Advertisement

5 ಜಿಪಂ ಸ್ಥಾನ ಹೆಚ್ಚಳ-17 ತಾಪಂ ಕ್ಷೇತ್ರ ಕಡಿಮೆ

03:18 PM Feb 13, 2021 | Team Udayavani |

ದಾವಣಗೆರೆ: ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಕ್ಷೇತ್ರಗಳ ಪುನರ್‌ ರಚನೆಗೆ ಮುಂದಾಗಿದ್ದು, ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ ಹೊಸದಾಗಿ 5  ಜಿಲ್ಲಾ ಪಂಚಾಯತ್‌ ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿವೆ. 17 ತಾಪಂ ಕ್ಷೇತ್ರಗಳು ಕಡಿಮೆ ಆಗಲಿವೆ.

Advertisement

ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಕ್ಷೇತ್ರಗಳ ಪುನರ್‌ ರಚನೆ ಮಾಡಲಿದೆ. ಫೆ. 20 ರಂದು ದಾವಣಗೆರೆ ಜಿಲ್ಲೆಯ ಚುನಾವಣಾ ತಹಶೀಲ್ದಾರ್‌ ಮತ್ತು ಸಿಬ್ಬಂದಿ ಕ್ಷೇತ್ರಗಳ ಪುನರ್‌ ರಚನೆಗೆ ಸಂಬಂಧಿಸಿದಂತೆ ಆಗತ್ಯ ದಾಖಲೆಗಳೊಂದಿಗೆ ಚುನಾವಣಾ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

5 ಜಿಪಂ ಕ್ಷೇತ್ರ ಹೆಚ್ಚಳ: 2016 ರಲ್ಲಿ 36 ಜಿಪಂ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಹರಪನಹಳ್ಳಿ ತಾಲೂಕಿನ 7 ಸದಸ್ಯರು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಯಾದ ಕಾರಣ ಈಗ ಜಿಪಂನ ಸದಸ್ಯತ್ವ ಬಲ 29 ಇದೆ. ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಪುನರ್‌ ರಚನೆಯಂತೆ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಸ್ಥಾನ 29 ರಿಂದ 34ಕ್ಕೆ ಏರಲಿದೆ.

ದಾವಣಗೆರೆ, ಹರಿಹರ, ಜಗಳೂರು, ಚನ್ನಗಿರಿ ತಲಾ ಒಂದು ಕ್ಷೇತ್ರ ಹೆಚ್ಚಳವಾಗಲಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿದ್ದ ನ್ಯಾಮತಿ 2018 ರಲ್ಲಿ ಹೊಸ ತಾಲೂಕಾಗಿ ಅಸ್ತಿತ್ವಕ್ಕೆ ಪರಿಣಾಮ ಹೊನ್ನಾಳಿ  ತಾಲೂಕಿನಲ್ಲಿ 4 ಮತ್ತು ನ್ಯಾಮತಿ ತಾಲೂಕಿಗೆ 3 ಜಿಲ್ಲಾ ಪಂಚಾಯತ್‌ ಕ್ಷೇತ್ರಗಳು ದೊರೆಯಲಿವೆ. ನ್ಯಾಮತಿ ತಾಲೂಕು ಕೇಂದ್ರವಾಗಿರುವ ಕಾರಣಕ್ಕೆ ಜಿಲ್ಲಾ ಪಂಚಾಯತ್‌ ಕ್ಷೇತ್ರ ರದ್ದಾಗಲಿದೆ.

ರಾಜ್ಯ ಚುನಾವಣಾ ಆಯೋಗ ಜನಸಂಖ್ಯೆ ಆಧಾರದಲ್ಲಿ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ನಿಗದಿಪಡಿಸಿರುವಂತೆ ದಾವಣಗೆರೆ ತಾಲೂಕಿನಲ್ಲಿ 8, ಹರಿಹರದಲ್ಲಿ 5, ಜಗಳೂರಿನಲ್ಲಿ 5, ಚನ್ನಗಿರಿಯಲ್ಲಿ 9, ಹೊನ್ನಾಳಿಯಲ್ಲಿ 4, ನ್ಯಾಮತಿಯಲ್ಲಿ 4 ಜಿಲ್ಲಾ ಪಂಚಾಯತ್‌ ಕ್ಷೇತ್ರಗಳು ಇರಲಿವೆ. ಹೊಸ ಜಿಲ್ಲಾ ಪಂಚಾಯತ್‌ ಕ್ಷೇತ್ರ ಮತ್ತು ಕಡಿಮೆ ಆಗಲಿರುವ ತಾಲೂಕು ಪಂಚಾಯತ್‌ ಕ್ಷೇತ್ರಗಳು ಯಾವುವು ಎಂಬುದರ ಸ್ಪಷ್ಟ ಚಿತ್ರಣ ಫೆ.20ರ ಸಭೆಯ ನಂತರವೇ ದೊರೆಯಲಿದೆ.

Advertisement

17 ಸ್ಥಾನ ಕಡಿಮೆ: 2016 ರಲ್ಲಿ ಜಿಲ್ಲೆಯ 117 ತಾಲೂಕು ಪಂಚಾಯತ್‌ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಆಯೋಗ ನಿಗದಿಪಡಿಸಿರುವಂತೆ ಈಗ ತಾಲೂಕು ಪಂಚಾಯತ್‌ ಕ್ಷೇತ್ರಗಳ ಸಂಖ್ಯೆ 90. ಕಳೆದ ಬಾರಿಗಿಂತಲೂ 17 ಕ್ಷೇತ್ರ ಕಡಿಮೆ ಆಗಲಿವೆ. ದಾವಣಗೆರೆ ತಾಲೂಕಿನಲ್ಲಿ 5, ಹರಿಹರದಲ್ಲಿ 3, ಜಗಳೂರಿನಲ್ಲಿ 3, ಚನ್ನಗಿರಿ ತಾಲೂಕಿನಲ್ಲಿ 6 ತಾಪಂ ಕ್ಷೇತ್ರಗಳು ಕಡಿಮೆ ಆಗಲಿವೆ. ಹೊನ್ನಾಳಿ ತಾಪಂ ಒಟ್ಟಾರೆ 22 ಸದಸ್ಯತ್ವ ಬಲ ಹೊಂದಿತ್ತು. ನ್ಯಾಮತಿ ತಾಪಂ ಆಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ 11 ಕ್ಷೇತ್ರಗಳು ನ್ಯಾಮತಿಗೆ ಸೇರ್ಪಡೆಯಾಗಿವೆ. ಈಗ ಹೊನ್ನಾಳಿ ಮತ್ತು ನ್ಯಾಮತಿ ತಾಪಂ ತಲಾ 11 ಕ್ಷೇತ್ರ ಹೊಂದಿವೆ. ಹೊನ್ನಾಳಿ ಮತ್ತು ನ್ಯಾಮತಿ ತಾಪಂ ಕ್ಷೇತ್ರಗಳಲ್ಲಿ ಬದಲಾವಣೆ ಆಗಿಲ್ಲ.

ಪಕ್ಷಗಳ ಲೆಕ್ಕಾಚಾರ: ಮೇ ತಿಂಗಳಲ್ಲಿ ಜಿಲ್ಲಾ ಮತ್ತು ತಾಪಂ ಅವಧಿ ಮುಕ್ತಾಯವಾಗಲಿದೆ. ಚುನಾವಣಾ ಆಯೋಗ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿರುವಂತೆ ಎಲ್ಲಾ ರಾಜಕೀಯ ಪಕ್ಷಗಳು ಸಹ ಜಿಲ್ಲಾ ಮತ್ತು ತಾಪಂ ಚುನಾವಣೆಯತ್ತ ಗಮನ ಹರಿಸಿವೆ. ವಿಧಾನಸಭೆ, ಲೋಕಸಭಾ ಚುನಾವಣೆ ಫಲಿತಾಂಶ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ಪಕ್ಷಗಳು ಜಿಪಂನಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆ ಹೊಂದಿರುತ್ತವೆ. ಹೊಸದಾಗಿ 5 ಜಿಪಂ ಕ್ಷೇತ್ರಗಳು  ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಚುನಾವಣೆ ರಂಗೇರಲಿದೆ.

ತಾಪಂ ರದ್ಧತಿ ವಿಚಾರ ಚರ್ಚೆಯಲ್ಲಿ ಇರುವ ಸಂದರ್ಭದಲ್ಲೇ ಚುನಾವಣಾ ಆಯೋಗ ತಾಪಂ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿರುವುದು ಸ್ಪರ್ಧಾಕಾಂಕ್ಷಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next