Advertisement
ತೋಟದ ಹಳ್ಳ, ಕೆರೆ ಬತ್ತಿದವು. ಮನೆಯ ಕುಡಿಯುವ ನೀರಿನ ಬಾವಿಯೂ ಒಣಗಿತು. ಸುಮಾರು 50 ಅಡಿ ಆಳದ ಬಾವಿಯಲ್ಲಿ ದಿನಕ್ಕೆ ನಾಲ್ಕು ಬಿಂದಿಗೆ ನೀರು ಮಾತ್ರ ದೊರೆಯುತ್ತಿತ್ತು. ನೀರೆತ್ತಲು ವಿದ್ಯುತ್ ಪಂಪು ಪ್ರಯೋಜನವಿಲ್ಲ. ನಿಧಾನಕ್ಕೆ ಹಗ್ಗದಿಂದ ಎತ್ತಬೇಕು. ಬಿಂದಿಗೆಯ ನೀರನ್ನು ದೊಡ್ಡ ಪಾತ್ರೆಗೆ ಸುರುವಿ ಒಂದೆರಡು ತಾಸು ಬಳಿಕ ಕೆಸರು ಕೆಳಗಡೆ ಕುಳಿತ ನಂತರ ಸ್ನಾನ, ಪಾತ್ರೆ ತೊಳೆಯಲು ಬಳಸುತ್ತಿದ್ದರು. ದೊಡ್ಡಿಯ ಮೂರು ನಾಲ್ಕು ದನಕರುಗಳಿಗೆ ಕುಡಿಯಲು ನೀರು ಒದಗಿಸುವುದು ಕಷ್ಟವಾಯ್ತು. ಮನೆಮಂದಿಗೆ ನಿತ್ಯ ಒಂದು ಬಿಂದಿಗೆ ಕುಡಿಯುವ ನೀರನ್ನು ಕಿಲೋ ಮೀಟರ್ ದೂರದಿಂದ ತರುತ್ತಿದ್ದರು. ಬಾವಿಯ ನೀರು ಒಣಗಿತು ಎನ್ನುವಾಗ ಆಳವನ್ನು ಒಂದೆರಡು ಅಡಿಗೆ ಹೆಚ್ಚಿಸಿದರೂ ಪ್ರಯೋಜನವಾಗಲಿಲ್ಲ. ನಿಧಾನಕ್ಕೆ ಅಸರುವ ನೀರು ನಂಬಿದರು. ಒಂದು ಬಾವಿ, ನಾಲ್ಕು ಬಿಂದಿಗೆ ನೀರು ನಂಬಿ ಮಲೆನಾಡಿನ ಎರಡು ಕುಟುಂಬಗಳು ಎರಡು ತಿಂಗಳು ಬದುಕಿದವು.
Related Articles
Advertisement
ಬಯಲುಸೀಮೆಯಲ್ಲಿ ಎಷ್ಟು ಕೊರೆದರೂ ನೀರು ಬರುತ್ತಿಲ್ಲವೆಂದು ರೈತರು ತೆಪ್ಪಗಾದಾಗ ಹೊಸನೆಲೆಯಲ್ಲಿ ಕೊರೆಯುವ ಯಂತ್ರಕ್ಕೆ ಮಾರುಕಟ್ಟೆ ವಿಸ್ತರಿಸಿದೆ.
ಮಳೆ ನೀರು ಇಂಗಿಸಲು 5-10 ಸಾವಿರ ವ್ಯಯಿಸಲು ಹಿಂದೆಮುಂದೆ ನೋಡುವವರು ಆಳದ ಕೊಳವೆ ಬಾವಿಗೆ ಲಕ್ಷಾಂತರ ಹಣ ಸುರಿಯುವುದು ಏಕೆ? ಪ್ರಶ್ನೆ ಕಾಡುತ್ತದೆ. ಭೂಮಿಯ ಆಳದಲ್ಲಿ ಹೇರಳವಾದ ನೀರಿದೆ. ಅದು ಎಂದೂ ಖರ್ಚಾಗುವುದಿಲ್ಲವೆಂಬ ತಿಳುವಳಿಕೆ ಇದೆ. ಕಣ್ಣಿಗೆ ಕಾಣುವ ಕೆರೆ, ಬಾವಿ, ಹಳ್ಳ, ಮಳೆ ನೀರಿಗಿಂತ ಆಳದ ನೀರಿನತ್ತ ಚಿತ್ರ ವಿಶ್ವಾಸ ಮೂಡಿದೆ. ನೀರಿನ ಒಂದು ವ್ಯವಸ್ಥೆಯನ್ನು ಮಾರುಕಟ್ಟೆಯ ಮಗ್ಗುಲಿಗೆ ತಿರುಗಿಸಿದ ಪರಿಣಾಮವಿದು. ಶ್ರೀಮಂತ ಕೃಷಿಕರು ಒಂದಾದ ನಂತರ ಒಂದು ಬಾವಿ ಕೊರೆಯುವುದು, ತೋಟ ವಿಸ್ತರಿಸಿಸುವುದು ಒಂದು ಆದರ್ಶವಾಗಿ ಎಲ್ಲರಿಗೂ ಕಾಣಿಸುತ್ತದೆ. ಅಡಿಕೆ, ಬಾಳೆ, ಶುಂಠಿ, ಪಪ್ಪಾಯ ಮುಂತಾದ ವಾಣಿಜ್ಯ ಬೆಳೆಗಳ ವಿಸ್ತರಣೆ ನೀರಿನ ಬಳಕೆಯನ್ನು ಹಿಗ್ಗಿಸಿದೆ. ಇಂಥ ಕೃಷಿ ಸಾಧನೆಗಳೆಲ್ಲ ಕೊಳವೆ ಬಾವಿ ತೆರೆಯುವುದರಿಂದ ಆರಂಭವಾಗುತ್ತದೆಂದು ಬಹುಸಂಖ್ಯಾತರು ನಂಬಿದ್ದಾರೆ. ಬಾವಿ ತೋಡುವವರು, ಕೆರೆ ರೂಪಿಸುವವರು, ಇಂಗುಗುಂಡಿ ನಿರ್ಮಿಸುವ ಕೂಲಿಗಳನ್ನು ಹುಡುಕುವುದಕ್ಕಿಂತ ಒಂದು ದೂರವಾಣಿ ಕರೆಯಲ್ಲಿ ಮನೆಯಂಗಳಕ್ಕೆ ಕೊಳವೆ ಬಾವಿಯಂತ್ರ ತರಿಸುವುದು ಸುಲಭವಾಗಿದೆ. ನೀರಿನ ಸಮಸ್ಯೆ ಹೆಚ್ಚುತ್ತಿರುವಂತೆ ನಮ್ಮ ಜನ ಕೂಲಿಗಳಿಗಿಂತ ಯಂತ್ರಗಳ ಜೊತೆ ಮಾತಾಡಲು ಕಲಿತಿದ್ದಾರೆ.
ಸುಗ್ಗಿಯಲ್ಲಿ ದೊರಕಿದ ಹಣವನ್ನು ಠೇವಣಿ ಇಡದೇ ನಾವು ಬರದ ಆಪತ್ತಿನಲ್ಲಿ ಬ್ಯಾಂಕಿನ ಹಣ ಪಡೆದು ಬಚಾವಾಗಲು ಸಾಧ್ಯವೇ? ಇಂದು ನಿಸರ್ಗದ ಕೊಡುಗೆಯಾದ ಮಳೆ ನೀರು ನಮ್ಮ ಮನೆಯ ಸುತ್ತಲಿನ ಗುಡ್ಡಬೆಟ್ಟಗಳಿಂದ ಇಳಿದು ಓಡುವಾಗ ತಡೆದು ನಿಲ್ಲಿಸದ ನಾವು, ಆಳದ ನೀರಿಗೆ ಕೊಳವೆ ಬಾವಿಯ ಮೂಲಕ ಕನ್ನ ಹಾಕುತ್ತಿದ್ದೇವೆ. ನಮ್ಮ ಕೃಷಿ ಬದುಕಿನ ವಿದ್ಯೆಗಳಲ್ಲಿ ನೀರು ಹಿಡಿದು ಗೆಲ್ಲುವುದನ್ನು ನಾವು ಕಲಿಯುತ್ತಿಲ್ಲ. ಇತ್ತೀಚೆಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು “ರೈತರು ಇನ್ನು ಮಳೆ ನಂಬಿ ಬೇಸಾಯ ಮಾಡುವುದನ್ನು ಬಿಡಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮುಂಗಾರು, ಹಿಂಗಾರು ಕಾಲಕ್ಕೆ ತಕ್ಕಂತೆ ಸುರಿಯುತ್ತದೆಂದು ನಂಬುವಂತಿಲ್ಲ. ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ ಬರುತ್ತಿದೆ. ಮಳೆ ಬಂದಿಲ್ಲ ಎಂಬುದಕ್ಕಿಂತ ಬಂದ ಮಳೆಯಲ್ಲಿ ಎಷ್ಟು ನೀರು ಹಿಡಿದೆವೆಂಬುದು ಪ್ರತಿ ರೈತನ ಕೃಷಿ ಭವಿಷ್ಯದ ಸೂತ್ರವಾಗಬೇಕು. ನಮ್ಮ ಭೂಮಿಯನ್ನು ಅರ್ಥಮಾಡಿಕೊಂಡಂತೆ ನಮ್ಮ ಅಂತರ್ಜಲ, ಮಳೆ ನೀರನ್ನೂ ಅರಿಯುವುದು ಅಗತ್ಯವಾಗಿದೆ. ಮಳೆ ಬರುತ್ತದೆ, ನೀರಾಗುತ್ತದೆ. ಆಳದ ಕೊಳವೆ ಬಾವಿಯಲ್ಲಿ ಹೇರಳ ನೀರು ಸಿಗುತ್ತದೆಂಬ ಕುರುಡು ನಂಬಿಕೆ ಮರೆತು ಮಳೆ ಹಿಡಿದು ಗೆಲ್ಲುವುದು ಕಲಿಯಬೇಕು. ಚಿಕ್ಕವರಿದ್ದಾಗ ನಮ್ಮ ಮಲೆನಾಡಿನ ಹಿರಿಯರು ಒಂದು ಕತೆ ಹೇಳುತ್ತಿದ್ದರು. ಅಬ್ಬರದ ಮಳೆ ಸುರಿದು ಮೈಯೆಲ್ಲ ಒದ್ದೆಯಾಗಿ ಮರದಲ್ಲಿ ಕುಳಿತ ಮಂಗಗಳು ಚಳಿಯಲ್ಲಿ ನಡುಗುತ್ತವೆ. ರಾತ್ರಿ ಎಲ್ಲ ಮಂಗಗಳೂ ಸೇರಿ ನಾಳೆ ಮಳೆಯಿಂದ ಬಚಾವಾಗಿ ಬೆಚ್ಚಗೆ ಬದುಕಲು ಮನೆ ಕಟ್ಟಬೇಕೆಂದು ಚರ್ಚಿಸಿ ನಿರ್ಧರಿಸುತ್ತವಂತೆ ! ಮರು ದಿನ ಬೆಳಗಾಗುತ್ತಿದ್ದಂತೆ ಹಸಿದ ಮಂಗಗಳು ಹಣ್ಣಿನ ಮರ ಹುಡುಕಿ ಓಡುತ್ತವೆ, ಯಾವುದಕ್ಕೂ ಮನೆ ಕಟ್ಟಲು ಬಿಡುವಿಲ್ಲದಂತೆ ವರ್ತಿಸುತ್ತವೆ. ಮತ್ತೆ ಸಂಜೆ ಸೇರಿದಾಗ ಮನೆ ಕಟ್ಟುವ ಮಾತು ಪುನರಾವರ್ತನೆಯಾಗುತ್ತದೆ. ಹೀಗಾಗಿ “ಮಂಗ ಮನೆ ಕಟ್ಟಿದಂತೆ !’ ಮಾತು ಮಲೆನಾಡಿನಲ್ಲಿ ಜನಜನಿತವಾಗಿದೆ. ಬರದ ಸಂಕಷ್ಟದಲ್ಲಿ ಬಳಲಿದವರು, ಜಲಕ್ಷಾಮದಿಂದ ಕಂಗಾಲಾದ ರೈತರು ಈ ವರ್ಷದ ಮಳೆಗಾಲದಲ್ಲಿ ಕಡ್ಡಾಯವಾಗಿ ನೀರಿಂಗಿಸುವ ಮಾತಾಡುತ್ತಾರೆ. ಅಭ್ಯಾಸ ಬಲದಲ್ಲಿ ಮರೆಯುತ್ತಾರೆ. ಜಲಸಂಕಷ್ಟ ಸಂರಕ್ಷಣೆಯ ಪಾಠವಾಗಬೇಕು. ನಮ್ಮ ನೀರಿನ ದುಃಖ ಪರಿಹರಿಸಲು ಯಾರೋ ಅವತರಿಸಿ ಸಹಾಯಮಾಡುತ್ತಾರೆಂದು ಯೋಚಿಸಿ ಆಲಸಿಗಳಾಗುವುದು ರೈತರ ಮೂರ್ಖತನ. ನಿದ್ದೆ ಮಾಡಿದವರನ್ನು ಎಬ್ಬಿಸಬಹುದು. ಆದರೆ ನಿದ್ದೆ ಮಾಡಿದಂತೆ ನಟಿಸುವವರನ್ನು ಎಚ್ಚರಿಸುವುದು ಕಷ್ಟದ ಕೆಲಸ. ಜಲಕ್ಷಾಮದ ಕಷ್ಟ ಇನ್ನೂ ಅರ್ಥವಾಗದಿದ್ದರೆ, ಮಳೆ ನೀರಿನ ಸಂರಕ್ಷಣೆಯ ಮಹತ್ವ ಅರಿವಾಗದಿದ್ದರೆ ಹತ್ತಾರು ವರ್ಷಗಳಿಂದ ಸರಿಯಾದ ಮಳೆ ಕಾಣದ ಚಿತ್ರದುರ್ಗದ ಚಳ್ಳಕೆರೆ, ಹಾಸನದ ಜಾವಗಲ್ ಪ್ರದೇಶ ಸುತ್ತಬಹುದು. ನೀರಿಲ್ಲದೇ ಗುಳೇ ಹೋದ ರೈತರ ಬದುಕು ಅರಿಯಲು ಬೆಂಗಳೂರು, ಗೋವಾ, ಮುಂಬೈ ನೋಡಬಹುದು. ಬಿದ್ದ ಮಳೆ ಗಮನಿಸಿದೇ ಇದ್ದಲ್ಲೇ ನಿದ್ದೆ ಹೋದರೆ ನಮ್ಮನ್ನು ಎಬ್ಬಿಸಿ ಓಡಿಸಲಿಕ್ಕೆ ಕೊಳವೆ ಬಾವಿ ಕೊರೆಯುವವರು, ಸಾಲ ಕೊಟ್ಟವರು ಬರಬಹುದು. – ಶಿವಾನಂದ ಕಳವೆ