Advertisement

ದುರ್ಯೋಧನನ ವೈಭವೀಕರಣ ಸಲ್ಲ: ಪಲಿಮಾರು ಶ್ರೀ

12:21 AM Nov 07, 2019 | Sriram |

ಉಡುಪಿ: ಧರ್ಮದ ಹಾದಿಯಲ್ಲಿ ನಡೆದ ಪಾಂಡವರನ್ನು ಕೊಂಡಾಡಬೇಕೇ ವಿನಾ ಅಧರ್ಮದ ಹಾದಿಯಲ್ಲಿ ನಡೆದ ದುರ್ಯೋಧನನ ವೈಭವೀಕರಣ ಸಲ್ಲದು ಎಂದು ಪರ್ಯಾಯ ಶ್ರೀಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಪರ್ಯಾಯ ಪಲಿಮಾರು ಮಠ, ತಣ್ತೀ ಸಂಶೋಧನ ಸಂಸತ್‌ ಮತ್ತು ಬೆಂಗಳೂರಿನ ನಿನ್ನಾ ಒಲುಮೆಯ ಪ್ರತಿಷ್ಠಾನ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮಗ್ರ ಶ್ರೀ ಮಹಾಭಾರತ ಪರಿಷ್ಕೃತ ಸಂಪುಟದ ಸಮರ್ಪಣ ಉತ್ಸವ “ವ್ಯಾಸ -ದಾಸ ವಿಜಯ ಉತ್ಸವ’ದಲ್ಲಿ “ಶ್ರೀವಿಷ್ಣು ಸಹಸ್ರನಾಮ ಗ್ರಂಥ’ದ ಮೂರು ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕುರುಕ್ಷೇತ್ರ’ ಚಿತ್ರದಲ್ಲಿ ದುರ್ಯೋಧನನನ್ನು ವೈಭವೀಕರಿಸಿರುವುದು ಮಹಾಭಾರತಕ್ಕೆ ಮಾಡಿರುವ ದೊಡ್ಡ ಅಪಚಾರ. ಧರ್ಮದ ಹಾದಿಯಲ್ಲಿ ನಡೆದ ಪಾಂಡವರು ಮಹಾಭಾರತದಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಮಹಾಭಾರತದ ಸರಿಯಾದ ರೀತಿಯ ಚಿಂತನ ಮಂಥನ ನಡೆಯಬೇಕಾಗಿದೆ ಎಂದರು.

ಸೋಸಲೆ ವ್ಯಾಸರಾಜ ಮಠ ಶ್ರೀವಿದ್ಯಾಶ್ರೀಶತೀರ್ಥ ಸ್ವಾಮೀಜಿ ಗ್ರಂಥ ಬಿಡುಗಡೆ ಮಾಡಿದರು. ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಪ್ರಯಾಗದ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು, ಸಂಸ್ಕೃತ ವಿವಿ ಕುಲಪತಿ ಪ್ರೊ| ವಿ. ಗಿರೀಶ್ಚಂದ್ರ, ಕುಲಸಚಿವ ಡಾ| ವೀರನಾರಾಯಣ ಪಾಂಡುರಂಗಿ ಉಪಸ್ಥಿತರಿದ್ದರು.

ರಾಜನಿಗೆ ಧರ್ಮದ ಚೌಕಟ್ಟು: ತೇಜಸ್ವಿ ಸೂರ್ಯ
ಮಹಾಭಾರತದ ಸಮಗ್ರ ಸಂಪುಟ ಲೋಕಾರ್ಪಣೆ ಸಂದರ್ಭ “ಮಹಾಭಾರತದ ಸಾಂವಿಧಾನಿಕ ನೀತಿಗಳು’ ಎಂಬ ವಿಷಯದ ಕುರಿತು ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ರಾಜನನ್ನೂ ಧರ್ಮವೆಂಬ ನೀತಿಯ ಚೌಕಟ್ಟಿನಲ್ಲಿ ಕಟ್ಟಿ ಹಾಕಿದ್ದು ಮಹಾಭಾರತದಲ್ಲಿ ಕಂಡುಬರುತ್ತದೆ. ಅಧಿಕಾರಿಗಳು, ನ್ಯಾಯಾಧೀಶರು, ಪ್ರಧಾನಿ, ಸಂಸತ್ತನ್ನೂ ಸಂವಿಧಾನದ ಸಾರ್ವಭೌಮತೆ ಕಟ್ಟಿ ಹಾಕಿದೆ. ಅದೇ ರೀತಿ ವಿದುರನೀತಿ, ಭೀಷ್ಮನ ನೀತಿಗಳ ಅಂಶಗಳು ಭಾರತದ ಸಂವಿಧಾನದಲ್ಲಿಯೂ ಕಂಡುಬರುತ್ತವೆ ಎಂದರು.

Advertisement

ಸಂವಿಧಾನವು ಹಕ್ಕುಗಳಷ್ಟೇ ಕರ್ತವ್ಯಗಳಿಗೂ ಪ್ರಾಮುಖ್ಯ ನೀಡಿದೆ. ರಾಜನಾದವ ಇಂದ್ರಿಯ ನಿಗ್ರಹಿಯಾಗಿರಬೇಕು, ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಎದುರು ಸಮಾನ ಎಂದು ಸಂವಿಧಾನ ಹೇಳಿದೆ. ರಾಮ, ಕೃಷ್ಣ ಬೇರೆ ಬೇರೆಯಾಗಿದ್ದರೂ ಅವರ ಉದ್ದೇಶ ಧರ್ಮದ ಸಂರಕ್ಷಣೆಯಾಗಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದರು.

ಮಹಾಭಾರತ ಅಗತ್ಯ: ರೋಹಿತ್‌ ಚಕ್ರತೀರ್ಥ
ಮಹಾಭಾರತವನ್ನು ಓದಿದರೆ ಮಾತ್ರ ಸಮಗ್ರ ಭಾರತವನ್ನು ಅರಿಯಲು ಸಾಧ್ಯ. ಉತ್ತರದಿಂದ ಹಿಡಿದು ದಕ್ಷಿಣದವರೆಗೆ ರಾಮಾಯಣದ ಅಧ್ಯಯನದಿಂದಲೂ ಪಶ್ಚಿಮದಿಂದ ಪೂರ್ವದವರೆಗೆ ಮಹಾಭಾರತದ ಅಧ್ಯಯನದಿಂದಲೂ ಅರಿಯಲು ಸಾಧ್ಯ ಎಂದು ರಾಮಮನೋಹರ ಲೋಹಿಯಾ ಅಭಿಪ್ರಾಯಪಟ್ಟಿರುವುದಾಗಿ ಲೇಖಕ, ಚಿಂತಕ ರೋಹಿತ್‌ ಚಕ್ರತೀರ್ಥ ಹೇಳಿದರು.

“ಮಹಾಭಾರತದ ಹಿನ್ನೆಲೆಯಲ್ಲಿ ಧರ್ಮಯುದ್ಧ’ ವಿಷಯದ ಕುರಿತು ಮಾತನಾಡಿದ ಅವರು, ಮಹಾಭಾರತದಲ್ಲಿ ದಿನಾಂಕಗಳಿಲ್ಲ ಎಂಬ ಕಾರಣಕ್ಕೆ ಸಂಶಯದಿಂದ ನೋಡಲಾಗುತ್ತಿದೆ. ಇದು ಪಾಶ್ಚಾತ್ಯ ಇತಿಹಾಸದ ಕ್ರಮ. ದಿನಾಂಕಗಳಿಗೆ ಮಹತ್ವ ಕೊಡದೆ ವ್ಯಕ್ತಿಗಳ ಪಾತ್ರವೇನು ಎಂಬುದನ್ನು ಕಥೆಯ ಮೂಲಕ ತಿಳಿಸುವುದು ಭಾರತೀಯ ಕ್ರಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next