ಕೆ.ಆರ್.ಪೇಟೆ: ಭಾರತದಲ್ಲಿ ತಾತನ ಜೊತೆ ಮೊಮ್ಮಕ್ಕಳು ಪಾರ್ಲಿಮೆಂಟ್‌ಗೆ ಹೋಗುವುದು ಹೆಮ್ಮೆ. ಅದರಲ್ಲಿ ತಪ್ಪೇನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.
ಪಟ್ಟಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಬಹಳ ಜನ ವಂಶ ರಾಜಕಾರಣ ಎಂದು ಜೆಡಿಎಸ್‌ನ್ನು ಟೀಕಿಸುತ್ತಿದ್ದು, ವಂಶ ರಾಜಕಾರಣ ಜಗತ್ತಿನ ಎಲ್ಲ ದೇಶದಲ್ಲಿಯೂ ಇದೆ. ಅಲೆನಿಯಾ ದೇಶದಲ್ಲಿ 50 ವರ್ಷದಿಂದ ಒಂದೇ ಕುಟುಂಬ ಆಡಳಿತ ನಡೆಸುತ್ತಿದೆ. ಲಾಲೂಪ್ರಸಾದ್ ಯಾದವ್, ಕರುಣಾನಿಧಿ ಸೇರಿದಂತೆ ಹಲವರು ವಂಶರಾಜಕಾರಣ ಮಾಡುತ್ತಿದ್ದಾರೆ. ಪ್ರಜ್ವಲ್, ನಿಖೀಲ್ ಹಾಗೂ ದೇವೇಗೌಡರು ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.
ಸುಮಲತಾ ಬಿಜೆಪಿ ಅಭ್ಯರ್ಥಿ: ಭಾರತದಲ್ಲಿ ಎರಡು ತತ್ವಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ನಕಲಿ ರಾಷ್ಟ್ರವಾದಿಗಳು ಹಾಗೂ ಬಹುತ್ವವಾದಿಗಳ ತತ್ವದಲ್ಲಿ ಚುನಾವಣೆ ನಡೆಯುತ್ತಿದೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದರೆ ದೇಶಪ್ರೇಮಿಗಳು, ತೆಗಳಿದರೆ ದ್ರೋಹಿಗಳು ಎಂಬಂತಾಗಿದೆ. ಬಿಜೆಪಿಯವರು ಮಂಡ್ಯ ಬಜೆಟ್ ಅಂದರು. ಇವತ್ತು ಹಿಮ್ಮೇಳದಿಂದ ಸುಮಲತಾ ಅವರನ್ನು ಬಿಟ್ಟಿದ್ದಾರೆ. ಸುಮಲತಾ ಸ್ವತಂತ್ರ ಅಭ್ಯರ್ಥಿಯಲ್ಲ, ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದರು. ಕರ್ನಾಟಕಕ್ಕೆ ಏನು ಕೊಟ್ರಿ ಮೋದಿ. ಕುಮಾರಸ್ವಾಮಿ ಸರ್ಕಾರ ಬಂದ ನಂತರ ಕರ್ನಾಟಕಕ್ಕೆ ನರೇಗಾದಲ್ಲಿ ಹಣ ಬಿಡುಗಡೆಯಾಗಿಲ್ಲ. ಉದ್ಯೋಗ ಕೊಡುತ್ತೀನಿ ಎಂದು ಹೇಳಿ ಉದ್ಯೋಗ ಕಿತ್ತುಕೊಳ್ಳುತ್ತಿದ್ದೀರಿ ಎಂದು ಟೀಕಿಸಿದರು.
ಅಂಬಿ ಬಿಜೆಪಿಗೆ ಕೈ ಜೋಡಿಸಿರಲಿಲ್ಲ: ಅಂಬರೀಶ್- ಕುಮಾರಸ್ವಾಮಿ ಕುಟುಂಬ ಎಷ್ಟು ಚೆನ್ನಾಗಿತ್ತು. ಅವರು ಅಗಲಿದ ಸಮಯದಲ್ಲಿ ಮುಖ್ಯಮಂತ್ರಿಗಳು ಬಹಳ ಗೌರವಯುತವಾಗಿ ಕಳುಹಿಸಿಕೊಟ್ಟರು. ಅಂಬರೀಶ್ ಸಮಾಧಿಗೆ ವರನಟ ಡಾ.ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ಜಾಗ ಮಾಡಿಕೊಟ್ಟರು. ಆದರೆ, ಇವತ್ತು ಕೆಲವರು ಸೇರಿಕೊಂಡು ಎರಡು ಕುಟುಂಬದ ನಡುವೆ ವಿಷ ಬೀಜ ಬಿತ್ತಿದರು. ಆ ವಿಷಬೀಜ ಬಿತ್ತಿದ್ದು ಯಾರೆಂದು ನಿಮಗೆಲ್ಲರಿಗೂ ಗೊತ್ತು ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು. ಅಂಬರೀಶ್ ಎಂದೂ ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿರಲಿಲ್ಲ. ಆದರೆ, ಇಂದು ಅಂಬಿ ಕುಟುಂಬ ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ. ಅಂತಹ ಸನ್ನಿವೇಶವನ್ನು ಕೆಲವು ಕುಹಕಿಗಳು ಮಾಡಿಬಿಟ್ಟರು. ಅಂಬರೀಶ್ ಕುಟುಂಬ ಬಿಜೆಪಿಗೆ ಶರಣಾಗಿದ್ದನ್ನು ಯಾರೂ ಕ್ಷಮಿಸುವ ಹಾಗಿಲ್ಲ ಎಂದರು.
ಮತ್ತೆ ಭಾರತದಲ್ಲಿ ಮೈತ್ರಿ ಪಕ್ಷ ಬರುತ್ತೆ ಎನ್ನಲಾಗುತ್ತಿದೆ. ಹಾಗೇನಾದರೂ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂದರೆ ದೇವೇಗೌಡರಿಗೆ ಪ್ರಧಾನಿಯಾಗುವ ಅವಕಾಶವಿದೆ. ಎಲ್ಲಾ ಪ್ರಾಂತೀಯ ಪಕ್ಷಗಳು ರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುವ ಅನಿವಾರ್ಯತೆ ಬಂದಿದ್ದು, ಈ ಅನಿವಾರ್ಯತೆಯಲ್ಲಿ ದೇವೇಗೌಡರು ಪ್ರಧಾನಿಯಾಗುವುದನ್ನು ಯಾರೂ ಇಲ್ಲ ಎನ್ನಲಾಗುವುದಿಲ್ಲ ಎಂದು ಹೇಳಿದರು.