Advertisement

ಕರ್ತವ್ಯ ಲೋಪ : 8 ಪಿಡಿಓಗಳ ಅಮಾನತು

07:50 PM Apr 20, 2021 | Team Udayavani |

ಕೊಪ್ಪಳ : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕಾಗಿ ಡಿಸಿ, ಸಿಇಒ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ನಿಯಂತ್ರಣಾ ಸಭೆಗೆ ಗೈರು ಹಾಜರಾದ 5 ಪಿಡಿಓಗಳು ಮತ್ತು ಹಣಕಾಸು ವಹಿವಾಟಿನಲ್ಲಿ ಕರ್ತವ್ಯ ಲೋಪ ಎಸಗಿದ ಓರ್ವ ಹಾಗೂ ಸರ್ಕಾರದ ಆದೇಶ ಪಾಲಿಸದ ಇಬ್ಬರು ಪಿಡಿಓ ಸೇರಿದಂತೆ ಒಟ್ಟು ಎಂಟು ಪಿಡಿಓಗಳನ್ನು ಕೊಪ್ಪಳ ಜಿಪಂ ಸಿಇಒ ರಘುನಂದನ್ ಮೂರ್ತಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಎರಡನೇ ಅಲೆಯ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿವೆ.

Advertisement

ಈ ಹಿನ್ನೆಲೆಯಲ್ಲಿ ಡಿಸಿ ಹಾಗೂ ಸಿಇಒ ಅವರ ಅಧ್ಯಕ್ಷತೆಯಲ್ಲಿ ಗ್ರಾಪಂ ಪಿಡಿಓಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಈ ಪೈಕಿ ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಪಂ ಪಿಡಿಓ ಬಸವರಾಜ ಕಿರ್ದಿ, ಇಂದರಗಿ ಗ್ರಾಪಂನ ಬಿ.ಕೃಷ್ಣಾರಡ್ಡಿ, ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಪಿಡಿಓ ಜುಮಾಲ್ ಸಾಬ, ಕುಕನೂರು ತಾಲೂಕಿನ ಯರೆಹಂಚಿನಾಳ ಗ್ರಾಪಂ ಪಿಡಿಓ ಮಹೇಶಗೌಡ, ಕುಷ್ಟಗಿ ತಾಲೂಕಿನ ಕೇಸೂರು ಗ್ರಾಪಂನ ನಾಗರತ್ನಾ ಅವರು ಸಭೆಗೆ ಗೈರು ಹಾಜರಾಗಿ ನಿರ್ಲಕ್ಷ ತೋರಿದ್ದರು. ಅಲ್ಲದೇ ಸಭೆಗೆ ಗೈರು ಹಾಜರಾದ ಕುರಿತಂತೆ ಸಿಇಒ ನೊಟೀಸ್ ನೀಡಿದ್ದರೂ ಅದಕ್ಕೆ ಸಮರ್ಪಕ ಉತ್ತರ ಕೊಡದ ಹಿನ್ನೆಲೆಯಲ್ಲಿ ಐವರನ್ನು ಕರ್ತವ್ಯ ನಿರ್ಲಕ್ಷತನ ತೋರಿ ಅಮಾನತು ಮಾಡಲಾಗಿದೆ.

ಇನ್ನೂ ಗ್ರಾಪಂ ವ್ಯಾಪ್ತಿಯಲ್ಲಿನ ನಿವೇಶನಗಳಿಗೆ ಗ್ರಾಪಂನಿಂದ 9 ಮತ್ತು 11 ಫಾರಂ ನೀಡದೇ ಸರ್ಕಾರದ ಕರ್ತವ್ಯದಲ್ಲಿ ಲೋಪ ಎಸಗಿದ ಕೊಪ್ಪಳ ತಾಲೂಕಿನ ಮತ್ತೂರು ಗ್ರಾಪಂನ ಸೋಮಶೇಖರ, ಕರ್ತವ್ಯಕ್ಕೆ ಅನಧೀಕೃತ ಗೈರಾದ ಹಾಸಗಲ್ ಗ್ರಾಪಂನ ಪ್ರಕಾಶ ಸಜ್ಜನ್ ಹಾಗೂ 14 ಮತ್ತು 15ನೇ ಹಣಕಾಸು ಯೋಜನೆಯಡಿ ಹಣ ದುರುಪಯೋಗ ಮಾಡಿಕೊಂಡ ಅಗಳಕೇರಾ ಗ್ರಾಪಂ ಈ ಹಿಂದಿನ ಪಿಡಿಓ ಆಗಿದ್ದ ಗೌಸುಸಾಬ ಮುಲ್ಲಾ ಅವರನ್ನು ಅಮಾನತು ಮಾಡಲಾಗಿದೆ.

ಒಟ್ಟು ಜಿಲ್ಲೆಯಲ್ಲಿ 18 ಪಿಡಿಓಗಳನ್ನು ಜಿಪಂ ಸಿಇಒ ಅವರು ಅಮಾನತು ಮಾಡಿ ಭಾರಿ ಸಂಚಲನ ಮೂಡಿಸಿದ್ದಾರೆ. ಆಡಳಿತಕ್ಕೆ ಚುರುಕು ಮೂಡಿಸುವುದು ಸೇರಿ ನಿರ್ಲಕ್ಷ್ಯತನ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಪಂ ಸಿಇಒ ಅಧಿಕಾರಿಗಳ ಮೇಲೆ ಅಮಾನತಿನ ಅಸ್ತ್ರ ಬೀಸುವ ಮೂಲಕ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next