ದರ್ಶನ್ ಅಭಿನಯದ 50 ನೇ ಚಿತ್ರ “ಮುನಿರತ್ನ ಕುರುಕ್ಷೇತ್ರ’ ಬಿಡುಗಡೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಆಗಸ್ಟ್ 9 ಉತ್ತರವಾಗಿತ್ತು. ಸ್ವತಃ ನಿರ್ಮಾಪಕ ಮುನಿರತ್ನ ಅವರು, ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮುಂದೆ ಹೋಗುವುದಿಲ್ಲ. ಆಗಸ್ಟ್ 9 ರಂದು ಚಿತ್ರವನ್ನು ಬಿಡುಗಡೆ ಮಾಡುವುದು ಖಚಿತ ಎಂದು ಹೇಳಿದ್ದರು.
ಈಗ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಹೊಸ ಸುದ್ದಿಯೆಂದರೆ, ಜುಲೈ 7 ರಂದು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬುದು ವಿಶೇಷ. ಜುಲೈ 7 ಕ್ಕೆ ಹಾಡುಗಳು ಹೊರಬಂದರೆ, ಆಗಸ್ಟ್ 9 ರಂದು ಚಿತ್ರ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರಂಗದ ಬಹುತಾರಾಗಣದ ಚಿತ್ರ ಎಂದೇ ಬಿಂಬಿತವಾಗಿರುವ “ಮುನಿರತ್ನ ಕುರುಕ್ಷೇತ್ರ’ ಅದ್ಧೂರಿಯಾಗಿಯೇ ಮೂಡಿ ಬಂದಿದೆ.
ಬಹುತೇಕ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯ ನಡೆದಿದೆ. ಇಡೀ ಚಿತ್ರೀಕರಣ ಸೆಟ್‌ನಲ್ಲೇ ನಡೆದಿದ್ದು, ಅದಕ್ಕಾಗಿ 20ಕ್ಕೂ ಹೆಚ್ಚು ಕಲರ್‌ಫುಲ್ ಆಗಿರುವಂತಹ ಸೆಟ್ ಹಾಕಿದ್ದು ವಿಶೇಷ. ಸೆಟ್‌ನ ವಿಶೇಷತೆಯಲ್ಲಿ ದರ್ಬಾರ್ ಹಾಲ್ ಕೂಡಾ ಒಂದು. ಇದು ಚಿತ್ರದಲ್ಲೇ ಅತಿದೊಡ್ಡ ಸೆಟ್ ಎನ್ನಲಾಗಿದೆ.
ಚಿತ್ರದಲ್ಲಿ ದರ್ಶನ್ ದುರ್ಯೋದನ ಪಾತ್ರ ಮಾಡಿದ್ದು, ಅವರ ಎಂಟ್ರಿಯೇ ಅದ್ಧೂರಿಯಾಗಿ ಮೂಡಿ ಬಂದಿದೆ ಎಂಬುದು ಚಿತ್ರತಂಡದ ಮಾತು. “ಸಾಹೋರೇ ಸಾಹೋರೇ ಆಜಾನುಬಾಹುರೇ, ರಾಜಾಧಿ ರಾಜ …’ ಎಂಬ ಹಾಡಿನ ಮೂಲಕ ನೂರಾರು ಕುದುರೆಗಳು, ಆನೆ, 500ಕ್ಕೂ ಹೆಚ್ಚು ಜ್ಯೂನಿಯರ್ ಭಾಗಿಯಾಗಿರುವ ಈ ಹಾಡಿನಲ್ಲಿ ದರ್ಶನ್ ಆನೆಮೇಲೆ ಕುಳಿತು ಗಾಂಭೀರ್ಯದೊಂದಿಗೆ ಬರುವ ದೃಶ್ಯದ ಮೂಲಕ ಅವರ ದರ್ಶನ ಆಗುವುದು ಚಿತ್ರದ ಹೈಲೈಟ್ ಎಂಬುದು ಚಿತ್ರತಂಡದ ಹೇಳಿಕೆ.
ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖೀಲ್‌ಕುಮಾರ್, ರವಿ ಚೇತನ್, ಶ್ರೀನಿವಾಸ ಮೂರ್ತಿ, ಮೇಘನಾರಾಜ್, ಹರಿಪ್ರಿಯಾ, ಡ್ಯಾನಿಶ್ ಸೇರಿದಂತೆ ಕನ್ನಡದ ಬಹುತೇಕ ನಟರು ನಟಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ.