Advertisement

Agri: ರೋಗ ನಿಯಂತ್ರಣ ಪ್ರಸ್ತಾವನೆಗೆ ಧೂಳು; ಅಡಿಕೆ ಬೆಳೆ ಹಾಳು

12:51 AM Jan 04, 2024 | Team Udayavani |

ಮಂಗಳೂರು: ಅಡಿಕೆ ಬೆಳೆಯನ್ನು ಬೆಂಬಿಡದೆ ಕಾಡಿದ ಎಲೆ ಚುಕ್ಕಿ ರೋಗ ಹಾಗೂ ಹಳದಿ ರೋಗ ಬಾಧೆ ಇನ್ನೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ. ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಅನುದಾನಕ್ಕೆ ಕೋರಿ ಸಲ್ಲಿಸಲಾದ ಪ್ರಸ್ತಾವನೆ ರಾಜ್ಯ ಆರ್ಥಿಕ ಇಲಾಖೆಯಲ್ಲಿ ಧೂಳು ಹಿಡಿಯುತ್ತಿದೆ. ಇದರ ಬೆನ್ನಿಗೇ ಸಂರಕ್ಷಣ ಔಷಧವೂ ಸಹಿತ ಇನ್ನಿತರ ಕ್ರಮಗಳಿಗೆ ಕೇಂದ್ರ ಸರಕಾರಕ್ಕೆ ಕಳುಹಿಸಿದ ಪ್ರಸ್ತಾವನೆಗೂ ಮುಕ್ತಿ ಸಿಕ್ಕಿಲ್ಲ.

Advertisement

ರಾಜ್ಯದಲ್ಲಿ 6.14 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದು, 9.33 ಲಕ್ಷ ಮೆ.ಟನ್‌ ಅಡಿಕೆ ಉತ್ಪಾದನೆಯಾಗುತ್ತಿದೆ. ಈ ಪೈಕಿ ಎಲೆಚುಕ್ಕಿ ರೋಗವು 53,977 ಹೆಕ್ಟೇರ್‌ ಹಾಗೂ ಹಳದಿ ಎಲೆ ರೋಗವು 12,984 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬಾಧಿಸುತ್ತಿದೆ. ಬಹುತೇಕ 66,961 ಹೆಕ್ಟೇರ್‌ ಪ್ರದೇಶದ ಅಡಿಕೆ ಬೆಳೆ ನಾಶದ ಹಂತ ತಲುಪಿದ್ದು, ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಜ್ಞರು ಹೇಳಿದ್ದೇನು?
ಎಲೆಚುಕ್ಕಿ ಬಾಧಿತ ಪ್ರದೇಶಗಳಿಗೆ ಕೇಂದ್ರ ಸರಕಾರದ ಸಂಸ್ಥೆಗಳ ತಜ್ಞರ ಸಮಿತಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ತೀವ್ರ ರೋಗ ಬಾಧಿತ ಗರಿಗಳನ್ನು ಕತ್ತರಿಸಿ ಸುಡುವುದು, ಶಿಲೀಂಧ್ರನಾಶಕಗಳ ನಿಯಮಿತ ಬಳಕೆ, ಸಾಮೂಹಿಕ ಸಿಂಪರಣೆ ವಿಧಾನ ಅನುಸರಣೆ, ಗಿಡಗಳ ಉತ್ತಮ ಬೆಳವಣಿಗೆಗಾಗಿ ಮಣ್ಣಿನ ಪರೀಕ್ಷೆಯ ಆಧಾರದ ಮೇರೆಗೆ ಸಮತೋಲನ ಪೋಷಕಾಂಶ ಪೂರೈಸುವ ಬಗ್ಗೆ ಶಿಫಾರಸು ಮಾಡಿದೆ. ಇದರ ನಿಯಮಿತ ಅನುಷ್ಠಾನ ಜಾರಿಯಲ್ಲಿದ್ರೂ ಎಲೆಚುಕ್ಕಿ ರೋಗ ಪೂರ್ಣ ಹತೋಟಿಗೆ ಬಂದಿಲ್ಲ. ಹಾಗಾಗಿ ಈ ವರ್ಷವೂ ಅಡಿಕೆ ಬೆಳೆ ಕಳೆದುಕೊಳ್ಳುವ ಸ್ಥಿತಿ ಬೆಳೆಗಾರರದ್ದಾಗಿದೆ.

ಸಹಾಯಧನ ಇದೆ-ಗೊತ್ತಿಲ್ಲ!
ಅಡಿಕೆ ಬೆಳೆಗಾರರಿಗೆ ಎಲೆಚುಕ್ಕಿ ಕಾರಣಕ್ಕಾಗಿ ಅಡಿಕೆ ಬೆಳೆಯ ಕಟಾವು ಹಾಗೂ ಔಷಧ ಸಿಂಪಡಣೆಗಾಗಿ (ದೋಟಿ) ಖರೀದಿಸಲು ಕೃಷಿ ಯಾಂತ್ರೀ ಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ. 40 ಹಾಗೂ ಪರಿಶಿಷ್ಟ ಜಾತಿ/ಪಂಗಡದವರಿಗೆ ಶೇ. 50ರಂತೆ ಸಹಾಯಧನವನ್ನು ತೋಟಗಾರಿಕೆ ಇಲಾಖೆ ನೀಡುತ್ತಿದೆ. ಆದರೆ ಈ ಬಗ್ಗೆ ಎಲ್ಲ ಬೆಳೆಗಾರರಿಗೆ ಮಾಹಿತಿಯೆ ಇಲ್ಲ.

ಹಳದಿ ಎಲೆ ರೋಗವೂ ವ್ಯಾಪಕ
ಎಲೆಚುಕ್ಕಿಯಂತೆ ಅಡಿಕೆ ಹಳದಿ ಎಲೆ ರೋಗವು ರಾಜ್ಯದ 12,984 ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿದೆ. ಚಿಕ್ಕಮಗಳೂರು 9,625 ಹೆಕ್ಟೇರ್‌, ಕೊಡಗು 2,142 ಹೆಕ್ಟೇರ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 1,217 ಹೆಕ್ಟೇರ್‌ ಪ್ರದೇಶದಲ್ಲಿ ಈ ರೋಗ ಗರಿಷ್ಠ ಪ್ರಮಾಣದಲ್ಲಿದೆ. ತೋಟಗಳಲ್ಲಿ ಸೂಕ್ತ ನಿರ್ವಹಣೆಯ ಕೊರತೆ, ಸೂಕ್ತ ನೀರು ಹರಿಯಲು ಕಾಲುವೆಗಳ ವ್ಯವಸ್ಥೆ ಇಲ್ಲದಿರುವುದು, ಮಣ್ಣಿನಲ್ಲಿ ಇರಬೇಕಾದ ಪೋಷಕಾಂಶಗಳ ಕೊರತೆ ಹಾಗೂ ಫೈಟೊಪ್ಲಾಸ್ಮಾ ಎಂಬ ಸೂಕ್ಷ್ಮರೋಗಾಣುವಿನ ಬಾಧೆಯಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ನಿರ್ದಿಷ್ಟ ಕಾರಣ ಕಂಡುಹಿಡಿಯಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ (ಸಿಪಿಸಿಆರ್‌ಐ) ಅವರಿಗೆ ಸರಕಾರ ಅನುದಾನ ಒದಗಿಸಿದ್ದು, ಇದೇ ತಿಂಗಳು ಸಂಶೋಧನೆ ಆರಂಭವಾಗುವ ಸಾಧ್ಯತೆಯಿದೆ.

Advertisement

ಪ್ರಸ್ತಾವನೆಯಲ್ಲೇ ಬಾಕಿ!
ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ 21.50 ಕೋ.ರೂ.ಗಳ ಅನುದಾನ ಕೋರಿ ತೋಟಗಾರಿಕೆ ಇಲಾಖೆಯು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ. ಜತೆಗೆ ರೋಗ ನಿಯಂತ್ರಣಕ್ಕೆ ಸಂರಕ್ಷಣ ಔಷಧ ಹಾಗೂ ಸಿಂಪಡಣೆ ವೆಚ್ಚ, ತೋಟಗಳ ನಿರ್ಮಲೀಕರಣ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತಾದ ಅರಿವು ಮೂಡಿಸುವ ಕಾರ್ಯಕ್ರಮಗಳು, ಉತ್ತಮ ತೋಟಗಾರಿಕೆ ಬೇಸಾಯ ಪದ್ಧತಿಗಳ ಅಳ ವಡಿಕೆಗಾಗಿ 225.73 ಕೋ.ರೂ.ಗಳ ಪ್ರಸ್ತಾ ವನೆಯನ್ನು ಕೇಂದ್ರ ಸರಕಾರಕ್ಕೂ ಕಳುಹಿಸ ಲಾಗಿದೆ. ವಿಪರ್ಯಾಸವೆಂಬಂತೆ ಅದು ಕೂಡ ಬಾಕಿಯಾಗಿದೆ. ಇತ್ತ ರೋಗ ಬಾಧೆ ಮಾತ್ರ ವಿಸ್ತರಣೆಯಾಗುತ್ತಲೇ ಇದೆ.

ಎಲೆಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗ ಬಹುತೇಕ ಕಡೆಗಳಲ್ಲಿ ವ್ಯಾಪಿಸಿದೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ರೈತರಿಗೆ ಸಸ್ಯ ಸಂರಕ್ಷಣ ಔಷಧಗಳನ್ನು ಇಲಾಖೆ ನೀಡುತ್ತಿದೆ. ಅಡಿಕೆ ಕಟಾವು ಹಾಗೂ ಸಿಂಪಡಣೆಗಾಗಿ ದೋಟಿ ಖರೀದಿಸಲು ಸಹಾಯಧನ ನೀಡಲಾಗುತ್ತಿದೆ.
– ಎಚ್‌.ಆರ್‌. ನಾಯಕ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next