Advertisement

ದಸರಾ ಸೌಹಾರ್ದದ ಸಂಕೇತ: ಅಪ್ಪಚ್ಚು ರಂಜನ್‌

10:45 PM Oct 10, 2019 | Team Udayavani |

ಮಡಿಕೇರಿ: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲಾ ಧರ್ಮದವರೂ ಒಗ್ಗೂಡಿ ಆಚರಿಸುವ ಹಬ್ಬ ದಸರಾವೆಂದು ಶಾಸಕ‌ ಎಂ.ಪಿ.ಅಪ್ಪಚ್ಚುರಂಜನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಡಿಕೇರಿ ನಗರ ದಸರಾ ಸಮಿತಿ ಹಾಗೂ ದಸರಾ ಜನೋತ್ಸವ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ವಿಜಯದಶಮಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ದಸರಾ ಕಾರ್ಯಕ್ರಮಗಳ ಆಚರಣೆಯಿಂದ ನಾಡಿನ ಸಂಸ್ಕೃತಿ, ಕಲೆ ಉಳಿಸಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಬಾರಿಯ ಮಹಿಳಾ, ಮಕ್ಕಳ, ಯುವಜನರ ಹಾಗೂ ಜನಪದೋತ್ಸವ ದಸರಾಗಳು ಜನಮನ ಸೆಳೆದವು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಮಾತನಾಡಿ ಮಡಿಕೇರಿ ದಸರಾಕ್ಕೆ ಹೆಚ್ಚಿನ ಜನ ಸೇರಿ ಮೆರುಗು ತಂದಿರುವುದು ವಿಶೇಷವಾಗಿದೆ. ಮಡಿಕೇರಿ ದಸರಾ ಜನಸಾಗರದ ಉತ್ಸವವಾಗಿದೆ ಎಂದರು.

Advertisement

ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ರಾಬಿನ್‌ ದೇವಯ್ಯ ಅವರು ಮಾತನಾಡಿ ಮಡಿಕೇರಿ ದಸರಾ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಹೀಗೆ ಎಲ್ಲರ ಸಹಕಾರದಿಂದ ಅಚ್ಚುಕಟ್ಟಾಗಿ ನಡೆದಿದೆ ಎಂದು ಅವರು ಹೇಳಿದರು.

ಚಾಲನೆ ನೀಡಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಅವರು ಮಕ್ಕಳ, ಮಹಿಳೆಯರ, ಜನಪದೋತ್ಸವ ವಿಶಿಷ್ಟವಾಗಿ ಮೂಡಿ ಬಂದಿತು. ದಶಮಂಟಪಗಳನ್ನು ನೋಡುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಹಲವು ಸಂಕಷ್ಟಗಳನ್ನು ಎದುರಿಸುವಂತಾಯಿತು. ಪ್ರಕೃತಿಯ ಶಕ್ತಿ ಮುಂದೆ ಮಾನವ ಏನೂ ಅಲ್ಲ. ಸಂತ್ರಸ್ತರಿಗೆ ಕೈಲಾದಷ್ಟು ನೆರವು ನೀಡಬೇಕಿದೆ. ಪ್ರಕೃತಿ ವಿಕೋಪ ಮುಂದೆಂದೂ ಸಂಭವಿಸದಿರಲಿ ಎಂದು ಇದೇ ಸಂದರ್ಭದಲ್ಲಿ ಆಶಿಸಿದರು.

ಪ್ರಮುಖರಾದ ಬಿ.ಬಿ.ಭಾರತೀಶ್‌ ಅವರು ಮಾತನಾಡಿ ಪ್ರಕೃತಿ ವಿಕೋಪದ ನಡುವೆ ನಾಲ್ಕು ಶಕ್ತಿ ದೇವತೆಗಳನ್ನು ಪೂಜಿಸಿ ದಸರಾ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದರು.

ಆಧುನಿಕವಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರೈತರು, ಕಾರ್ಮಿಕರು, ವ್ಯಾಪಾರಿಗಳು, ಹೀಗೆ ಎಲ್ಲರಿಗೂ ದಸರಾ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.

ಕೆ.ಕೆ. ಮಂಜುನಾಥ್‌ ಕುಮಾರ್‌ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದಾಗಿ ಕಳೆದ ವರ್ಷ 20 ಮಂದಿ, ಈ ಬಾರಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜತೆಗೆ ಬೆಳೆ ನಷ್ಟ ಉಂಟಾಗಿದೆ. ಕಾರ್ಮಿಕರಿಗೆ ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರ ಜೀವನ ಸಂಕಷ್ಟಕ್ಕೆ ದೂಡಿದೆ. ಇವುಗಳೆಲ್ಲವನ್ನೂ ಶಕ್ತಿ ದೇವತೆಗಳು ನಿವಾರಿಸುವಂತಾಗಲಿ ಎಂದು ಅವರು ಪ್ರಾರ್ಥಿಸಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಮಾತನಾಡಿ ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ವಿಭಿನ್ನ ಹಾಗೂ ವಿಶಿಷ್ಟವಾಗಿ ಜರುಗುತ್ತಿದೆ. ಈ ಬಾರಿ ಜನಪದೋತ್ಸವವು ಗ್ರಾಮೀಣ ಪ್ರದೇಶದ ಸೊಗಡು, ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ವಿಶಿಷ್ಟವಾಗಿತ್ತು ಎಂದರು.

ಪೌರಾಯುಕ್ತರಾದ ರಮೇಶ್‌ ಅವರು ಮಾತನಾಡಿ ಮಡಿಕೇರಿ ದಸರಾವನ್ನು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಸಲಾಗಿದೆ ಎಂದರು. ದಸರಾ ಸಮಿತಿಯ ಕಾರ್ಯಾಧ್ಯಕ್ಷರಾದ ರಾಬಿನ್‌ ದೇವಯ್ಯ, ಗೌರವಾಧ್ಯಕ್ಷರಾದ ಪಿ.ಡಿ.ಪೊನ್ನಪ್ಪ ಇತರರು ಮಾತನಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸ್ನೇಹಾ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿಜಗದೀಶ್‌, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್‌.ಬಿ.ರವಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ, ವೇದಿಕೆ ಸಮಿತಿ ಅಧ್ಯಕ್ಷರಾದ ಎ.ಜಿ.ರಮೇಶ್‌ ಉಪಸ್ಥಿತರಿದ್ದರು. ಅನಿಲ್‌ ಎಚ್‌.ಟಿ. ಕಾರ್ಯಕ್ರಮ ನಿರೂಪಿಸಿದರು. ಆರ್‌.ಬಿ. ರವಿ ಸ್ವಾಗತಿಸಿ, ತೆನ್ನಿರ ಮೈನಾ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next