Advertisement
ಹೌದು, ದಸರಾ ಸಂಭ್ರಮದಲ್ಲಿ ನಾಡಿನ ಹಲವು ಸ್ಥಳ, ವಿಶೇಷತೆಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಮೂಲಕ ಅವುಗಳಿಗೆ ವಿಶೇಷ ಗೌರವ ಸೂಚಿಸುವುದು ಪರಂಪರೆ. ಈ ಬಾರಿ ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಇಳಕಲ್ಲ ಸೀರೆ, ದೇಶದ ಸಂಸತ್ತು ಭವನ ನಿರ್ಮಾಣಕ್ಕೆ ಪ್ರೇರಣೆ ಎನ್ನಲಾದ ಐಹೊಳೆಯ ದುರ್ಗಾ ದೇವಾಲಯ ಹಾಗೂ ದೇಶದ ಗಡಿ ಕಾಯಲು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಭದ್ರತಾ ಪಡೆಯಲ್ಲಿ ಸ್ಥಾನ ಪಡೆದಿರುವ ಮುಧೋಳ ಶ್ವಾನಗಳ ಸಹಿತ ಒಟ್ಟು ಮೂರು ಸ್ತಬ್ಧ ಚಿತ್ರಗಳು ಈ ಬಾರಿಯ ದಸರಾದಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.
Related Articles
Advertisement
ಇಳಕಲ್ಲ ಸೀರೆ ನೇಯಲಾಗುವ ವಿನ್ಯಾಸದ ಧಡಿ ಹಾಗೂ ಸೆರಗು ಪ್ರಕೃತಿಯಿಂದ ಸ್ಪೂರ್ತಿ ಪಡೆದ ಹಿನ್ನೆಲೆಯಲ್ಲಿ ಉಷ್ಣ ಪ್ರದೇಶದಲ್ಲಿರುವ ಮಹಿಳೆಯರಿಗೆ ಅತ್ಯಂತ ಪ್ರತಿಕೂಲವಾದ ಉಡುಪು ಕೂಡ. ಹತ್ತಿ ಸೀರೆಗಳ ವಿನ್ಯಾಸ ಹಾಗೂ ಪರಂಪರೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ, ಭೌಗೋಳಿಕ ಸಂಕೇತಗಳ ನೋಂಡಣಿ ಮಾಡಿದೆ. ಇಳಕಲ್ಲ ಸೀರೆ, ಪ್ರಾಕೃತಿಕ ಹಾಗೂ ವಿನ್ಯಾಸದ ಅಂಶಗಳ ಮೇರೆಗೆ ಇಳಕಲ್ಲ ಸೀರೆ ಮತ್ತು ಗುಳೇದಗುಡ್ಡ ಖಣ ಉತ್ತಮ ಕ್ಯಾಂಬಿನೇಶನ್ ಉಡುಪು ಎಂಬ ಪ್ರತೀತಿ ಕೂಡ ಪಡೆದಿವೆ.
ಸಂಸತ್ ಭವನಕ್ಕೆ ಪ್ರೇರಣೆ !: ದೇಶದ ಸಂಸತ್ ಭವನ ನಿರ್ಮಾಣಕ್ಕೆ ಪ್ರೇರಣೆ ಎಂಬ ಖ್ಯಾತಿ ಪಡೆದ ಜಿಲ್ಲೆಯ ಐತಿಹಾಸಿಕ ಐಹೊಳೆಯ ದುರ್ಗಾದೇವಾಲಯ ಕೂಡ ಈ ಬಾರಿಯ ದಸರಾ ವೈಭವದಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಮತ್ತೂಂದು ಹೆಮ್ಮೆ. ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ದೊಡ್ಡ ಕೇಂದ್ರವೇ ಈ ಐಹೊಳೆ. ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎಂಬ ಖ್ಯಾತಿಯೂ ಈ ಗ್ರಾಮ ಪಡೆದಿದೆ. ಇಲ್ಲಿನ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಪ್ರಮುಖವಾಗಿದೆ. ಇದನ್ನು ಸೂರ್ಯ ದೇವಾಲಯ ಎಂದೂ ಕರೆಯಲಾಗುತ್ತದೆ.
ಕ್ರಿ.ಶ.742ರಲ್ಲಿ 2ನೇ ವಿಕ್ರಮಾದಿತ್ಯನ ಅಳಿಯ ಕೋಮಾರ್ ಸಿಂಗ್ ಎಂಬುವವನು ನಿರ್ಮಿಸಿದನು ಎಂಬ ಉಲ್ಲೇಖ ಇತಿಹಾಸದ ಪುಟಗಳಲ್ಲಿದೆ. ಅಸಂಖ್ಯಾತ ಕಲ್ಲಿನ ಕಂಬಗಳು ಹಾಗೂ ಇಂಗ್ಲಿಷ್ ಅಕ್ಷರದ ಯು ಆಕಾರದಲ್ಲಿ ವಿಶಿಷ್ಟವಾಗಿ ರಚಿಸಲಾಗಿದೆ. ಹೀಗಾಗಿ ದೆಹಲಿಯ ಸಂಸತ್ ಭವನ ನಿರ್ಮಾಣಕ್ಕೆ ಇದೇ ದುರ್ಗಾ ದೇವಾಲಯ ಪ್ರೇರಣೆ ಕೂಡಾ ಆಗಿದೆ ಎನ್ನಲಾಗಿದೆ.
ಮಲಪ್ರಭಾ ನದಿಯ ದಡದಲ್ಲಿರುವ ಈ ದೇವಾಲಯದ ಮುಖ ಮಂಟಪವು ರಾಮ-ಲಕ್ಷ್ಮಣ, ಸೀತಾ ಮಾತೆಯನ್ನು ಗುಹ-ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ವಾಸ್ತುಶಿಲ್ಪದ ಪುಣ್ಯ ಕಥೆಗಳನ್ನು ಈ ದೇವಾಲಯದಲ್ಲಿ ಮೂಡಿ ಬಂದಿವೆ. ಒಟ್ಟಾರೆ, ಜಿಲ್ಲೆಯ ಒಂದು ಐತಿಹಾಸಿಕ ಸ್ಥಳ, ಸುಂದರ ಉಡುಪು ಹಾಗೂ ವಿಶಿಷ್ಟತೆಯಿಂದ ಗಮನ ಸೆಳೆದ ಶ್ವಾನ ಸಹಿತ 3 ಸ್ತಬ್ಧ ಚಿತ್ರಗಳು ಮೈಸೂರು ದಸರಾದಲ್ಲಿ ವಿಶೇಷ ಗಮನ ಸೆಳೆದಿರುವುದು ಜಿಲ್ಲೆಯ ಹೆಮ್ಮೆ ಎಂದು ಸಂಭ್ರಮಿಸಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆ, ಹಲವು ವಿಶೇಷತೆ ಹಾಗೂ ವೈಶಿಷ್ಟ್ಯತೆಯಿಂದ ಗಮನ ಸೆಳೆದಿದೆ. ನಾಡಿನ ಪ್ರಸಿದ್ಧ ಮೈಸೂರು ದಸರಾದಲ್ಲಿ ಈ ಬಾರಿ ನಮ್ಮ ಜಿಲ್ಲೆಯ ಮುಧೋಳ ಶ್ವಾನ, ಇಳಕಲ್ಲ ಸೀರೆ ಹಾಗೂ ಐಹೊಳೆಯ ದುರ್ಗಾ ದೇವಾಲಯದ ಸ್ತಬ್ಧಚಿತ್ರಗಳು ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ. ದಸರಾ ಉತ್ಸವ ಕಮೀಟಿಯಿಂದ ಈ ಕುರಿತು ಸಂದೇಶ ಬಂದಾಗ, ಜಿಲ್ಲೆಯಿಂದ ಈ ಮೂರು ಸ್ತಬ್ಧ ಚಿತ್ರಗಳನ್ನು ಸಿದ್ಧಗೊಳಿಸಿ ಕಳುಹಿಸಲಾಗಿದೆ. –ಟಿ.ಭೂಬಾಲನ್, ಜಿಪಂ ಸಿಇಒ