ಮಂಜುನಾಥ ಮಹಾಲಿಂಗಪುರ
ಕುಷ್ಟಗಿ: ಪ್ರಾದೇಶಿಕ ವಲಯ ಅರಣ್ಯ ಇಲಾಖೆ ರಸ್ತೆ ಬದಿ ನೆಡುತೋಪಿನ ಗಿಡಗಳು ಬೇಸಿಗೆಯಲ್ಲಿ ನೀರಿಲ್ಲದೇ ಒಣಗುವುದನ್ನು ತಪ್ಪಿಸಲು ಹಾಗೂ ಗಿಡಗಳ ಸಂರಕ್ಷಣೆಗೆ ಸ್ಥಳೀಯ ದ್ವಾರಕಾಮಯಿ ಸೇವಾ ಟ್ರಸ್ಟ್ ಯುವಕರು ನಿಸ್ವಾರ್ಥ ಸೇವೆಗೆ ಮುಂದಾಗಿದ್ದಾರೆ.
ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕುಷ್ಟಗಿ ಸಂಪರ್ಕಿಸುವ ವಿವಿಧ ಮಾರ್ಗದಲ್ಲಿ ವಿವಿಧ ಯೋಜನೆಗಳಲ್ಲಿ ಸಸಿಗಳನ್ನು ನೆಟ್ಟಿದೆ. ಬೇಸಿಗೆ ಹಂತದಲ್ಲಿ ಈ ನೆಡುತೋಪಿನ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಕೊರತೆಯಿಂದ ಈ ಹಂತದಲ್ಲಿ ನಿರ್ವಹಿಸುವುದು ಸಹ ಕಷ್ಟ ಸಾಧ್ಯವಾಗುತ್ತಿದೆ. ಈ ಸಂದರ್ಭದಲ್ಲಿ ಸ್ಥಳೀಯ ದ್ವಾರಕಾಮಯಿ ಸೇವಾ ಟ್ರಸ್ಟ್‌ನ ಸಮಾನ ಮನಸ್ಕ ಯುವಕರು, ಸ್ವಯಂ ಪ್ರೇರಣೆಯಿಂದ ಅರಣ್ಯ ಇಲಾಖೆ ನೆಟ್ಟ ಗಿಡಗಳಿಗೆ ಬಿಸಿಲು ಲೆಕ್ಕಿಸದೇ ನೀರುಣಿಸುತ್ತಿದ್ದಾರೆ.
ಈಗಾಗಲೇ ಕೊಪ್ಪಳ ರಸ್ತೆ ಪಕ್ಕದ ಗಿಡಗಳಿಗೆ ನೀರುಣಿಸಿದ್ದು, ಇದೀಗ ಗಜೇಂದ್ರಗಡ ರಸ್ತೆಯಲ್ಲಿನ ಗಿಡಗಳಿಗೆ ನೀರುಣಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರತಿ ಟ್ಯಾಂಕರ್‌ನಿಂದ 25 ಗಿಡಗಳಿಗೆ ನೀರುಣಿಸಲಾಗುತ್ತಿದ್ದು, ದಿನಕ್ಕೆ ನಾಲ್ಕು ಟ್ಯಾಂಕರ್ ನೀರು ಬಳಕೆಯಾಗುತ್ತಿವೆ. ಒಂದು ಟ್ಯಾಂಕರ್‌ಗೆ 350 ರೂ. ನಂತೆ ನಿತ್ಯ 1,400 ರೂ. ವೆಚ್ಚವನ್ನು ಟ್ರಸ್ಟ್ ಬಳಗದ ಕೃಷ್ಣ ಕಂದಕೂರು, ಸತ್ಯನಾರಾಯಣ ಕಂದಗಲ್, ರಾಜು ಕತ್ರಿ, ಹನುಮೇಶ ಕಂದಕೂರು, ಶ್ರೀಕಾಂತ್ ಮೊದಲಾದವರು ತಾವೇ ಭರಿಸುತ್ತಿದ್ದು, ಈ ಸೇವೆಯಿಂದ ಸಂತೃಪ್ತಿ ಕಾಣುತ್ತಿದ್ದಾರೆ.
ಪರಿಸರ ಪ್ರೇಮಿ ಕೃಷ್ಣ ಕಂದಕೂರು ಮಾತನಾಡಿ, ಬೇಸಿಗೆಯಲ್ಲಿ ರಸ್ತೆ ಬದಿಯ ಗಿಡಗಳು ನೀರಿಲ್ಲದೇ ಒಣಗುತ್ತಿವೆ. ಅದರಲ್ಲೂ ಸಣ್ಣ ಗಿಡಗಳಿಗೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ನಾವೇ ಸ್ನೇಹಿತರು ಸ್ವಂತ ವೆಚ್ಚದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡಲು ಸಿದ್ಧರಿದ್ದೇವೆ. ಗಿಡಗಳಿಗೆ ನೀರುಣಿಸುವ ಮೊದಲಿಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ, ರಸ್ತೆ ಬದಿಯ ಗಿಡಗಳಿಗೆ ಪಾತಿ ಮಾಡುವುದು, ಕಸ ತೆರವುಗೊಳಿಸುವುದು, ಬಿದ್ದ ಗಿಡಗಳನ್ನು ನಿಲ್ಲಿಸಲು ಕೇಳಿಕೊಂಡಿದ್ದಕ್ಕೆ ವನಪಾಲಕರು, ಆ ಕೆಲಸ ನಿರ್ವಹಿಸಿದ್ದಾರೆ. ನಾವು ಗಿಡಗಳಿಗೆ ನೀರುಣಿಸುತ್ತಿದ್ದೇವೆ ಎಂದರು.