Advertisement

ಗೋಕರ್ಣದ ಕಡಲತೀರದಲ್ಲಿ ಪ್ರವಾಸಿಗರಿಗೆ ಸಿಕ್ಕ ದುರ್ಗಾದೇವಿ ಮೂರ್ತಿ

04:08 PM Jul 04, 2022 | Team Udayavani |

ಕುಮಟಾ: ಗೋಕರ್ಣದ ಮುಖ್ಯ ಕಡಲತೀರದಲ್ಲಿ ಮರಳಿನಲ್ಲಿ ಹುದುಗಿರುವ ದುರ್ಗಾದೇವಿಯ ಮೂರ್ತಿಯೊಂದು ಪ್ರವಾಸಿಗರಿಗೆ ಕಾಣಿಸಿಕೊಂಡಿದ್ದು ತಕ್ಷಣ ಅದನ್ನು ಮೇಲಕ್ಕೆತ್ತಲಾಗಿದೆ.

Advertisement

ಸಂಜೆ ವೇಳೆಗೆ ಕಡಲತೀರದಲ್ಲಿ ಆಟವಾಡುತ್ತಿದ್ದ ಪ್ರವಾಸಿಗರಿಗೆ ಮರಳಿನಲ್ಲಿ ಹುದುಗಿದ್ದ ಮೂರ್ತಿ ಕಂಡುಬಂದಿದೆ. ಮೂಗಿಗೆ ಚಿನ್ನದ ಮೂಗುತಿ ಇರುವ ದೇವಿಯ ಮೂರ್ತಿ ನೋಡಲು ಬಹು ಆಕರ್ಷಕವಾಗಿದ್ದು, ಸಮುದ್ರತೀರಕ್ಕೆ ಬಂದಿದ್ದ ಸಾರ್ವಜನಿಕರು, ಪ್ರವಾಸಿಗರು ದೇವಿಯನ್ನು ನೋಡಲು ಮುಗಿಬಿದ್ದಿದ್ದಾರೆ. ಸಮುದ್ರದಲ್ಲಿ ಯಾರೋ ವಿಸರ್ಜಿಸಿ ಹೋಗಿದ್ದ ಮೂರ್ತಿ ಅಲೆಗಳ ಹೊಡೆತದಿಂದ ಮತ್ತೆ ತೀರದ ಬಳಿ ಬಂದಿರಬಹುದು ಎಂದು ಅಂದಾಜಿಸಲಾಗಿದೆ.

ದೇವರ ಮೂರ್ತಿ ಭಿನ್ನವಾದ ಸಂದರ್ಭದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪಿಸಿ ಹಳೆಯದನ್ನು ಸಮುದ್ರದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದ ನಡೆದುಬಂದಿದೆ. ಅದರಂತೆ ಈ ಮೂರ್ತಿಯನ್ನು ನೀರಿನಲ್ಲಿ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನೂ ಓದಿ: ಮರವಂತೆ ಬೀಚ್ ಗೆ ಕಾರು ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮೂಲದ ಭಕ್ತರು ಇಂತಹದ್ದೇ ದೇವಿಯ ಮೂರ್ತಿಯೊಂದನ್ನು ಕಡಲತೀರದಲ್ಲಿ ಪೂಜಿಸಿದ್ದು, ಬಳಿಕ ನೀರಿನಲ್ಲಿ ವಿಸರ್ಜಿಸಲು ದೋಣಿಗಾಗಿ ಹುಡುಕಾಟ ನಡೆಸಿದ್ದರು. ಹೀಗಾಗಿ ಈ ಮೂರ್ತಿ ಅವರೇ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯೆ ಪಾರ್ವತಿ ಶೆಟ್ಟಿ ತಿಳಿಸಿದ್ದಾರೆ.

Advertisement

ಕಡಲತೀರಲ್ಲಿ ಮೂರ್ತಿ ಪ್ರತ್ಯಕ್ಷವಾದ ವಿಚಾರ ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದ್ದು, ಸ್ಥಳಕ್ಕೆ ಗೋಕರ್ಣ ಠಾಣೆಯ ಇನ್ಸ್‌ಪೆಕ್ಟರ್ ವಸಂತ ಆಚಾರ, ಪಿಎಸ್‌ಐ ಸುಧಾ ಅಘನಾಶಿನಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂರ್ತಿಯನ್ನು ಏನು ಮಾಡಬೇಕು ಎನ್ನುವ ಕುರಿತು ಸ್ಥಳೀಯರೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next