ದುನಿಯಾ’ ಸೂರಿ ನಿರ್ದೇಶನದ “ಟಗರು’ ಚಿತ್ರ ಕಳೆದ ವಾರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಆರಂಭದ ದಿನಗಳಲ್ಲಿ ಚಿತ್ರ ಅಷ್ಟೊಂದು ದೊಡ್ಡ ಹಿಟ್ ಆಗಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇರಲಿಲ್ಲ. ಕಾರಣ, ಚಿತ್ರಕಥೆ ಸ್ವಲ್ಪ ಗೊಂದಲಮಯವಾಗಿದೆ ಎಂಬ ಪ್ರತಿಕ್ರಿಯೆ, ಮೊದಲ ದಿನ ಚಿತ್ರ ನೋಡಿದ ಪ್ರೇಕ್ಷಕರ ಒಂದು ವಲಯದಿಂದ ಬಂದಿತ್ತು. ಹಾಗಾಗಿ, ಚಿತ್ರ ಈ ಮಟ್ಟಿಗೆ ಯಶಸ್ಸುಗಳಿಸಬಹುದು ಎಂಬ ನಿರೀಕ್ಷೆ ಹಲವರಲ್ಲಿರಲಿಲ್ಲ. ಆದರೆ, ಆ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿ, “ಟಗರು’ 50 ದಿನ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.
ಈ ತರಹದ್ದೊಂದು ಪ್ರತಿಕ್ರಿಯೆ ಸಿಗಬಹುದು ಎಂದು ನಿರ್ದೇಶಕ ಸೂರಿ ಮೊದಲೇ ನಿರೀಕ್ಷಿಸಿದ್ದರಂತೆ. “ಜನ ಚಿತ್ರವನ್ನು ಇಷ್ಟಪಡುತ್ತಾರೆ ಎಂದು ಗೊತ್ತಿತ್ತು.
ಈ ಚಿತ್ರದ ಯಶಸ್ಸು ಆಕಸ್ಮಿಕ ಮತ್ತು ಎಡಿಟಿಂಗ್ ಟೇಬಲ್ ಮೇಲೆ ಚಿತ್ರವನ್ನು ರೂಪಿಸಲಾಗಿದೆ ಎಂಬಂತಹ ಪ್ರತಿಕ್ರಿಯೆಗಳನ್ನು ಕೇಳಿದ್ದೇನೆ. ಎಡಿಟಿಂಗ್ ಟೇಬಲ್ ಮೇಲೆ ಈ ತರಹ ಎಲ್ಲಾ ಮಾಡುವುದು ಕಷ್ಟ. ಇದು ಆಕಸ್ಮಿಕವಲ್ಲ, ಜಾದೂ ಅಲ್ಲ. ಸಾಕಷ್ಟು ಕೆಲಸ ಮಾಡಲೇ ಬೇಕು. ನಾವು ಚಿತ್ರಕಥೆ ಬರೆಯುವಾಗಲೇ, ಇವೆಲ್ಲವನ್ನೂ ಪ್ಲಾನ್ ಮಾಡಿ ಕೊಂಡಿದ್ದೆವು. ಎಡಿಟಿಂಗ್ ಟೇಬಲ್ ಮೇಲೆ ಒಂದು ಚಿತ್ರ ರೂಪಿಸಬೇಕು ಎಂದರೆ, ಒಂದಿಷ್ಟು ದೃಶ್ಯಗಳನ್ನು ಮೊದಲೇ ಶೂಟ್ ಮಾಡಿಟ್ಟುಕೊಂಡು, ಅದರಲ್ಲಿ ಆಟ ಆಡಬೇಕು.ಆದರೆ, ಇಲ್ಲಿ ನಾವು ಮೊದಲೇ ಚಿತ್ರಕಥೆ ಹೀಗಿØàಗೆ ಸಾಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆವು. ಅದರಂತೆ ಚಿತ್ರ ಮೂಡಿ ಬಂದಿದೆ.
ನಮಗೆ ಪ್ರತಿ ಶಾಟ್‌ನ, ಸೌಂಡ್‌ನ ಸ್ಪಷ್ಟತೆ ಇದೆ. ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರ ಜೊತೆಗೆ, ಸಂಗೀತ ನಿರ್ದೇಶಕ ಚರಣ್ ರಾಜ್ ಸಾಕಷ್ಟು ಚರ್ಚೆ ಮಾಡಿಯೇ ಚಿತ್ರಕಥೆ ರೂಪಿಸಿದ್ದೆವು. ಇನ್ನು ಕಲಾವಿದರಿಗೂ ಮುಂಚೆಯೇ ಹೀಗಿØàಗೆ ಆಗುತ್ತದೆ ಅಂತ ಹೇಳಿದ್ದಾಗಿತ್ತು. ಅವರೂ ನಂಬಿ, ಕೈ ಜೋಡಿಸಿದ್ದರಿಂದಲೇ ಇದು ಸಾಧ್ಯವಾಯಿತು’ಎನ್ನುತ್ತಾರೆ ಸೂರಿ. ಪ್ರೇಕ್ಷಕರು ತಮಗಿಂಥ ಬುದಿಟಛಿವಂತರು ಎನ್ನುವ ಸೂರಿ, “ಪ್ರೇಕ್ಷಕರು ಈ ಚಿತ್ರವನ್ನು ಮೂರ್‍ನಾಲ್ಕು ಬಾರಿ ನೋಡುತ್ತಾರೆ ಎಂಬ ವಿಶ್ವಾಸ ನನಗೆ ಇತ್ತು. ಅದನ್ನ ಹೇಳಿದರೆ, ಕೊಬ್ಬು ಅಂತಾರೆ ಅಂತ ಸುಮ್ಮನಿದ್ದೆ. ಆದರೆ, ಜನ ಅದನ್ನು ನಿಜ ಮಾಡಿದರು. ಇಷ್ಟಪಟ್ಟು ಚಿತ್ರವನ್ನು ನೋಡಿದರು. ಸ್ಕ್ರೀನ್‌ಪ್ಲೇ ಹೀಗಿದ್ದರೆ, ಜನಕ್ಕೆ ಅರ್ಥ ಆಗೋಲ್ಲ ಎಂಬ ಮಾತಿದೆ. ಆದರೆ,ಜನ ಸಿನಿಮಾದವರಿಗಿಂತ ಬುದಿಟಛಿವಂತರು ಅಂತ ಪ್ರೂವ್ ಮಾಡಿದರು’ ಎನ್ನುತ್ತಾರೆ ಸೂರಿ. ಸರಿ, “ಟಗರು’ ನಂತರ ಸೂರಿ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ. ಈ ಪ್ರಶ್ನೆಗೆ ಸೂರಿಗೂ ಸದ್ಯಕ್ಕೆ ಸ್ಪಷ್ಟತೆ ಇಲ್ಲ. “ಒಂದಿಷ್ಟು ಬರೆಯುತ್ತಿದ್ದೇನೆ. ಒಂದಿಷ್ಟು ಮೀಟಿಂಗ್‌ಗಳಾಗುತ್ತಿವೆ.
“ಕೆಂಡಸಂಪಿಗೆ’ಯ ಮುಂದುವರೆದ ಭಾಗಗಳ ಕುರಿತೂ ಚರ್ಚೆಯಾಗುತ್ತಿದೆ.ಯಾವುದು ಕೂಡಿ ಬರುತ್ತಿದೆ ಎಂದು ನನಗೇ ಗೊತ್ತಿಲ್ಲ’ ಎನ್ನುತ್ತಾರೆ ಸೂರಿ.
– ಚೇತನ್ ನಾಡಿಗೇರ್