Advertisement

ದುರ್ಗಪ್ಪ ಗುಡಿಗಾರ ಓರ್ವ ಅಪ್ರತಿಮ ಕಲಾಕಾರ: ಜಿ.ಎಲ್. ಹೆಗಡೆ

06:33 PM Apr 09, 2022 | Team Udayavani |

ಭಟ್ಕಳ: ದುರ್ಗಪ್ಪ ಗುಡಿಗಾರ ಓರ್ವ ಅಪ್ರತಿಮ ಕಲಾಕಾರರಾಗಿದ್ದು, ಅವರೊಂದಿಗಿನ ಒಡನಾಟ ಸದಾ ಹಸಿರಾಗಿದೆ ಎಂದು ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಜಿ.ಎಲ್. ಹೆಗಡೆ ಕುಮಟಾ ಅವರು ಹೇಳಿದರು.

Advertisement

ಅವರು ದುರ್ಗಪ್ಪ ಗುಡಿಗಾರ ಮೆಮಮೋರಿಯಲ್ ಯಕ್ಷಗಾನ ಆರ್ಟ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ “ವರ್ಷದ ಹರ್ಷ ಸಮಾರಂಭ” ಹಾಗೂ ಪ್ರೊ. ಎಂ. ಎ. ಹೆಗಡೆ ದಂಡಕಲ್ ಸಂಸ್ಮರಣೆ, ಯಕ್ಷಗಾನ ಪ್ರದರ್ಶನ ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ದುರ್ಗಪ್ಪ ಗುಡಿಗಾರ ಅವರ ಮದ್ದಳೆಯ ಮೋಡಿಯನ್ನು ವಿವರಿಸಿದ ಅವರು ತಾವೂ ಕೂಡಾ ಅವರೊಂದಿಗೆ ಯಕ್ಷಗಾನ ಅರ್ಥಗಾರಿಕೆಯಲ್ಲಿ ಭಾಗವಹಿಸಿದ್ದ ಅನುಭವಗಳನ್ನು ಹಂಚಿಕೊಂಡರು. ಯಕ್ಷಗಾನ ಕನ್ನಡ ಭಾಷೆಗೆ ಒಂದು ಉತ್ತಮ ಕೊಡುಗೆಯಾಗಿದ್ದು ಯಕ್ಷಗಾನ ಇರುವ ತನಕವೂ ಕೂಡಾ ಕನ್ನಡಕ್ಕೆ ಯಾವುದೇ ತೊಂದರೆಯಾಗದು ಎಂದರು.

ಯಕ್ಷಗಾನದ ಮೇರು ವ್ಯಕ್ತಿ ದುರ್ಗಪ್ಪ ಗುಡಿಗಾರ ಅವರ ಹೆಸರಿನಲ್ಲಿರುವ ಈ ಸಂಸ್ಥೆ ನೂರಾರು ವರ್ಷಗಳ ಕಾಲ ಬಾಳಲಿ ಎಂದು ಹರಸಿದರು. ಭಟ್ಕಳ ಊರು ಐತಿಹಾಸಿಕವಾಗಿ, ಸಾಹಿತ್ಯಿಕವಾಗಿ ಬಹಳ ದೊಡ್ಡ ಹೆಸರಿದ್ದ ಊರಿದು, ಇದನ್ನು ಹಾಳುಗೆಡವಲು ನೋಡಿದರೂ ಸಹ ಇದು ಮತ್ತೆ ಮತ್ತೆ ಎದ್ದು ನಿಂತಿದೆ. ಮುಂದಿನ ದಿನಗಳಲ್ಲಿ ಇದೊಂದು ಯಕ್ಷಗಾನದ ಕೇಂದ್ರವಾಗಲಿ ಎಂದೂ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ ದುರ್ಗಪ್ಪ ಗುಡಿಗಾರರು ಕೇವಲ ಮದ್ದಲೆಯ ಮಾಂತ್ರಿಕ ಮಾತ್ರವಲ್ಲ ಉತ್ತಮ ಭಾಗವತರೂ ಕೂಡಾ ಹೌದು. ಕಾಳಿದಾಸ ಪ್ರಸಂಗದಲ್ಲಿನ ಒಂದು ಪದ್ಯದ ಶೈಲಿಯನ್ನು ತಮಗೆ ತಿಳಿಸಿಕೊಟ್ಟು ಆ ಪ್ರಸಂಗದಲ್ಲಿ ತನಗೆ ದೊಡ್ಡ ಹೆಸರು ತಂದು ಕೊಡುವಂತೆ ಮಾಡಿದ್ದರು ಎಂದು ನೆನಪಿಸಿಕೊಂಡರು.

Advertisement

ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉ.ಕ.ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ದುರ್ಗಪ್ಪ ಗುಡಿಗಾರ್ ಓರ್ವ ಅಪ್ರತಿಮ ಕಲಾವಿದರಾದರೂ ಕೂಡಾ ಎಂದೂ ಪ್ರಚಾರ ಬಯಸಿದವರಲ್ಲ. ಇಂದಿನ ದಿನಗಳಲ್ಲಿ ಆಗಿದ್ದರೆ ಅವರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವುದಲ್ಲದೇ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗುತ್ತಿದ್ದರು ಎಂದರು.

ಟ್ರಸ್ಟ್ ವತಿಯಿಂದ ಯಕ್ಷಗಾನಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಯಕ್ಷರಕ್ಷೆಯ ಅಧ್ಯಕ್ಷ ಡಾ. ಐ. ಆರ್. ಭಟ್ಟ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಅವರು ತನ್ನ ಜೀವನದ ಗುರಿಯೇ ಯಕ್ಷಗಾನವನ್ನು ಉಳಿಸುವುದಾಗಿದೆ. ತಮ್ಮ ತಂದೆ ತಾಯಿಯವರೇ ಇದಕ್ಕೆ ಪ್ರೇರಣೆಯಾಗಿದ್ದು ಕೊಪ್ಪದಮಕ್ಕಿ ಭಾಗವತರ ಪ್ರಭಾವ ಕೂಡಾ ತನ್ನ ಯಕ್ಷಪ್ರೇಮಕ್ಕೆ ಕಾರಣ ಎಂದರು.

ಟ್ರಸ್ಟಿನ ಅಧ್ಯಕ್ಷೆ ಶಾರದಾ ದುರ್ಗಪ್ಪ ಗುಡಿಗಾರ ಅವರು ಮಾತನಾಡಿ ಗುಡಿಗಾರರು ಹಾಗೂ ಧಾರೇಶ್ವರರ ಸುದೀರ್ಘ ಜುಗಲ್‍ಬಂದಿಯ ಕುರಿತು ವಿವರಿಸುತ್ತಾ, ತಮ್ಮ ಕುಟುಂಬ ಎದುರಿಸಿದ ಸಂಕಷ್ಟಗಳ ಕುರಿತು ವಿವರಿಸಿದರು. ವೇದಿಕೆಯಲ್ಲಿ ಮಂಜೂಷಾ ಗುಡಿಗಾರ ಉಪಸ್ಥಿತರಿದ್ದರು. ಉಮಾ ಗುಡಿಗಾರ ಪ್ರಾರ್ಥಿಸಿದರು. ಉಪನ್ಯಾಸಕ ಗಣಪತಿ ಕಾಯ್ಕಿಣಿ ಸ್ವಾಗತಿಸಿದರು. ಕೆ.ಬಿ. ಹೆಗಡೆ ಮುರ್ಡೇಶ್ವರ ನಿರ್ವಹಿಸಿ ವಂದಿಸಿದರು. ಎನ್.ಟಿ.ಭಂಡಾರಿ, ಚಂದ್ರಕಾಂತ ಕಿಣಿ, ವೀಣಾ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next