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮರುಜೀವ ಪಡೆದುಕೊಂಡಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿದೆ.

ಈ ಮೂಲಕ ಮಾಜಿ ಸಚಿವ ಕೆ.ಜೆ. ಜಾರ್ಜ್‌, ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಾಂತಿ, ಎ.ಎಂ. ಪ್ರಸಾದ್‌ ಅವರಿಗೆ ಮತ್ತೂಮ್ಮೆ ತನಿಖೆಯ ಉರುಳು ಸುತ್ತಿಕೊಂಡಿದೆ.

‘ಕ್ಲೀನ್‌ ಚಿಟ್‌’ ಪಡೆದಿದ್ದ ಈ ಮೂವರು ಆರೋಪಿಗಳಿಗೆ ಈಗ ಮತ್ತೂಮ್ಮೆ ತನಿಖೆ ಎದುರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಪ್ರಕರಣದ ತನಿಖೆ ನಡೆಸಿ ಸಿಬಿಐ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಪ್ರಶ್ನಿಸಿ ಮೃತ ಡಿವೈಎಸ್ಪಿ ಗಣಪತಿ ತಂದೆ ಕುಶಾಲಪ್ಪ ಮತ್ತು ಕುಟುಂಬದ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ‘ಬಿ’ ರಿಪೋರ್ಟ್‌ ರದ್ದುಪಡಿಸಿ, ಪ್ರಕರಣದ ಮರು ತನಿಖೆಗೆ ಸೂಚಿಸಿದ್ದಾರೆ.

Advertisement

ಈ ಸಂಬಂಧ ಕೆ.ಜೆ. ಜಾರ್ಜ್‌, ಪ್ರಣವ್‌ ಮೊಹಾಂತಿ, ಎ.ಎಂ. ಪ್ರಸಾದ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿರುವ ನ್ಯಾಯಾಲಯವು, ಸೆ. 28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅರ್ಜಿದಾರರ ಪರ ವಕೀಲ ಪವನ್‌ಚಂದ್ರ ಶೆಟ್ಟಿ ವಾದ ಮಂಡಿಸಿದರು.

ಮಡಿಕೇರಿಯ ಡಿವೈಎಸ್ಪಿ ಆಗಿದ್ದ ಗಣಪತಿ 2016ರ ಜು. 7ರಂದು ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಮುನ್ನ ಟಿ.ವಿ. ಸಂದರ್ಶನದಲ್ಲಿ ತನ್ನ ಸಾವಿಗೆ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್‌, ಹಿರಿಯ ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಾಂತಿ, ಎ.ಎಂ. ಪ್ರಸಾದ್‌ ಕಾರಣ ಎಂದು ಆರೋಪಿಸಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದು ಜಾರ್ಜ್‌ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು.

ಕುಟುಂಬಸ್ಥರ ಕಾನೂನು ಹೋರಾಟ!
ನ್ಯಾಯಾಂಗ ತನಿಖಾ ಹಂತದಲ್ಲಿಯೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಕುಟುಂಬಸ್ಥರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಸಿಬಿಐ ತನಿಖೆಗೆ ಆದೇಶಿಸಿತ್ತು.

ಹೀಗಾಗಿ ಜಾರ್ಜ್‌ ಸಹಿತ ಮೂವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸಿಬಿಐ, ಅಂತಿಮವಾಗಿ ಗಣಪತಿ ಅವರ ಸಾವಿಗೆ ಜಾರ್ಜ್‌, ಮೊಹಾಂತಿ, ಎ.ಎಂ. ಪ್ರಸಾದ್‌ ಕಾರಣರಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಈ ಸಂಬಂಧ ಕಳೆದ ವರ್ಷ ನ್ಯಾಯಾಲಯಕ್ಕೆ “ಬಿ’ ರಿಪೋರ್ಟ್‌ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next