ಹೊಸದಿಲ್ಲಿ: ಭಾರತದ “ಸ್ಪ್ರಿಂಟ್ ಕ್ವೀನ್’ ದ್ಯುತಿ ಚಂದ್ ತಮ್ಮ ಬಿಎಂಡಬ್ಲ್ಯು ಕಾರನ್ನು ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಬಳಿಕ ಇದನ್ನು ಡಿಲೀಟ್ ಮಾಡಿದ್ದಾರೆ.
ಕೊರೊನಾದಿಂದ ಪ್ರಾಯೋಜಕರು ಸಿಗದೇ ಇರುವುದ ರಿಂದ ತರಬೇತಿಗೆ ಆರ್ಥಿಕ ಅಡಚಣೆ ಆಗುತ್ತಿರುವ ಕಾರಣ ದ್ಯುತಿ ಚಂದ್ ತಮ್ಮ 2015ರ ಬಿಎಂಡಬ್ಲ್ಯು 3-ಸಿರೀಸ್ ಲಕ್ಸುರಿ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದರು.
“ನಾನೀಗ ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯಲ್ಲಿದ್ದೇನೆ. ಆದರೆ ಕೊರೊನಾದಿಂದಾಗಿ ಪ್ರಾಯೋಜಕರು ಸಿಗುತ್ತಿಲ್ಲ. ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಕೂಡ ಹದಗೆಟ್ಟಿದೆ. ತರಬೇತಿ ಹಾಗೂ ಇತರ ಚಟುವಟಿಕೆಗಳಿಗಾಗಿ ನನಗೀಗ ಹಣದ ಆವಶ್ಯಕತೆ ಇದೆ.
ಹೀಗಾಗಿ ಈ ಕಾರನ್ನು ಮಾರಲು ಬಯಸಿದ್ದೇನೆ’ ಎಂಬುದಾಗಿ ದ್ಯುತಿ ಚಂದ್ ಹೇಳಿದ್ದರು. ಹಣವೆಲ್ಲ ಖಾಲಿ
“ಟೋಕಿಯೊ ತರಬೇತಿಗಾಗಿ ನನಗೆ ಸರಕಾರ 50 ಲಕ್ಷ ರೂ. ನೀಡಿರುವುದೇನೋ ಹೌದು. ಆದರೆ ತರಬೇತಿಯ ತಿಂಗಳ ವೆಚ್ಚವೇ 5 ಲಕ್ಷ ರೂ. ಆಗುತ್ತದೆ. ಈ ಹಣವೆಲ್ಲ ಖಾಲಿಯಾಗಿದೆ. ಮುಂದೆ ಜರ್ಮನಿಯಲ್ಲಿ ತರಬೇತಿ ಪಡೆ ಯಬೇಕಿದೆ. ಇದಕ್ಕೆ ಹಣದ ಅಗತ್ಯವಿದೆ’ ಎಂದಿದ್ದಾರೆ ದ್ಯುತಿ.
“ಈ ಕಾರನ್ನು ಸ್ವತಃ ನಾನು ಖರೀದಿಸಿದ್ದೇ ಹೊರತು ಉಡು ಗೊರೆಯಾಗಿ ಬಂದದ್ದಲ್ಲ. ಏಶ್ಯಾಡ್‌ನಲ್ಲಿ ನನ್ನ ಸಾಧನೆಗಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 3 ಕೋಟಿ ರೂ. ಬಹುಮಾನ ನೀಡಿದ್ದರು. ಇದರಿಂದ ಮನೆ ಕಟ್ಟಿಸುವ ಜತೆಗೆ ಈ ಕಾರನ್ನು 30 ಲಕ್ಷ ರೂ.ಗೆ ಖರೀದಿಸಿದ್ದೆ. ನನ್ನಲ್ಲಿ ಇನ್ನೂ ಎರಡು ಕಾರುಗಳಿವೆ. ಮನೆಯಲ್ಲಿ ಇವನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶವಿಲ್ಲ. ಅಲ್ಲದೇ ಇಂಥ ಲಕ್ಸುರಿ ಕಾರನ್ನು ನಿಭಾಯಿಸುವುದು ಕೂಡ ಸುಲಭವಲ್ಲ’ ಎಂದು ದ್ಯುತಿ ಚಂದ್ ಹೇಳಿದರು.