ಬೆಂಗಳೂರು: ರಾಜಧಾನಿ ನಿವಾಸಿಗಳಿಗೀಗ ಧೂಳಿನ ಕಾಟ ಶುರುವಾಗಿದ್ದು, ಕೋವಿಡ್ ಸೋಂಕಿನಿಂದ ರಕ್ಷಣೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಜನತೆ, ಬೇಸಿಗೆ ಕಾಲ ಆರಂಭವಾಗಿರುವುದರಿಂದ ಧೂಳಿನ ಬಗ್ಗೆಯೂ ಹೆಚ್ಚು ಗಮನಹರಿಸಬೇಕಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಪಾಲಿಕೆ ವ್ಯಾಪ್ತಿ ಯಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳಿಂದ ನಿತ್ಯ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಿದೆ.
ಸ್ಮಾರ್ಟ್‌ಸಿಟಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸೂಕ್ತ ನಿರ್ವಹಣೆಯಿಲ್ಲದೆ ರಸ್ತೆಗಳೆಲ್ಲವೂ ಧೂಳು ಮಯವಾಗಿ ರೂಪುಗೊಂಡಿವೆ. ಇದರಿಂದ ಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಕೋವಿಡ್ ದಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಂಡಿದ್ದ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಮತ್ತೆ ತನ್ನ ವೇಗ ಪಡೆದುಕೊಂಡಿವೆ. ನಗರದ ಯಾವುದೇ ಬಡಾವಣೆಗಳತ್ತ ಕಣ್ಣಾಯಿಸಿದರೂ ತಗ್ಗು, ಗುಂಡಿ, ರಸ್ತೆ ಅಗೆತ ಕಣ್ಣಿಗೆ ಗೋಚರಿಸುತ್ತದೆ. ಆಯಕಟ್ಟಿನ ಜಾಗಗಳಲ್ಲಿ ಗುಂಡಿ ತೋಡಿ ವಾರ ಕಳೆದರೂ ಮುಚ್ಚದೇ ಹಾಗೆಯೇ ಬಿಟ್ಟಿರುವ ದೃಶ್ಯ ಕಂಡುಬಂದಿದೆ.
ಸುರಕ್ಷತಾ ಕ್ರಮ ಮಯ?: ಸ್ಮಾರ್ಟ್‌ಸಿಟಿ ಅಧಿಕಾರಿಗಳು ಒತ್ತಡದ ನಡುವೆ ಏಕಕಾಲಕ್ಕೆ ಎಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸಿರುವುದರಿಂದ ವಾಹನ ಸವಾರರಿಗೆ ನಿತ್ಯ ನರಕಯಾತನೆ ಸೃಷ್ಟಿಯಾ ಗಿದೆ. ಬೆಳಗ್ಗೆ ಚೆನ್ನಾಗಿದ್ದ ರಸ್ತೆಗಳನ್ನು ಸಂಜೆ ವೇಳೆಗೆ ಅಗೆದು ಗುಂಡಿ ತೋಡಲಾಗಿರುತ್ತದೆ. ಅದಕ್ಕೆ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಿಲ್ಲ. ಈ ರೀತಿಯ ಹತ್ತು ಹಲವು ಸಮಸ್ಯೆಗಳಿಂದ ಬೇಸತ್ತ ನಾಗರಿಕರು, ಸ್ಮಾರ್ಟ್‌ಸಿಟಿ ಕಾಮಗಾರಿ ಗಳಿಂದಾಗುತ್ತಿರುವ ಸಮಸ್ಯೆ ಬಗ್ಗೆ ಮೌನ ಮುರಿಯುತ್ತಿದ್ದಾರೆ. ಆಳೆತ್ತರ ಗುಂಡಿಗಳಿದ್ದು ಅವುಗಳ ಮುಂದೆ ಯಾವುದೇ ಸುರಕ್ಷತಾ ಪರಿಕರ ಇಟ್ಟಿಲ್ಲ. ಗುಂಡಿ ಇದೆ ಎಂಬ ಎಚ್ಚರಿಕೆ ಫಲಕವೂ ಇಲ್ಲ. ರಾತ್ರಿ ವೇಳೆ ಪಾದಾಚಾರಿ ಗಳು , ವಾಹನ ಸವಾರರು ಬಿದ್ದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಪಾದಾಚಾರಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಕಾಮಗಾರಿ?: ಅಭಿವೃದ್ಧಿ ನೆಪದಲ್ಲಿ ಒಂದೇ ರಸ್ತೆಯಲ್ಲಿ ಕುಡಿಯುವ ನೀರು, ಟೆಲಿಫೋನ್ ಕೇಬಲ್, ಚರಂಡಿ ಮತ್ತು ಗ್ಯಾಸ್ ಲೇನ್ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು (ಎಂಜಿನಿಯರ್, ಗುತ್ತಿಗೆದಾರರು) ಪರಸ್ಪರ ಸಮನ್ವಯತೆಯಿಲ್ಲದೇ ಪದೇ ಪದೆ ರಸ್ತೆಯನ್ನು ಅಗೆಯಲಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಾಗರಿಕ ರಮೇಶ್ ಆರೋಪಿಸಿದ್ದಾರೆ.
ಕೋಟ್ಯಂತರ ರೂ. ವ್ಯಯ : ಕೋಟ್ಯಂತರ ರೂ. ವ್ಯಯ ಮಾಡಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗುತ್ತಿದೆ. ಕಾಮಗಾರಿ ಅಗತ್ಯತೆ ಬಗ್ಗೆ ಸ್ಥಳೀಯರ ಜತೆ ಸೌಜನ್ಯಕ್ಕೂ ಅಧಿಕಾರಿಗಳು ಚರ್ಚಿಸುತ್ತಿಲ್ಲ. ಜನಪ್ರತಿನಿಧಿಗಳಿಗೆ ಸ್ಮಾರ್ಟ್‌ಸಿಟಿ ಕಾಮಗಾರಿ ಪ್ರತಿಷ್ಠೆಯ ವಿಷಯವಾದರೆ, ಅಧಿಕಾರಿಗಳಿಗೆ ಕರ್ತವ್ಯ ಮತ್ತು ಗುತ್ತಿಗೆದಾರರಿಗೆ (ಕಾಲ ಮಿತಿಯೊಳಗೆ ಕಾಮಗಾರಿ ಪೂರಯಸುವ ಗುರಿ) ಟಾರ್ಗೆಟ್ ಚಿಂತೆಯಾಗಿದೆ. ಇದರ ಮಧ್ಯೆ ಜನ ಸಾಮಾನ್ಯರ ಸಮಸ್ಯೆ ಕೇಳುವವರೇ ಇಲ್ಲದಾಗಿದೆ ಎಂಬುದು ಜನಸಾಮಾನ್ಯರ ಆರೋಪವಾಗಿದೆ.
ಹಲವು ರೋಗ ಉಲ್ಬಣ : ಬೇಸಿಗೆ ಆರಂಭವಾಗಿರುವ ಕಾರಣ ಧೂಳು ಸಹ ಹೆಚ್ಚಾಗಿದೆ. ವಾಹನ ಸವಾರರಿಗೆ ಧೂಳಿನಿಂದ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಮೂಗು ಕಟ್ಟುವಿಕೆ, ಉಸಿರಾಟದ ತೊಂದರೆ, ಶೀತ ಹಾಗೂ ಇತರೆ ಅಲರ್ಜಿ ಉಂಟಾಗುತ್ತದೆ. ಹೆಚ್ಚು ಧೂಳಿನ ಕಣ ಸೇವನೆಯಿಂದ ಜ್ವರ, ಅಸ್ತಮಾ ಹಾಗೂ ಚರ್ಮದ ನವೆ(ಇಸಬು) ಉಲ್ಬಣಿಸಬಹುದು. ಮನೆಯಲ್ಲಿ ಕೆಲಸ ಮಾಡುವಾಗ ಬರುತ್ತಿದ್ದ ಈ ಎಲ್ಲಾ ಸಮಸ್ಯೆಗಳು, ವಾಹನ ಸವಾರರಿಗೂ ವ್ಯಾಪಿಸುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಬೇಸಿಗೆಯಿಂದ ಧೂಳು ಹೆಚ್ಚಾಗುತ್ತಿದೆ. ದಪ್ಪ ಮತ್ತು ಚಿಕ್ಕ ಧೂಳಿನ ಕಣ ಸೇವನೆಯಿಂದ ಕೆಮ್ಮು, ಎದೆ (ಉಸಿರಾಟ ತೊಂದರೆ) ಕಟ್ಟುವುದು, ಎದೆ ನೋವು, ಗಂಟಲು ಕೆರೆತ, ಕಣ್ಣು ಹಾಗೂ ಚರ್ಮ ಉರಿತ ಕಾಣಿಸಿಕೊಳ್ಳುತ್ತದೆ. ಹೆಚ್ಚು ಧೂಳು ಕಣ ಸೇವನೆಯಿಂದ ದೀರ್ಘ ಕಾಲದ ಶ್ವಾಸಕೋಶ ಸಂಬಂಧಿ (ಸಿಒಪಿಡಿ)ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಉಂಟಾಗುತ್ತದೆ. ಸುರಕ್ಷತಾ ಕ್ರಮ ಕೈಗೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.
●ಡಾ.ಸಿ.ನಾಗರಾಜ್, ನಿರ್ದೇಶಕ, ರಾಜೀವ್ ಗಾಂಧಿ ಹೃದ್ರೋಗ ಆಸ್ಪತೆ.
ನಗರದ ಮಧ್ಯೆ ಭಾಗದ ಯಾವುದೇ ರಸ್ತೆಗಳಿಗೆ ಕಾಲಿಟ್ಟರೂ ಕಾಮಗಾರಿ ಗಳು ನಡೆಯುತ್ತಿವೆ. ಎಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆ ರಸ್ತೆಯಲ್ಲಿ ತೆರಳಲಾಗದಷ್ಟು ಧೂಳು ಇರುತ್ತದೆ. ಪಾದಾಚಾರಿ ಮಾರ್ಗಗಳನ್ನು ಕಿತ್ತು ಹಾಕಲಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿವೆ. ●
ಆನಂದ್ ಹಳ್ಳೂರ್, ಸ್ಥಳೀಯರು .
-ವಿಕಾಸ್ ಆರ್.