Advertisement

ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಿನ ನಕಲಿ ವೆಬ್‍ಸೈಟ್ ಸೃಷ್ಟಿ: ಕಿಡ್ನಿದಾನಕ್ಕೆ 4 ಕೋಟಿ ಆಮಿಷ

10:09 AM Apr 26, 2022 | Team Udayavani |

ಬೆಂಗಳೂರು: ನಗರದ ಕೆಲ ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಿ ನಲ್ಲಿ ನಕಲಿ ವೆಬ್‌ಸೈಟ್‌ ಸೃಷ್ಟಿಸಿ ಕಿಡ್ನಿದಾನ ಮಾಡಿದರೆ 4 ಕೋಟಿ ರೂ. ನೀಡುವುದಾಗಿ ಜಾಹೀರಾತು ನೀಡಿ, ಅಮಾಯಕ ಸಾರ್ವಜನಿಕರ ಬಳಿ ಹಣ ಸುಲಿಗೆ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಆಗ್ನೇಯ ವಿಭಾಗದ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನೈಜೀರಿಯಾ ಮೂಲದ ಮಿರಾಕಲ್‌ ಅಲಿಯಾಸ್‌ ಮಿಮಿ (28), ಸೋವ್‌ ಕಾಲಿನ್ಸ್‌ ನಿ (32) ಮತ್ತು ಫಾನಾ ಮೂಲದ ಮ್ಯಾಥ್ಯೂ ಇನೋಸೆಂಟ್‌ ಅಲಿಯಾಸ್‌ ಪಾಲ್‌ (38) ಬಂಧಿತರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗ‌ಳು, ಲ್ಯಾಪ್‌ಟಾಪ್‌ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಮೂವರು ಇತ್ತೀಚೆಗೆ ಜಯನಗರದ ಸಾಗರ್‌ ಆಸ್ಪತ್ರೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರೆದು ಕಿಡ್ನಿ ಕಸಿ ಮಾಡಲಾಗುತ್ತದೆ. ಕಿಡ್ನಿ ದಾನ ಮಾಡುವವರು ಹಾಗೂ ಕಿಡ್ನಿ ಅಗತ್ಯವಿದ್ದವರು ಸಂಪರ್ಕಿಸುವಂತೆ ಜಾಹೀರಾತು ನೀಡಿದ್ದರು. ಅದನ್ನು ಗಮನಿಸಿದ ಆಸ್ಪತ್ರೆಯ ಮೆಡಿಕಲ್‌ ಡೈರೆಕ್ಟರ್‌ ಮಹೇಂದ್ರ ಕುಮಾರ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಹತ್ತಕ್ಕೂ ಹೆಚ್ಚು ವೆಬ್‌ಸೈಟ್‌ಗಳು

Advertisement

ನಗರದ ಸಾಗರ್‌, ಬ್ಯಾಪ್ಟಿಸ್ಟ್‌, ಕಾವೇರಿ ಆಸ್ಪತ್ರೆ ಸೇರಿ ನಗರದ ಹತ್ತಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಹೆಸರಿನ ನಕಲಿ ವೆಬ್‌ಸೈಟ್‌ ತೆರೆದಿದ್ದರು. ಕಿಡ್ನಿ ದಾನ ಮಾಡಿದರೆ ಮುಂಗಡ 2 ಕೋಟಿ ಹಾಗೂ ನಂತರ 2 ಕೋಟಿ ಒಟ್ಟು 4 ಕೋಟಿ ಕೊಡುವುದಾಗಿ ಜಾಹೀರಾತು ನೀಡಿದ್ದರು. ಅದಕ್ಕಾಗಿ ತಮ್ಮನ್ನು ಸಂಪರ್ಕಿಸುವಂತೆ ಮೊಬೈಲ್‌ ನಂಬರ್‌ ಉಲ್ಲೇಖೀಸಿ, ಜಾಹೀರಾತು ನೀಡಿದ್ದರು.

ಈ ಜಾಹೀರಾತು ನೋಡಿದ ಕೆಲವರು ಹಣದಾಸೆಗೆ ಕಿಡ್ನಿ ಮಾರಾಟ ಮಾಡಲು ಆರೋಪಿಗಳ ಮೊಬೈಲ್‌ಗೆ ಸಂಪರ್ಕಿಸಿದ್ದು, ಈ ವೇಳೆ ನೋಂದಣಿ ಶುಲ್ಕ, ಮೆಡಿಕಲ್‌ ಶುಲ್ಕ, ವೈದ್ಯರ ಶುಲ್ಕ ಸೇರಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ಲಕ್ಷಾಂತರ ರೂ. ಪಡೆದಿದ್ದಾರೆ. ಅಲ್ಲದೆ, ಮುಂಗಡ 2 ಕೋಟಿ ರೂ. ನಿಮ್ಮ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ. ಆದರೆ, ಶೇ.30ರಷ್ಟು ಹಣವನ್ನು ನಮ್ಮ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ ಬಳಿಕ ನಿಮ್ಮ ಬ್ಯಾಂಕ್‌ ಖಾತೆಗೆ ಜಮೆಯಾಗಿರುವ ಹಣವನ್ನು ಡ್ರಾ ಮಾಡಬಹುದು ಎಂದು ಹೇಳುತ್ತಿದ್ದರು. ಬಳಿಕ ಹಣ ಪಡೆದು ಸಂಪರ್ಕಕ್ಕೆ ಸಿಗದೆ ವಂಚಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜತೆ ಸೇರಿ ಪತಿಯ ಕೊಂದ ಪತ್ನಿ 

ಈ ಸಂಬಂಧ ಆಗ್ನೇಯ ವಿಭಾಗ ಪೊಲೀಸರು, ವಂಚನೆಗೊಳಗಾದ ಸಾರ್ವಜನಿಕರು ಅಸಲಿ ದಾಖಲೆಗಳ ಸಮೇತ ಠಾಣೆಗೆ ದೂರು ನೀಡಬಹುದು. ಅಲ್ಲದೆ, ವಿದೇಶಿ ಪ್ರಜೆಗಳಿಗೆ ಬಾಡಿಗೆ ಮನೆ ನೀಡುವ ಮೊದಲು ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮೊಬೈಲ್‌ ಜಾಡು ಹಿಡಿದು ಆರೋಪಿಗಳ ಬಂಧನ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಕಲಿ ವೆಬ್‌ಸೈಟ್‌, ಅದರಲ್ಲಿ ಹಾಕಿದ್ದ ಮೊಬೈಲ್‌ ಸಂಖ್ಯೆಗಳ ಜಾಡು ಹಿಡಿದು ಸಿಡಿಆರ್‌ ಮೂಲಕ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈ ವೇಳೆ ಆರೋಪಿಗಳು ಹೆಗಡೆನಗರ ಹಾಗೂ ಎಚ್‌ಬಿಆರ್‌ ಲೇಔಟ್‌ನಲ್ಲಿ ಓಡಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ವಿಚಾರಣೆ ವೇಳೆ ಮೂವರು ಆರೋಪಿಗಳು ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದು, ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನಗರದಲ್ಲಿ ವಾಸವಾಗಿದ್ದಾರೆ. ಮೋಜಿನ ಜೀವನಕ್ಕಾಗಿ ಹಣ ಸಂಪಾದಿಸಲು ವಂಚನೆ ಮಾರ್ಗ ಅನುಸರಿಸುತ್ತಿದ್ದರು. ಇದುವರೆಗೂ ಎಷ್ಟು ಮಂದಿಗೆ ವಂಚಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next