ಬೆಂಗಳೂರು: ಕೇಂದ್ರ ಸಚಿವ ಸದಾನಂದಗೌಡ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅನರ್ಹ ಶಾಸಕರನ್ನು ಅಳಿಯ ಹಾಗೂ ಸೊಸೆಯಂದಿರಿಗೆ ಹೋಲಿಕೆ ಮಾಡಿ, ಅವಮಾನ ಮಾಡಿದ್ದು ಇಬ್ಬರೂ ನಾಯಕರು ಅಳಿಯಂದಿರು ಹಾಗೂ ಸೊಸೆಯಂದಿರ ಕ್ಷಮೆ ಕೋರಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವರಾದ ಈಶ್ವರಪ್ಪ ಅನರ್ಹರನ್ನು ಬಿಜೆಪಿ ಮನೆಗೆ ಬಂದಿರುವ ಅಳಿಯಂದಿರು ಎಂದಿ ದ್ದಾರೆ. ಯಾವ “ಅಳಿಯಂದಿರು’ ತಮ್ಮ ಮನೆ ಹಾಗೂ ಮಾವನ ಮನೆ ಹಾಳು ಮಾಡಬೇಕೆಂದು ಬಯ ಸುವುದಿಲ್ಲ. ಅದೇ ರೀತಿ ಕೇಂದ್ರ ಸಚಿವ ಸದಾನಂದಗೌಡ “ಸೊಸೆಯಂದಿರು’ ಎಂದಿದ್ದಾರೆ. ಈ ಮೂಲಕ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ. ಯಾವ ಹೆಣ್ಣು ಮಗಳೂ ಅತ್ತೆ ಮನೆಗೆ ಯಾವತ್ತೂ ದ್ರೋಹ ಮಾಡಲ್ಲ.
ಎರಡೂ ಮನೆ ಚೆನ್ನಾಗಿರಲಿ ಅಂತ ಬಯಸುತ್ತಾರೆ. ಹೀಗಾಗಿ ಇಬ್ಬರೂ ನಾಯಕರು ಅಳಿಯಂದಿರು ಹಾಗೂ ಸೊಸೆಯಂದಿರ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು. ಯಡಿಯೂರಪ್ಪ ಅವರು ಮೂರು ಬಿಟ್ಟವರು ಊರಿಗೆ ದೊಡ್ಡವರು ಅನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಯಾಕೆ ಮೈತ್ರಿ ಮಾಡಬಾರದು?: ಇದೇ ವೇಳೆ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ಕಾಂಗ್ರೆಸ್‌ನವರು ಸರ್ವೇ ಜನ ಸುಖೀನೋ ಭವಂತು ಎನ್ನುವ ತತ್ವದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಬಿಜೆಪಿಯವರದ್ದು ಹಿಂದುತ್ವ ಅಲ್ಲ , ಮತೀಯವಾದ. ಮಹಾರಾಷ್ಟ್ರದಲ್ಲಿ ಶಿವಸೇನೆಯವರು ಬಿಜೆಪಿಯ ಮತೀಯವಾದ, ವಿತಂಡವಾದವನ್ನು ವಿರೋಧಿಸಿ ಹೊರಗೆ ಬಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರ ರಚನೆಗೆ ಮುಂದಾದರೆ, ಅದನ್ನು ಬಿಜೆಪಿಯವರು ವಿರೋಧಿಸುತ್ತಾರೆ. ಕಾಶ್ಮೀರದಲ್ಲಿ ಪಿಡಿಪಿ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಬಹುದು, ಆದರೆ ನಾವು ಶಿವಸೇನೆ ಜತೆ ಯಾಕೆ ಮಾಡಿಕೊಳ್ಳಬಾರದು ಎಂದು ಪ್ರಶ್ನಿಸಿದರು.