ಕಲಬುರಗಿ: ಪಾಲಿಕೆ ಸದಸ್ಯರಾಗಿದ್ದ ದಿ| ಡಿ.ವಿ.ಪಾಟೀಲಸಮಾಜಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣಾರ್ಥ ನಗರದ ವೃತ್ತವೊಂದಕ್ಕೆ ಅವರ ಹೆಸರಿಡುವ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಮೇಯರ್ ಶರಣಕುಮಾರ ಮೋದಿ ತಿಳಿಸಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯಿಂದ ಮರೆಯಲಾಗದ ಮಹಾನುಭಾವರು ಮಾಲಿಕೆಯಡಿಯಲ್ಲಿ ಲಿಂ| ಡಿ.ವಿ.ಪಾಟೀಲರ ಸ್ಮರಣಾರ್ಥ ನಗರದ ವೀರಶೈವ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಜಾತೀಯತೇ ಮೀರಿದ್ದೆ ಶರಣ ಸಂಸ್ಕೃತಿ ಚಿಂತನಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಜಾತಿ, ಧರ್ಮಕ್ಕೆ ವಿಶೇಷ ಕೊಡುಗೆ ನೀಡಿದ್ದ ಡಿ.ವಿ.ಪಾಟೀಲ ಅವರ ವ್ಯಕ್ತಿತ್ವ ಇಂದಿನ ಯುವಕರಿಗೆ ಪ್ರೇರಣೆಯಾಗಲಿ ಎಂದರು. ಜಾತೀಯತೆ ಮೀರಿದ್ದೇ ಶರಣ ಸಂಸ್ಕೃತಿ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ, ಬಸವಾದಿ ಶರಣರು ಸ್ಥಾಪಿಸಿದ ಶರಣ ಸಂಸ್ಕೃತಿಯಲ್ಲಿ ಜಾತಿ ಮುಖ್ಯವಾಗಿರಲಿಲ್ಲ.
ಅವರ ಸಾಧನೆ ಮುಖ್ಯವಾಗಿತ್ತು.ಅನುಭವ ಮಂಟಪದಲ್ಲಿ ಎಲ್ಲಾ ಜಾತಿಯವರಿಗೆ ಪ್ರವೇಶಾವಕಾಶ ನೀಡಿ, ಅಂತರ್ಜಾತಿ ವಿವಾಹ ಮಾಡಿಸಿದ ಬಸವಣ್ಣನವರು ಕ್ರಾಂತಿಕಾರಕ ಮನೋಭಾವನೆಯ ಪ್ರತೀಕವಾಗಿದ್ದರು ಎಂದರು. ವಚನ ಚಳವಳಿ ನೇತಾರ ಬಸವಣ್ಣನವರಿಗೆ ಜಾತಿ ಪದ್ಧತಿ ನಿರ್ಮೂಲನೆಯೇ ಸಾಮಾಜಿಕ ಪ್ರಜ್ಞೆಯಾಗಿತ್ತು.
ಕಾಯಕ, ದಾಸೋಹ ಸಿದ್ಧಾಂತ ಬೋಧಿಸಿ ಅದರಂತೆ ಬದುಕಿದ ಶರಣರು, ಜಾತಿಯ ಬದಲಾಗಿ ಕಾಯಕಗಳಿಗೆ ಮಹತ್ವ ಕೊಟ್ಟು ವೃತ್ತಿಗೆ ಗೌರವ ತಂದುಕೊಟ್ಟರು ಎಂದರು. ಜಿ.ಪಂ.ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ,ಜಿ.ಪಂ.ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ ಮಾತನಾಡಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ಸುಶೀಲಾಬಾಯಿ ಡಿ.ವಿ.ಪಾಟೀಲ ಇದ್ದರು, ಡಾ| ಪ್ರೇಮಾ ಅಪಚಂದ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಅಂಡಗಿ ನಿರೂಪಿಸಿದರು. ಶ್ರೀಕಾಂತಗೌಡ ಪಾಟೀಲ ತಿಳಗೂಳ ಸ್ವಾಗತಿಸಿದರು.
ಜಂಬನಗೌಡ ಶೀಲವಂತರ, ಬಸವಲಿಂಗಪ್ಪ ಅಲ್ಲಾಳ, ಶಿವರಾಯ ಬಳಗಾನೂರ, ಡಾ| ನಾಗರತ್ನ ದೇಶಮಾನ್ಯ, ವಿನೋದ ಜನವರಿ, ಮಲ್ಲಿನಾಥ ದೇಶಮುಖ, ಮಹಾಂತೇಶ ಪಾಟೀಲ, ಶಾಂತು ಖ್ಯಾಮಾ, ಶಿವಶಂಕರ ಕಲಶೆಟ್ಟಿ, ಜಿ.ಬಿ. ಹೀರಾಪೂರ, ಸಿದ್ದರಾಮ ತಾವರಖೇಡ, ಹಣಮಂತರಾಯ ಅಟ್ಟೂರ, ಪ್ರಶಾಂತ ಗುಡ್ಡಾ, ಸಿದ್ದರಾಮ ಹೊನ್ಕಲ್, ಸುಭಾಷ ಚಕ್ರವರ್ತಿ, ನೀಲಾಂಬಿಕಾ ಚೌಕಿಮಠ ಹಾಗೂ ಇತರರಿದ್ದರು.