ಮೈಸೂರು: ನಾಡಹಬ್ಬ ದಸರೆಯ ಸಂಭ್ರಮದಲ್ಲಿರುವ ಮೈಸೂರಿನ ಜನತೆ ಹಾಗೂ ಪ್ರವಾಸಿಗರಿಗೆ ಈ ಬಾರಿಯ ದಸರೆಯಲ್ಲಿ ಏರ್ -ಶೋ ನೋಡುವ ಅದೃಷ್ಟ ಕೂಡಿಬಂದಿದ್ದು, ರಾಜ್ಯದ ಮನವಿಗೆ ಸ್ಪಂದಿಸಿರುವ ರಕ್ಷಣಾ ಇಲಾಖೆ ಏರ್ ಶೋಗೆ ಅನುಮತಿ ನೀಡಿದೆ.
ಈ ಬಾರಿಯ ದಸರಾ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿತ್ತು. ಏರ್ ಶೋಗೆ ಅವಕಾಶ ನೀಡುವಂತೆ ಕೇಂದ್ರದ ರಕ್ಷಣಾ ಇಲಾಖೆಗೂ ಪತ್ರ ಬರೆಯಲಾಗಿತ್ತು. ಆದರೆ, ಮುಂಗಾರು ಕೈ ಕೊಟ್ಟು ಬರಗಾಲ ಆವರಿಸಿದ್ದರಿಂದ ಅದ್ಧೂರಿಯೂ ಅಲ್ಲದ, ಸರಳವು ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆಗೆ ನಿರ್ಧರಿಸಿದ್ದರಿಂದ ಏರ್ ಶೋ ನಡೆಯುವುದು ಅನುಮಾನ ಎನ್ನಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಪತ್ರಕ್ಕೆ ಸ್ಪಂದಿಸಿರುವ ರಕ್ಷಣಾ ಇಲಾಖೆ ಏರ್ ಶೋಗೆ ಸಮ್ಮತಿ ಸೂಚಿಸಿದೆ. ಆದರೆ, ಇನ್ನೂ ಅಧಿಕೃತ ದಿನಾಂಕ ಘೋಷಣೆಯಾಗಿಲ್ಲ.
ಅಧಿಕಾರಿಗಳಿಂದ ಪರಿಶೀಲನೆ: ಏರ್ ಶೋ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಬನ್ನಿಮಂಟಪದ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಹಾಗೂ ಏರ್ ಶೋ ನಡೆಸಲುಬೇಕಾದ ರೂಪುರೇಷೆಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರು ಏರ್ ಬೇಸ್ಡ್ ಗ್ರೂಪ್ ಕ್ಯಾಪ್ಟನ್ ಡಿ.ಕೆ.ಓಜಾ ಅವರೊಂದಿಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಏರ್ ಶೋ ನಡೆಸುವ ಸ್ಥಳ, ದಿನಾಂಕ ಹಾಗೂ ಸಮಯದ ಕುರಿತು ಚರ್ಚೆ ನಡೆಸಿದರು. ಏರ್-ಶೋನಲ್ಲಿ ಇಂಡಿಯನ್ ಏರ್‌ಫೋರ್ನ ಹೆಲಿಕಾಫ್ಟರ್‌ಗಳ ಪ್ರದರ್ಶನ, ಸ್ಕೈಡೈವಿಂಗ್ ಇನ್ನಿತರ ಪ್ರದರ್ಶನಗಳು ನಡೆಯಲಿವೆ. ಏರ್‌ಫೋರ್ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ ನಂತರ ಏರ್ ಶೋ ಕಾರ್ಯಕ್ರಮದ ದಿನಾಂಕ ಅಧಿಕೃತಗೊಳ್ಳಲಿದೆ.
ದಸರೆಗೆ ಮತ್ತಷ್ಟು ಮೆರುಗು: ದಸರಾ ಹಬ್ಬ ಸಾಂಪ್ರ ದಾಯಿಕವಾಗಿ ನಡೆಸದರೂ ಪ್ರತಿ ವರ್ಷ ನಡೆಯು ತ್ತಿದ್ದ ಎಲ್ಲಾ ಕಾರ್ಯಕ್ರಮಗಳು ಈ ಬಾರಿಯೂ ಇರಲಿವೆ. ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಯುವ ದಸರಾ, ವಸ್ತು ಪ್ರದರ್ಶನ ದಸರಾ ಮಹೋತ್ಸವಕ್ಕೆ ಕಳೆ ತಂದುಕೊಡಲಿದ್ದು, ಇದಕ್ಕೆ ಮೊತ್ತೂಂದು ಕಾರ್ಯಕ್ರಮ ಸೇರ್ಪಡೆಯಾಗಿದೆ. ಈ ಬಾರಿಯ ದಸರಾ ಉತ್ಸವದಲ್ಲಿ ಏರ್ ಶೋ ವಿಶೇಷವಾಗಿದ್ದು, ಆಗಸದಲ್ಲಿ ಲೋಹದ ಹಕ್ಕಿಗಳ ಹಾರಾಟವನ್ನು ಜನರು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಇದರಿಂದ ದಸರಾ ಉತ್ಸವದ ಮೆರುಗು ಮತ್ತಷ್ಟು ಹೆಚ್ಚಲಿದೆ.
ಈ ಹಿಂದೆಯೂ ನಡೆದಿತ್ತು ಏರ್ ಶೋ: ಮೈಸೂರು ದಸರಾ ಸಂದರ್ಭದಲ್ಲಿ ಈ ಹಿಂದೆಯೂ ಏರ್ ಶೋ ನಡೆದಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ 2017ರಲ್ಲಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ 2019ರ ಅವಧಿಯಲ್ಲಿ ನಗರದ ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ಮೈದಾನದಲ್ಲಿ ವಾಯುಪಡೆಯಿಂದ ವಿಶೇಷ ಏರ್ ಶೋ ನಡೆದಿತ್ತು.
ಸದ್ಯಕ್ಕೆ ಈ ಬಾರಿಯ ಏರ್ ಶೋಗೆ ಅನುಮತಿ ದೊರೆತಿದ್ದು, ಬನ್ನಿಮಂಟಪ ಮೈದಾನದ ಪರಿಶೀಲನೆ ನಡೆದಿದೆ. ಆದರೆ, ಜಾಗ ಇನ್ನೂ ಅಂತಿಮವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.