Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದರು. ಅನಂತರ ದಸರಾ ಮೆರವಣಿಗೆಯು ಅರಮನೆ ಆವರಣದಿಂದ ಮಧ್ಯಾಹ್ನ 2.30 ಗಂಟೆಗೆ ಆರಂಭವಾಯಿತು. ಮೆರವಣಿಗೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಸ್ತಬ್ಧಚಿತ್ರಗಳು, ಕಲಾತಂಡಗಳು ಸಾಗಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ಸಂಜೆ 5 ಗಂಟೆ 9 ನಿಮಿಷಕ್ಕೆ ಅಭಿಮನ್ಯು ಆನೆಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ. ಮಹದೇವಪ್ಪ, ಸಚಿವ ಶಿವರಾಜ ತಂಗಡಗಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ| ಕೆ.ವಿ.ರಾಜೇಂದ್ರ, ಮೈಸೂರು ನಗರ ಪೊಲೀಸ್‌ಆಯುಕ್ತ ರಮೇಶ್ ಬಾನೋತ್ ಅವರು ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.
Related Articles
Advertisement
ದಸರಾ ಉತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ಮಂಗಳವಾರ ಮುಹೂರ್ತದ ಸಮಯ ಮೀರಿದ ಅನಂತರ ಶ್ರೀ ಚಾಮುಂಡೇಶ್ವರೀ ದೇವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಸಲ್ಲಿಸಿದ ಪ್ರಸಂಗ ನಡೆಯಿತು. ವಿಜಯದಶಮಿ ಮೆರವಣಿಗೆಯಲ್ಲಿ ಶ್ರೀ ಚಾಮುಂಡೇಶ್ವರೀ ದೇವಿಗೆ ಸಂಜೆ 4.40ರಿಂದ 5 ಗಂಟೆವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ನೆರವೇರಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರು ಶ್ರೀ ಚಾಮುಂಡೇಶ್ವರೀ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದಾಗ ಸಮಯ ಸಂಜೆ 5 ಗಂಟೆ 9 ನಿಮಿಷ ಆಗಿತ್ತು.
2ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು
ತನ್ನ ಹೆಗಲ ಮೇಲೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಯಾವುದೇ ಬಿಂಕ-ಬಿಗುಮಾನ, ಅಂಜಿಕೆಯಿಲ್ಲದೆ ಗಾಂಭೀರ್ಯದಿಂದ ದಾರಿಯುದ್ದಕ್ಕೂ ಜನರತ್ತ ಸೊಂಡಿಲೆತ್ತಿ ನಮಿಸುತ್ತ ಸಂಜೆ 7.25ರ ಹೊತ್ತಿಗೆ ಬನ್ನಿಮಂಟಪ ತಲುಪಿದ. ಈ ಮೂಲಕ ಅಭಿಮನ್ಯು 2ನೇ ಬಾರಿಗೆ ಯಶಸ್ವಿಯಾಗಿ ಅಂಬಾರಿ ಹೊತ್ತು ಸಾಗಿದ. ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯ ಸೇರಿ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಜಂಬೂ ಸವಾರಿ ವೀಕ್ಷಣೆ ಮಾಡಿದರು. ರಸ್ತೆಯ ಬದಿಯಲಿದ್ದ ಕಟ್ಟಡ, ಮರಗಳನ್ನೂ ಏರಿ ಮೆರವಣಿಗೆ ವೀಕ್ಷಿಸಿದರು.
ವಿವಿಧ ಜಿಲ್ಲೆಗಳ 49 ಸ್ತಬ್ಧಚಿತ್ರಗಳು
ವಿಜಯದಶಮಿ ಮೆರವಣಿಗೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ 49 ಸ್ತಬ್ಧಚಿತ್ರಗಳು ಸಾಗಿದವು. ರಾಜ್ಯದ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು. ಅರಮನೆ ಆವರಣದಿಂದ ಹೊರಟ ಜಂಬೂ ಸವಾರಿಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್. ಸರ್ಕಲ್, ಸಯ್ನಾಜಿರಾವ್ ರಸ್ತೆ, ಬಂಬೂ ಬಜಾರ್ ಮೂಲಕ ಸುಮಾರು ಐದು ಕಿ.ಮೀ. ದೂರದ ಬನ್ನಿಮಂಟಪವನ್ನು ತಲುಪಿತು. ದಾರಿಯ ಉದ್ದಕ್ಕೂ ರಸ್ತೆಯ ಎರಡು ಬದಿಗಳಲ್ಲಿದ್ದ ಜನರು ವೈಭವದ ರಾಜ್ಯದ ನಾಡ ಹಬ್ಬ ವಿಜಯ ದಶಮಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಮೆರವಣಿಗೆಯು ವೇಳೆ ಪೊಲೀಸರು ಬಿಗಿ ಬಂದೋಬಸ್ತ್ ಅನ್ನು ಕೈಗೊಂಡಿದ್ದರು.
ಕೂಡ್ಲಿ ಗುರುರಾಜ