ಕೋಲ್ಕತ್ತಾ: ಹಾಲಿ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಮೆಂಟರ್ ಆಗಿದ್ದ ಗೌತಮ್ ಗಂಭೀರ್ (Gautam Gambhir) ಅವರು ಇದೀಗ ಭಾರತ ತಂಡದ ಕೋಚ್ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗಂಭೀರ್ ಅವರಿಂದ ಕೆಕೆಆರ್ ತಂಡದಲ್ಲಿ ತೆರವಾದ ಸ್ಥಾನಕ್ಕೆ ಯಾರು ಬರಬಹುದು ಎನ್ನುವ ವಿಚಾರ ಕಳೆದ ಕೆಲವು ಸಮಯದಿಂದ ಚರ್ಚೆಯಲ್ಲಿತ್ತು. ಹಲವು ಹೆಸರುಗಳು ಈ ಹುದ್ದೆಗೆ ಕೇಳಿ ಬಂದಿತ್ತು. ಇದೀಗ ಕೋಲ್ಕತ್ತಾ ಫ್ರಾಂಚೈಸಿ ಟಿ20 ಕ್ರಿಕೆಟ್ ದಿಗ್ಗಜನನ್ನು ಇದಕ್ಕೆ ನೇಮಕ ಮಾಡಿದೆ.
ಗುರುವಾರವಷ್ಟೇ ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕೆರಿಬಿಯನ್ ಟಿ20 ದಿಗ್ಗಜ ಡ್ವೇನ್ ಬ್ರಾವೋ (Dwayne Bravo) ಅವರು ಕೆಕೆಆರ್ ಮೆಂಟರ್ ಆಗಿ ನೇಮಕವಾಗಿದ್ದಾರೆ.
ಈ ಮೂಲಕ ಬ್ರಾವೋ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಜೊತೆಗಿನ ಪಯಣವನ್ನು ಮುಗಿಸಿದ್ದಾರೆ. ಸಿಎಸ್‌ಕೆ ಪರವಾಗಿ ಹಲವಾರು ಸೀಸನ್ ಆಡಿದ್ದ ಬ್ರಾವೋ ಕಳೆದ ಸೀಸನ್ ನಲ್ಲಿ ತಂಡದ ಬೌಲಿಂಗ್ ಕೋಚ್ ಆಗಿದ್ದರು.
ಬ್ರಾವೋ ಅವರು ಐಪಿಎಲ್ ಮಾತ್ರವಲ್ಲದೆ ಕೆರಿಬಿಯನ್ ಪ್ರೀಮಿಯರ್ ಲೀಗ್, ಯುನೈಟೆಡ್ ಸ್ಟೇಟ್ಸ್‌ನ ಮೇಜರ್ ಲೀಗ್ ಕ್ರಿಕೆಟ್ ಮತ್ತು ಯುಎಇಯಲ್ಲಿನ ಐಎಲ್‌ಟಿ 20 ನಲ್ಲಿ ನೈಟ್ ರೈಡರ್ಸ್‌ನ ಇತರ ಎಲ್ಲಾ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಖಚಿತಪಡಿಸಿದ್ದಾರೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಮಾತ್ರ ಆಡಿದ್ದರೂ, ನಾಲ್ಕು ಬಾರಿ ಐಪಿಎಲ್ ವಿಜೇತ ಬ್ರಾವೋ ನೈಟ್ ರೈಡರ್ಸ್‌ನೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ. ಅವರ ಸಿಪಿಎಲ್ ವೃತ್ತಿಜೀವನದ ಬಹುಪಾಲು ಸಮಯ ಅವರು ಟ್ರಿನ್‌ಬಾಗೊ ನೈಟ್ ರೈಡರ್ಸ್‌ನೊಂದಿಗೆ ಆಡಿದ್ದಾರೆ.