ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಗೆ ತಮ್ಮ ಬದಲು ಬೇರೊಬ್ಬರನ್ನು ಕೂಡಿಸಿದ ವಿದ್ಯಾರ್ಥಿಗಳು ಹಾಗೂ ಪರೀಕ್ಷೆಗೆ ಕುಳಿತ ನಕಲು ಅಭ್ಯರ್ಥಿಗಳು ಸೇರಿ ಒಟ್ಟು 14 ಜನರು ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಶಿಕ್ಷಣ
ಇಲಾಖೆಯ ಕಲಬುರಗಿ ಅಪರ ಆಯುಕ್ತಾಲಯದ ಆಯುಕ್ತ ನಳೀನ್ ಅತುಲ್ ಆದೇಶಿಸಿದ್ದಾರೆ.
ಗುರುವಾರ ಜಿಲ್ಲೆಯ 136 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಭಾಷೆ (ಕನ್ನಡ ಮತ್ತು ಇಂಗ್ಲಿಷ್) ನಡೆದಿತ್ತು. ಈ ಪರೀಕ್ಷೆಗೆ ಏಳು ಜನ ಖಾಸಗಿ ಅಭ್ಯರ್ಥಿಗಳು ತಮ್ಮ ಬದಲು ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಿದ್ದರು. ಆಯುಕ್ತ ನಳೀನ್ ಅತುಲ್ ಪರೀಕ್ಷಾ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿದಾಗ ಕಲಬುರಗಿ ನಗರದ ಜೇವರ್ಗಿ ಕಾಲೋನಿಯ ಸರ್ಕಾರಿ ಪ್ರೌಢ ಶಾಲೆಯ ಕೇಂದ್ರದಲ್ಲಿ ಮೂವರು ಹಾಗೂ ಹೊರವಲಯದ ಕೋಟನೂರ (ಡಿ) ಗ್ರಾಮದ ಸೇಂಟ್ ಮೇರಿ ಪ್ರೌಢ ಶಾಲೆಯ ಕೇಂದ್ರದಲ್ಲಿ ನಾಲ್ವರು ಅಧಿಕೃತ ಅಭ್ಯರ್ಥಿಗಳ ಬದಲಾಗಿ ಮತ್ತೊಬ್ಬರು ಕುಳಿತುಕೊಂಡಿದ್ದು ಪತ್ತೆಯಾಗಿದೆ. ಹೀಗಾಗಿ ತಮ್ಮ ಪರೀಕ್ಷೆಗೆ ಬೇರೆಯವರನ್ನು ಕೂಡಿಸಿದ ಅಭ್ಯರ್ಥಿಗಳು ಹಾಗೂ ಪರೀಕ್ಷೆಗೆ ಕುಳಿತ ನಕಲಿ ಅಭ್ಯರ್ಥಿಗಳ ವಿರುದ್ಧವೂ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸೂಚಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಎಸ್ಎಸ್ಎಲ್ ಸಿ ಪರೀಕ್ಷೆ ನಕಲು ಚೀಟಿ ಕೊಡಲು ಹೋದ ಯುವಕ ಅನುಮಾಸ್ಪದ ಸಾವು
ಪರೀಕ್ಷಾ ಅವ್ಯವಹಾರಕ್ಕೆ ಕಾರಣವಾದ ಏಳು ಅಭ್ಯರ್ಥಿಗಳೂ ಮುಂದಿನ ಪರೀಕ್ಷೆಗಳಿಗೆ ಕೂಡಲು ಅನರ್ಹರಾಗಿದ್ದಾರೆ ಎಂದು ಅಪರ ಆಯುಕ್ತರ ಕಚೇರಿಯ ಆಡಳಿತ ವಿಭಾಗದ ಉಪ ನಿರ್ದೇಶಕ ನಾಗರಾಜ ಡೋಣಿ ಮತ್ತು ಡಿಡಿಪಿಐ ಎಸ್.ಪಿ.ಬಾಡಂಗಡಿ ತಿಳಿಸಿದ್ದಾರೆ.