Advertisement

ದಸರಾ ಮುನ್ನ ಕಲಾ ಗ್ಯಾಲರಿ ವೀಕ್ಷಣೆಗೆ ಸಜ್ಜು

11:24 AM Sep 17, 2018 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸುವ ಜಗನ್ಮೋಹನ ಅರಮನೆ (ಜಯಚಾಮರಾಜೇಂದ್ರ) ಕಲಾ ಗ್ಯಾಲರಿ ನವೀಕರಣ ಕಾಮಗಾರಿ ಭರದಿಂದ ನಡೆಸುತ್ತಿದ್ದು, ದಸರಾ ಮಹೋತ್ಸವ ಆರಂಭಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಸಜ್ಜುಗೊಳಿಸುವುದಾಗಿ ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್‌ ಹೇಳಿದರು.

Advertisement

ನಗರದ ಪ್ರತಿಷ್ಠಿತ ಜಗನ್ಮೋಹನ ಅರಮನೆಯು ಪರಂಪರಿಕ ಕಟ್ಟಡವಾಗಿದ್ದು, ಇಲ್ಲಿರುವ ಶ್ರೀಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿ ಐತಿಹಾಸಿಕ ಛಾಯಾಚಿತ್ರಗಳು, ಪೇಟಿಂಗ್‌ಗಳನ್ನು ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ ಶತಮಾನದಷ್ಟು ಹಳೆಯದಾದ ಕಟ್ಟಡಕ್ಕೆ ನಿಗದಿತ ಸಮಯದಲ್ಲಿ ಬಣ್ಣ ಹಾಕದ ಕಾರಣ ಕಟ್ಟಡ ತನ್ನ ಪ್ರಾಚೀನತೆ ಹಾಗೂ ವೈಭವತೆ ಕಳೆದುಕೊಂಡಿತ್ತು.

ಈ ಎಲ್ಲಾ ಕಾರಣದಿಂದಾಗಿ ಮೈಸೂರಿನ ಹೃದಯಭಾಗದಲ್ಲಿರುವ ಕಲಾ ಗ್ಯಾಲರಿಯನ್ನು ನವೀಕರಣ ಮಾಡಲಾಗುತ್ತಿದೆ. ಈಗಾಗಲೇ ಶೇ.60 ದುರಸ್ತಿ ಕಾರ್ಯ ಮುಗಿದಿದ್ದು, ದಸರಾ ಉತ್ಸವ ಆರಂಭದೊಳಗೆ ದುರಸ್ತಿ ಕೆಲಸ ಮುಗಿಸಬೇಕೆಂಬ ಅಭಿಲಾಷೆ ಇದೆ. ರೂಪ್‌ ಕಾರ್ಯ ಸಂಪೂರ್ಣವಾಗಿದ್ದು, ಮುಂದಿನ ಶತಮಾನ ಕಾಲದ ಪೇಂಟಿಂಗ್‌ ಸೇರಿ ಯಾವುದೇ ವಸ್ತುಗಳು ಹಾನಿಗೀಡಾಗದಂತೆ ಸಂರಕ್ಷಿಸಲಾಗುತ್ತದೆ ಎಂದು ಜಗನ್ಮೋಹನ ಅರಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜನ್ಮದಿನದ ಉಡುಗೊರೆ: ಯದುವಂಶದ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್‌ ಅವರ ನೂರನೇ ವರ್ಷದ ಜನ್ಮದಿನದ ಪ್ರಯುಕ್ತ ನವೀಕರಣ ಕಾರ್ಯ ಮುಗಿಸುವ ಸಾಧ್ಯತೆ ಇದೆ. ಆ ಮೂಲಕ ನಮ್ಮ ಮಾವನವ ಜನ್ಮದಿನಕ್ಕೆ ಉಡುಗೊರೆಯಾಗಿ ಅರ್ಪಿಸಲಿದ್ದು, ಕಾಮಗಾರಿಯಲ್ಲಿ ಅಂದಾಜು 70 ಸಿಬ್ಬಂದಿ ರಾತ್ರಿ 12ಗಂಟೆವರೆಗೂ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನ ಜಿ.ಎನ್‌.ಹೆರಿಟೇಜ್‌ ಸಂಸ್ಥೆಯು ಈ ಜವಾಬ್ದಾರಿ ಪಡೆದಿದ್ದು, ಕಟ್ಟಡದ ಪ್ರತಿಯೊಂದು ಭಾಗವನ್ನು ಗಮನಿಸಿ ನವೀಕರಣ ಮಾಡಲಾಗುತ್ತಿದೆ. ಜಗನ್ಮೋಹನ ಅರಮನೆ ಆರ್ಟ್‌ ಗ್ಯಾಲರಿಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಶ್ರೀ ಜಯಚಾಮರಾಜೇಂದ್ರ ಒಡೆಯರ್‌, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕಾಲದ ಅಪರೂಪದ ವಸ್ತುಗಳನ್ನು ಸಂಗ್ರಹಿಸಡಲಾಗಿದೆ. ಹೀಗಾಗಿ ಯಾವುದೇ ಒಂದು ವಸ್ತುಗಳನ್ನು ಹೊರಕ್ಕೆ ತಗೆದುಕೊಂಡು ಹೋಗದೆಂತೆ ಇದೇ ಸ್ಥಳದಲ್ಲೇ ನವೀಕರಣಗೊಳಿಸಲಾಗುತ್ತಿದೆ ಎಂದರು.

Advertisement

ಶುಲ್ಕ ಹೆಚ್ಚಳಕ್ಕೆ ಚಿಂತನೆ: ಜಗನ್ಮೋಹನ ಅರಮನೆ ಆರ್ಟ್‌ ಗ್ಯಾಲರಿ ನವೀಕರಣ ಕೆಲಸ ಮುಗಿದು ವೀಕ್ಷಣೆಗೆ ಅವಕಾಶ ಕಲ್ಪಿಸಿದಾಗ ಪ್ರವೇಶ ಶುಲ್ಕ ಹೆಚ್ಚಳ ಮಾಡುವ ಚಿಂತನೆ ಇದೆ. ಹಲವು ವರ್ಷದಿಂದ ಶುಲ್ಕ ಹೆಚ್ಚಿಸಿಲ್ಲ, ಜತೆಗೆ ಟ್ರಸ್ಟ್‌ನಲ್ಲಿ ಹಣವಿಲ್ಲ. ಆದ್ದರಿಂದ ಪ್ರವೇಶ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ. ಹೆರಿಟೇಜ್‌ ಕಟ್ಟಡವಾಗಿದ್ದರೂ ಸಹ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ನಾವೇ ಸ್ವಂತ ಖರ್ಚಿನಲ್ಲಿ ನವೀಕರಣ ಕೆಲಸ ಮಾಡಿಸುತ್ತಿದ್ದೇವೆ.

ನವೀಕರಣದ ನಂತರ ಸಾರ್ವಜನಿಕರು ವೀಕ್ಷಣೆ ಮಾಡಲು ಅಗತ್ಯವಿರುವ ಸ್ಥಳವನ್ನು ಬಿಟ್ಟು ಹತ್ತಿರದಿಂದ ಯಾವುದೇ ಪೇಂಟಿಂಗ್‌, ವಸ್ತುಗಳನ್ನು ಮುಟ್ಟದಂತೆ ನೋಡಿಕೊಳ್ಳುವ ಜತೆಗೆ ಅಗತ್ಯ ಭದ್ರತೆಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅರಮನೆ ಖಾಸಗಿ ಕಾರ್ಯದರ್ಶಿ ಲಕ್ಷಿನಾರಾಯಣ್‌, ಶರತ್‌ಚಂದ್ರ ಬೊಯಪತಿ, ಮಾಳವಿಕ ಇನ್ನಿತರರು ಹಾಜರಿದ್ದರು. 

ಮಳಿಗೆಗಳ ತೆರವಿಗೆ ಮನವಿ: ಜಗನ್ಮೋಹನ ಅರಮನೆ ಆವರಣದಲ್ಲಿರುವ ಮಳಿಗೆಗಳನ್ನ ತೆರವುಗೊಳಿಸುವಂತೆ ಮಾಲೀಕರಿಗೆ ಹೇಳಿದ್ದೇವೆ. ಇದಕ್ಕಾಗಿ ಕಳೆದ ಒಂದು ವರ್ಷದಿಂದ ಬಾಡಿಗೆಯನ್ನು ಪಡೆದಿಲ್ಲ ಹಾಗೂ ಬಾಡಿಗೆಯನ್ನು ಹೆಚ್ಚಿಸಿಲ್ಲ. ಆದರೆ ಕೆಲವರು ಆರು ತಿಂಗಳು ಸಮಯ ಪಡೆದುಕೊಂಡಿದ್ದರೂ, ಈವರೆಗೂ ಮಳಿಗೆ ಬಿಟ್ಟುಕೊಟ್ಟಿಲ್ಲ. ಜಗನ್ಮೋಹನ ಅರಮನೆ ಆವರಣದಲ್ಲಿ 35 ಮಳಿಗೆಗಳಿದ್ದು, ಎಲ್ಲರಿಗೂ ಖಾಲಿ ಮಾಡುವಂತೆ ಮನವಿಯನ್ನು ಮಾಡಲಾಗಿದೆ. ಆದರೆ ಇದಕ್ಕಾಗಿ ಕಾಲಾವಕಾಶ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರು ನ್ಯಾಯಾಲಯದ ಮೊರೆ ಹೋದರೂ ಅಚ್ಚರಿಯಿಲ್ಲ ಎಂದು ನುಡಿದರು. 

Advertisement

Udayavani is now on Telegram. Click here to join our channel and stay updated with the latest news.

Next