Advertisement
ಒಂದು ಜನಪ್ರಿಯ ಡ್ಯಾನಿಶ್ ಗಾದೆಯಿದೆ: “ದೇವರು ವಿಶ್ವವವನ್ನು ಸೃಷ್ಟಿಸಿದರೆ, ಡಚ್ಚರು ಹಾಲೆಂಡನ್ನು ಸೃಷ್ಟಿಸಿದರು’! ಹಾಲೆಂಡ್ ಎಂದರೆ ಅಷ್ಟೊಂದು ಸುಂದರ. ಈ ದೇಶದ ಇನ್ನೊಂದು ಹೆಸರು ನೆದರ್ಲೆಂಡ್. ಅಂದರೆ, ತಗ್ಗಾದ ಪ್ರದೇಶ ಎಂದು. ಅತ್ಯಂತ ಸ್ವತ್ಛ ಸುಂದರ, ಕಲಾತ್ಮಕತೆಯ ಬೀಡಾದ, ನಾಡಿನ ತುಂಬಾ ಕಾಲುವೆಗಳನ್ನು ನರನಾಡಿಯಂತೆ ರೂಪಿಸಿಕೊಂಡ ಹಾಲೆಂಡಿನಲ್ಲಿ ಹೂದೋಟ ಬಹಳ ಪ್ರಸಿದ್ಧಿ. ಹೂದೋಟ ಬೆಳೆಸುವುದರಲ್ಲಿ ಡಚ್ಚರದ್ದು ಎತ್ತಿದ ಕೈ. ಟ್ಯುಲಿಪ್ ಹೂಗಳು ಇಲ್ಲಿನ ರಾಷ್ಟ್ರೀಯ ಸೌಂದರ್ಯ. ಯುರೋಪಿನ ಅತ್ಯಂತ ಸುಂದರ ಹೂದೋಟ ಇರುವುದು ಕೂಡ ಹಾಲೆಂಡಿನಲ್ಲೇ. ಅದೇ ಕ್ಯೂಕೆನ್ ಹಾಫ್.
ಈ ಉದ್ಯಾನವನಕ್ಕೆ ಸೊಗಸು ತುಂಬಿರುವುದು ಟ್ಯುಲಿಪ್ ಹೂಗಳು. ಡಚ್ ಭಾಷೆಯಲ್ಲಿ ಕ್ಯೂಕೆನ್ ಹಾಫ್ ಎಂದರೆ, “ಕಿಚನ್ ಗಾರ್ಡನ್’ ಎಂದರ್ಥ. ಹಾಲೆಂಡಿನ ರಾಜಧಾನಿ ಆ್ಯಂಸ್ಟರ್‌ಡಾಂನ ನೈರುತ್ಯಕ್ಕಿರುವ ಲೆಸ್ಸಿ ಎಂಬ ಪುಟ್ಟ ನಗರದಲ್ಲಿದೆ ಕ್ಯೂಕೆನ್ ಹಾಫ‚…. 32 ಹೆಕ್ಟೇರ್‌ನಲ್ಲಿ ಹರಡಿರುವ ಈ ಹೂದೋಟದಲ್ಲಿ ವಿವಿಧ ಬಣ್ಣದ, ಆಕಾರದ ಟ್ಯುಲಿಪ್ ಹೂಗಳನ್ನು ಕಾಣಬಹುದು. ಕಣ್ಣು ಹಾಯಿಸಿದಷ್ಟುದ್ದಕ್ಕೂ ಕಾಣುವ ನಾನಾ ಬಣ್ಣದ ಹೂವಿನ ರಾಶಿ ಕಣ್ಣಿಗೆ ತಂಪು. ಅಂದಹಾಗೆ, ಟ್ಯುಲಿಪ್ ಮೂಲತಃ ಹಾಲೆಂಡ್ ದೇಶದ್ದಲ್ಲ. ಮಲಯಾದಲ್ಲಿರುವ ಟಿಯಾನ್‌ಶಾನ್ ಎಂಬ ಹಳ್ಳಿ ಇದರ ಜನ್ಮಸ್ಥಳ. ಟರ್ಕಿ ಮೂಲಕ ಇದು ಹಾಲೆಂಡ್ ಪ್ರವೇಶಿಸಿತೆಂದು ಹೇಳಲಾಗುತ್ತದೆ. ವಲಸೆ ಬಂದ ಟ್ಯುಲಿಪ್ ಇಲ್ಲಿನ ವಾತಾವರಣ ಅನೂಕೂಲವಾಗಿದ್ದರಿಂದ ಹಾಲೆಂಡಿನಲ್ಲೇ ತನ್ನ ಅಧಿಪತ್ಯವನ್ನು ಸ್ಥಾಪಿಸಿದ್ದಿರಬೇಕು. ಪ್ರಪಂಚದಲ್ಲಿ ಮತ್ತೆಲ್ಲೂ ನಿಮಗೆ ಇಷ್ಟೊಂದು ಟ್ಯುಲಿಪ್ ಹೂಗಳನ್ನು ನೋಡಲು ಸಾಧ್ಯವಿಲ್ಲ. ಇಳಿಜಾರಿನ ಸೌಂದರ್ಯ
1949ರಲ್ಲಿ ಲೆಸ್ಸಿ ನಗರದ ಮೇಯರ್ ನಿರ್ಮಿಸಿದ ಈ ಹೂದೋಟದ ವಿಶೇಷತೆ, ಇದರ ಇಳಿಜಾರಿನ ದೇಹಸಿರಿ. ವರ್ಷದಲ್ಲಿ 8 ವಾರ ಮಾತ್ರ ಈ ಹೂದೋಟ ಮೈತುಂಬಿಕೊಳ್ಳುತ್ತದೆ. ಆಗ ಇಲ್ಲಿ ಪ್ರವಾಸಿಗರದ್ದೇ ಜಾತ್ರೆ. ಮಾರ್ಚ್- ಮೇ ತಿಂಗಳಲ್ಲಿ ಮಾತ್ರ ಇದು ಪ್ರವಾಸಿಗರಿಗೆ ತೆರೆದಿರುತ್ತದೆ. ಪ್ರತಿ ವರ್ಷದ ಏಪ್ರಿಲ್ 21ರಂದು ವಿವಿಧ ಹೂಗಳ ಮೆರವಣಿಗೆಯನ್ನು ಏರ್ಪಡಿಸಲಾಗುತ್ತದೆ.
Related Articles
Advertisement
ಸುತ್ತುವುದು ಸುಲಭವಲ್ಲ!ಉದ್ಯಾನವನ ಪ್ರವೇಶಿಸುತ್ತಿದ್ದಂತೆ ಮರೆಯದೇ ಉಚಿತವಾಗಿ ಕೊಡುವ ಉದ್ಯಾನವನದ ಭೂಪಟವನ್ನು ತೆಗೆದುಕೊಳ್ಳಲು ಮರೆಯಬೇಡಿ. ಇದರಿಂದ ಈ ಉದ್ಯಾನವನದ ಯಾವ ಮೂಲೆಯಲ್ಲಿ ಏನಿದೆಯೆಂಬುದನ್ನು ತಿಳಿಯುವುದು ಸುಲಭವಾಗುತ್ತದೆ. ಇಲ್ಲದಿದ್ದರೆ, ಈ 32 ಹೆಕ್ಟೇರ್ ಉದ್ಯಾನವನ್ನು ಸುತ್ತುವುದು ಸುಲಭದ ಮಾತಲ್ಲ! ಇಲ್ಲಿ ಜಪಾನ್ ಉದ್ಯಾನವನ, ಇಂಗ್ಲೆಂಡ್ ಉದ್ಯಾನವನ ಹಾಗೂ ಚಾರಿತ್ರಿಕ ಉದ್ಯಾನವನ ಮುಂತಾದ ಉದ್ಯಾನವನಗಳನ್ನು ನೋಡಬಹುದಲ್ಲದೇ, ಇಲ್ಲಿರುವ ಸಣ್ಣ ಸರೋವರದಲ್ಲಿನ ದೋಣಿ ವಿಹಾರದ ಆನಂದವನ್ನು ಅನುಭವಿಸಬಹುದು. ನಮ್ಮ ಲಾಲ್‌ಬಾಗ್‌ನಂತೆ ಈ ಉದ್ಯಾನವನದಲ್ಲೂ ಒಂದು ಗಾಜಿನಮನೆ ಇದೆ. ಅಲ್ಲೂ ಸಾಲುಸಾಲಾಗಿ ಕಾಣುವುದು ಟ್ಯುಲಿಪ್ ಹೂಗಳೇ. ಉದ್ಯಾನವನದ ಒಂದು ಭಾಗದಲ್ಲಿ ಪುರಾತನ ಮರದ ಗಾಳಿ ಯಂತ್ರವೂ ಇದೆ. ಪ್ರಪಂಚದಲ್ಲಿ 2000 ಬಗೆಯ ಟ್ಯುಲಿಪ್ ಹೂವುಗಳ ಪ್ರಭೇದಗಳಿದ್ದು, ಅವುಗಳಲ್ಲಿ ಸುಮಾರು 700ಕ್ಕೂ ಹೆಚ್ಚು ಹೂಗಳನ್ನು ಈ ಉದ್ಯಾನವನದಲ್ಲಿಯೇ ನೋಡಬಹುದು. ಬಚ್ಚನ್- ರೇಖಾ ಜೊತೆ ಟ್ಯುಲಿಪ್ ವೈಯ್ನಾರ
ಭಾರತೀಯ ಚಲನಚಿತ್ರಕ್ಕೂ ಈ ಉದ್ಯಾನವನಕ್ಕೂ ಎಲ್ಲಿಲ್ಲದ ನಂಟು. ಕೆಲವು ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. “ಸಿಲ್‌ಸಿಲಾ’ ಹಿಂದಿ ಸಿನಿಮಾದ “ಧೇಖಾ ಏಕ್ ಕ್ವಾಬ್ ಕೋ ಏ ಸಿಲ್‌ಸಿಲೆ ಹೂಯೇ’ ಎಂಬ ಹಾಡಿನಲ್ಲಿ ಅಮಿತಾಭ್ ಬಚ್ಚನ್- ರೇಖಾ ಟ್ಯುಲಿಪ್ ಹೂಗಳ ನಡುವೆ ಹಾಡುತ್ತಾ, ನರ್ತಿಸುತ್ತಾರೆ. ಇದು ಇಲ್ಲಿಯೇ ಚಿತ್ರೀಕರಣಗೊಂಡಿದ್ದು. ಪ್ರಕಾಶ್ ಕೆ. ನಾಡಿಗ್