ಮಹಾಭಾರತದಲ್ಲಿ ದುರ್ಯೋಧನನೇ ಬಹುದೊಡ್ಡ ಖಳನಾಯಕ. ದುಷ್ಟ ಕೆಲಸಗಳಿಂದಲೇ ಸುಯೋಧನ ನಮಗೆ ನೆನಪಾಗುತ್ತಾನೆ. ಆದರೆ, ಈ ದುರ್ಯೋಧನನಿಗೂ ಆರಾಧಕರಿದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿರದ ವಿಚಾರ. ನಮ್ಮ ಪಕ್ಕದ “ದೇವರನಾಡು’ ಕೇರಳದಲ್ಲಿ ದುರ್ಯೋಧನನಿಗೇ ಒಂದು ದೇವಾಲಯವಿದೆ. ನಾವು ಕೊಲ್ಲಂ ಜಿಲ್ಲೆಯ ಪೊರುವಾಝಿಗೆ ಹೋಗಿದ್ದಾಗ, ಈ ದೇವಸ್ಥಾನಕ್ಕೆ ಹೋಗಿ, ಒಂದಷ್ಟು ಹೊತ್ತು ಕಳೆದೆವು.
ಪ್ರತಿವರ್ಷ ಮಾರ್ಚ್‌ನಲ್ಲಿ ಇಲ್ಲಿ ಕೌರವೇಶ್ವರನಿಗೆ ಜಾತ್ರೆ ನಡೆಯುತ್ತದೆ. ಗ್ರಾಮದ ಕೆಲವು ಹಿರಿಯರು ಇನ್ನು ಕೆಲವೇ ದಿನಗಳಲ್ಲಿ ನಡೆಯುವ ಜಾತ್ರೆಗೆ ರಥವನ್ನು ಅಲಂಕಾರಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು. ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ “ಕುರವ’ ಎನ್ನುವ ಸಮುದಾಯದವರು ಮಾತ್ರವೇ, ದುರ್ಯೋಧನನ್ನು ಆರಾಧಿಸುತ್ತಾರಂತೆ. ಇದಕ್ಕೆ ಕಾರಣವೂ ಇದೆ.
ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ದುರ್ಯೋಧನನು ಇಲ್ಲಿ ತನ್ನ ಕೌರವ ಬಳಗದವರೊಂದಿಗೆ ಬಂದಿದ್ದನಂತೆ. ಆಗ ಆತನನ್ನು ಇಲ್ಲಿನ ಒಂದು ಜನಾಂಗ ವಿಶೇಷವಾಗಿ ಸತ್ಕರಿಸಿತ್ತು. ಇದರಿಂದ ಸಂತೃಪ್ತನಾದ ದುರ್ಯೋಧನ, ಭೂದಾನ ಮಾಡಿದ್ದನಂತೆ. ದುರ್ಯೋಧನನಿಂದ ಭೂಮಿ ಪಡೆದ ಸಮುದಾಯವೇ ಈಗ ಕುರವ ಎಂದು ಕರೆಯಲ್ಪಡುವವರಾಗಿದ್ದಾರೆ.
“ದುರ್ಯೋಧನನ ಅಂದು ಕೊಟ್ಟ ಭೂಮಿಯಲ್ಲಿಯೇ ನಾವು ದೇವಸ್ಥಾನ ನಿರ್ಮಿಸಿದ್ದೇವೆ. ಈ ದೇವಸ್ಥಾನದಲ್ಲಿ ಮದುವೆಗಳೂ ಆಗುತ್ತವೆ. ನಮ್ಮ ಮನಸ್ಸಿನ ಬೇಡಿಕೆಗಳನ್ನು ದುರ್ಯೋಧನ ಈಡೇರಿಸುತ್ತಾನೆ’ ಎಂದು ಹೇಳುತ್ತಾರೆ, ಕುರವ ಜನಾಂಗದ ಯುವಕ ಜಗದೀಶ್.
* ಪ್ರಹ್ಲಾದ ಜಿ.ಕೆ., ಮೈಸೂರು