ಬೆಂಗಳೂರು: ಪದೇ ಪದೇ ಕೌಟುಂಬಿಕ ಕಲಹ ವಿಚಾರವಾಗಿ ಠಾಣೆ ಮೇಟ್ಟಿಲೇರುತ್ತಿರುವ ನಟ ದುನಿಯಾ ವಿಜಯ್ ಕುಟುಂಬದ ವಿರುದ್ಧ ಗಿರಿನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ನಟ ದುನಿಯಾ ವಿಜಯ್, ಅವರ ಮೊದಲ ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿಗೌಡ, ನಾಗರತ್ನ ಸಹೋದರ, ವಿಜಯ್ ಪೋಷಕರು ಹಾಗೂ ಚಾಲಕ ಸೇರಿ 7 ಮಂದಿ ವಿರುದ್ಧ ಸಿಆರ್‌ಪಿಸಿ 107ರಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಮೊದಲ ಪತ್ನಿ ನಾಗರತ್ನ ಹಾಗೂ ಕೀರ್ತಿಗೌಡ ಪರಸ್ಪರ ಜಗಳ ಮಾಡಿಕೊಂಡು ಗಿರಿನಗರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಿಸಿದ್ದರು. ಜತೆಗೆ, ಹೊಸಕೆರೆಹಳ್ಳಿಯ ಮನೆಗೆ ಹೋಗಿದ್ದಾಗ ತಂದೆ ವಿಜಯ್ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿ ಪುತ್ರಿ ಮೋನಿಕಾ ಕೂಡ ತಂದೆ ವಿಜಯ್ ವಿರುದ್ಧ ಸೆ.24 ರಂದು ಗಿರಿನಗರ ಠಾಣೆಯಲ್ಲಿ ಮತ್ತೂಂದು ದೂರು ದಾಖಲಿಸಿದ್ದರು.
ಅಲ್ಲದೆ ಈ ಹಿಂದೆ ಬಾಮೈದುನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಸಿ ಇದೇ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪದೇ ಪದೇ ಕೌಟುಂಬಿಕ ಕಲಹದ ಮೂಲಕ ಠಾಣೆ ಮೇಟ್ಟಿಲೇರುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ನಿತ್ಯ ವಿಜಯ್ ಕುಟುಂಬ ಸಮಸ್ಯೆ ಬಗೆಹರಿಸುವುದೇ ಕೆಲಸವಾಗಿತ್ತು. ಈ ಮೂಲಕ ಸಮಾಜದಲ್ಲಿ ಶಾಂತಿಗೆ ಭಂಗ ತರುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡುವ ಉದ್ದೇಶದಿಂದ ಇಡೀ ಕುಟುಂಬದ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.
ಅದರಂತೆ ದೂರು ದಾಖಲಾಗಿರುವ ಕುಟುಂಬದ 7ಮಂದಿಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರ ಮುಂದೆ ಹಾಜರು ಪಡಿಸಿ, ಮುಚ್ಚಳಿಕೆ ಪತ್ರ ಕೂಡ ಬರೆಸಿಕೊಳ್ಳಲಾಗುವುದು. ಒಂದು ವೇಳೆ ಇದನ್ನು ಮೀರಿ ಮತ್ತೂಮ್ಮೆ ಗಲಾಟೆ ಮಾಡುವುದು, ಶಾಂತಿ ಸೌಹಾರ್ದತೆಗೆ ಧಕ್ಕೆ ತರುವುದು ಮಾಡಿದರೆ ಭಾರತೀಯ ದಂಡ ಸಂಹಿತೆ(ಐಪಿಸಿ) ಅಡಿಯಲ್ಲಿ ಮತ್ತೂಂದು ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದರು.