Advertisement

ವಿವಿಧೆಡೆ ಹಿಪ್ಪುನೇರಳೆ ಬೆಳೆಗೆ ಧೂಳಿನ ಬಾಧೆ : ಗಣಿ ಧೂಳಿನಿಂದ ರೈತರಿಗೆ ಸಂಕಷ್ಟ

04:33 PM Mar 04, 2022 | Team Udayavani |

ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿ ವ್ಯಾಪ್ತಿಯ ಕೊಯಿರಾ ಸೇರಿ ಹತ್ತಾರು ಗ್ರಾಮಗಳ ವ್ಯಾಪ್ತಿಯಲ್ಲಿರುವ ನೂರಾರು ರೇಷ್ಮೆ ಬೆಳೆಗಾರರು ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿನ ಮೇಲೆ ಗಣಿ ಧೂಳು ಆವರಿಸಿ ಬೆಳಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.

Advertisement

ಗ್ರಾಮೀಣ ಜನರ ಬದುಕನ್ನು ಕಟ್ಟಿಕೊಳ್ಳಲು ಹೈನುಗಾರಿಕೆ ಮತ್ತು ರೇಷ್ಮೆ ರೈತರಿಗೆ ಎರಡು ಕಣ್ಣುಗಳು ಇದ್ದಂತೆ. ಇದರಿಂದ ಜೀವನಾಧಾರ ಮಾಡುತ್ತಿದ್ದಾರೆ.

ಕುಂದಾಣ ಹೋಬಳಿಯ ಕೋಯಿರಾ, ಮಾಯಸಂದ್ರ, ಚಿಕ್ಕಗೊಲ್ಲಹಳ್ಳಿ, ಕಾರಹಳ್ಳಿ, ಮುದ್ದನಾಯಕನ ಹಳ್ಳಿ, ತೈಲಗೆರೆ, ಸೊಣ್ಣೇನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ರೇಷ್ಮೆಗೂಡು
ಸಾಕಾಣಿಕೆಗೆ ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿನ ಮೇಲೆ ಹೆಚ್ಚುತ್ತಿರುವ ಗಣಿ ಧೂಳಿನಿಂದ ಉಳು ಸಾಕಾಣಿಕೆ ಮಾಡಬೇಕೋ ಹಾಗೆಯೇ ಬಿಡಬೇಕೋ ಎಂಬ ಆತಂಕ ರೈತರಲ್ಲಿ ಕಾಡುತ್ತಿದೆ.

ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ನಿಯಮ ಪಾಲನೆ ಇಲ್ಲ: ರೇಷ್ಮೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಗಣಿ ಧೂಳಿನಿಂದ ಯಾವ ರೈತರಿಗೆ ಬೆಳೆ ನಷ್ಟವಾಗಿದೆ ಎಂದು ವರದಿ ನೀಡಿದ್ದರೂ, ಯಾವುದೇ ರೀತಿ ಪ್ರಯೋಜನ ಆಗಿಲ್ಲ. ನಿಯಮ ಪಾಲನೆ ಮಾಡುವುದರಲ್ಲಿ ಗಣಿ ಮಾಲೀಕರು ಹಾಗೂ ಟಾಸ್ಕ್ ಫೋರ್ಸ್ ಅಧ್ಯಕ್ಷರು ವಿಫ‌ಲರಾಗಿದ್ದಾರೆ. ವಿಪರ್ಯಾಸವೆಂದರೆ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿದ ಸಂಬಂಧಿಕರ ಹೆಸರಿನಲ್ಲಿ ಮತ್ತೆ ಪರವಾನಗಿ ನೀಡಿದ್ದಾರೆ. ಅದರ ಫ‌ಲವೇ ಈಗ ನಾವು ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ರೈತರು.

Advertisement

ಇದನ್ನೂ ಓದಿ : ಸಿಎಂ ಬೊಮ್ಮಾಯಿಯವರ ಚೊಚ್ಚಲ ಬಜೆಟ್ ಬಗ್ಗೆ ಜನ ಏನಂತಾರೆ ?

ಬೆಳಗಾರರ ಆರೋಪ: ಗಣಿಗಾರಿಕೆ ಪರವಾನಗಿ ಪಡೆದಿರುವವರು ಸ್ಫೋಟಕ ಬಳಸುವಂತೆ ಇಲ್ಲ. ಕಲ್ಲು ಸೀಮಿತ ಚಪ್ಪಡಿ ಮತ್ತು ಕಲ್ಲುಗಳಿಗೆ ಪರವಾನಗಿ ಪಡೆಯಬೇಕು. ಸೀಮಿತವಾಗಿ ಪಡೆದಿದ್ದಾರೆಯೇ ಹೊರತು ಕಲ್ಲುಜಲ್ಲಿ, ಎಂ ಸ್ಯಾಂಡ್‌ ಉತ್ಪನ್ನಗಳಿಗೆ ಅಲ್ಲ. ಅನುಮತಿ ಪಡೆದವರು ಪರವಾನಗಿಯನ್ನು ಕಲ್ಲು, ಜೆಲ್ಲಿ ಮತ್ತು ಎಂ ಸ್ಯಾಂಡ್‌ಗಳಿಗೆ ವರ್ಗಾವಣೆ ಮಾಡಿಕೊಳ್ಳದೇ ಸತತ 20 ವರ್ಷದಿಂದ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಸಂಬಂಧಿಸಿ ಅಧಿಕಾರಿಗಳ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ ಎಂದು ಹಿಪ್ಪು ನೇರಳೆ ಬೆಳಗಾರರು ಆರೋಪಿಸಿದ್ದಾರೆ.

ದಾಖಲೆಯ ಬೆಲೆಗೆ ಮಾರಾಟ: ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಕಲ್ಲಿನ ಕ್ವಾರಿ ಮತ್ತು ಖಾಸಗಿ ಟ್ಯಾಂಕರ್‌ ಮೂಲಕ ದುಬಾರಿ ಬೆಲೆಯಲ್ಲಿ ನೀರು ಖರೀದಿಸಿ ಬೆಳೆ ಉಳಿಸುವ ಪ್ರಯತ್ನ
ಮಾಡುತ್ತಿರುವುದು ಒಂದೆಡೆಯಾದರೆ, ಹುಳು ಸಾಕಾಣಿಕೆ ಸಂದರ್ಭದಲ್ಲಿ ಸೊಪ್ಪಿನ ಅಭಾವ ಹೆಚ್ಚುತ್ತದೆ. ಒಂದು ಹಿಪ್ಪುನೇರಳೆ ಸೊಪ್ಪಿನ ಚೀಲ ಒಂದು ಸಾವಿರ ದಾಖಲೆಯ ಬೆಲೆಗೆ
ಮಾರಾಟವಾಗುತ್ತಿದೆ.

ಸೊಪ್ಪು ತೊಳೆದು ಹಾಕಬೇಕು: ದೇಶದಲ್ಲಿ ಮತ್ತು ರಾಜ್ಯದಲ್ಲಿ ರೇಷ್ಮೆ ದುಬಾರಿಯಾಗಿದ್ದು, ರೈತರಿಗೆ ಉತ್ತಮ ಬೆಳೆಗೆ ಬೆಲೆಯಿದೆ. ಆದರೆ, ಗುಣಮಟ್ಟದ ರೇಷ್ಮೆ ಬೆಳೆಯಲು ಗಣಿಗಾರಿಕೆಯಿಂದ ಕಷ್ಟವಾಗುತ್ತಿದೆ. ಅನಿವಾರ್ಯವಾಗಿ ನೀರು, ಪ್ಲಾಸ್ಟಿಕ್‌ ಡ್ರಮ್‌, ಸಿಮೆಂಟ್‌ ತೊಟ್ಟಿಗಳಲ್ಲಿ ಶೇಖರಣೆ ಮಾಡಿ ಸೊಪ್ಪು ಕಟಾವಿನ ನಂತರ ತೊಳೆದು ಹಾಕಬೇಕು ಎಂದು
ರೇಷ್ಮೇ ಬೆಳೆಗಾರರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಲಾಭಕಿಂತ ನಷ್ಟವೇ ಹೆಚ್ಚು ರೈತರು ಕಂಗಾಲು
ಇಷ್ಟೊಂದು ದುಬಾರಿಯಾಗುತ್ತಿರುವ ಸೊಪ್ಪು ಖರೀದಿ ಮಾಡಿಕೊಂಡು ಬಂದು ಹುಳು ಸಾಕಾಣಿಕೆ ಮಾಡಿ, ಮಾರುಕಟ್ಟೆಗೆ ಹೋಗಿ ಗೂಡು ಮಾರಾಟ ಮಾಡಿ ಬರುವಷ್ಟರಲ್ಲಿ ನಮಗೆ ಲಾಭಕ್ಕಿಂತ ನಷ್ಟವೇ ಆಗುತ್ತಿದೆ. ನಮ್ಮ ಕುಟುಂಬದವರೆಲ್ಲರೂ ಇದೇ ಕಸುಬು ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜೀವನ ನಡೆಸುವುದು ತುಂಬಾ ಕಷ್ಟವಾಗಲಿದೆ ಎಂದು ರೇಷ್ಮೇ ಹುಳು ಸಾಕಾಣಿಕೆದಾರರ ಅಳಲಾಗಿ¨.

ಗಣಿ ಧೂಳು ಸಮಸ್ಯೆ
ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲು ಸಾಕಷ್ಟು ರೈತರು ಹಿಪ್ಪುನೇರಳೆ ರೇಷ್ಮೆ ಬೆಳೆ ಬೆಳೆಯುತ್ತಾರೆ. ಆದರೆ, ಅಲ್ಲಿನ ಗಣಿಗಾರಿಕೆಯಿಂದ ರಸ್ತೆಯ ಆಸುಪಾಸಿನ
ರೈತರ ಜಮೀನಿಗೆ ಗಣಿ ಧೂಳು ಮುಕ್ಕರಿಸುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತಿದೆ ಎಂದು ಆ ಭಾಗದ ರೈತ ಚಿಕ್ಕೇಗೌಡ ಹೇಳುತ್ತಾರೆ.

– ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next