Advertisement
ಇಂಗ್ಲಿಷ್ ಮೇಸ್ಟ್ರ ಸಿಟ್ಟಿನ ಪಿತ್ತ ಇಳಿಯಬೇಕಾದರೆ ಅವರನ್ನು ನೈಸು ಮಾಡೋದು ಹೇಗೆ? ಹೊಸದಾಗಿ ಖರೀದಿಸಿದ ಟೆನ್ನಿಸ್ ಚೆಂಡನ್ನು ಪಿಟಿ ಸರ್ ಎಲ್ಲಿ ಅಡಗಿಸಿಟ್ಟಿದ್ದಾರೆ? ಯಾರ ಕಣ್ಣಿಗೂ ಕಾಣದಂತೆ ಮೇಸ್ಟ್ರೆ ಪಾಠ ಮಾಡುತ್ತಿರುವಾಗಲೇ ಸುಲಭವಾಗಿ ಎಸ್ಕೇಪ್ ಆಗಲು ಇರುವ ಆ ನಿಗೂಢ ದಾರಿ ಯಾವುದು? ಕೊನೆಯ ಬೆಂಚಿನಲ್ಲಿ ಕುಳಿತು ಚೂಯಿಂಗ್‌ಗಮ್, ಚಾಕ್ಲೇಟುಗಳನ್ನು ರಹಸ್ಯವಾಗಿ ದಾಸ್ತಾನು ಮಾಡೋದು ಹೇಗೆ?
– – –
ಈಗಲೂ ಮಹಾನಗರದ ಮೂಲೆಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿರುವ ಮಾಧವನಿಗೆ ಗೋಂಟು ಅನ್ನೋ ಹಿರಿಯಣ್ಣ ಕಾಡುತ್ತಿದ್ದಾನೆ. ಕ್ಲಾಸ್‌ರೂಮಿನ ಆ ಗೆಳೆಯನ ಚಿತ್ರ ಕಣ್ಮುಂದೆ ಬರುತ್ತಿರುತ್ತದೆ. ಒಂದೇ ಕ್ಲಾಸ್‌ನಲ್ಲಿ ಐದಾರು ವರ್ಷ ಕೂತು ಸರ್ವೀಸ್ ಇರುವ, ಶಾಲಾ- ಕಾಲೇಜಿನ ಚರಿತೆಯ ಪುಟಗಳನ್ನು ಹತ್ತಿರದಿಂದ ಕಂಡಿರುವ, ಕ್ಲಾಸ್ ರೂಂನ ಬೆಂಚು, ಡೆಸ್ಕಾ, ಹೆಂಚು, ನೆಲ, ಗೋಡೆ, ಕಿಟಕಿ, ಬಾಗಿಲ ಸಂದಿನ ಅಷ್ಟೂ ಕತೆಗಳನ್ನು ಕರಾರುವಕ್ಕಾಗಿ ಹೇಳುವ, ಮೇಸ್ಟ್ರ ಕಿರುನಗೆ, ಸಿಟ್ಟು, ಮೌನ, ಯಾವಾಗ ಹೊಡೆತ ಹೇಗೆ ಮತ್ತು ಯಾಕೆ ಬೀಳುತ್ತದೆ ಅನ್ನೋ ಕಾರಣಗಳನ್ನು ಮೇಸ್ಟ್ರಿಗಿಂತಲೂ ಮೊದಲು ಚೆನ್ನಾಗಿ ಅರಿತಿರುವ, ಒಟ್ಟಾರೆ ಶಾಲೆಯ ದಿನಗಳಲ್ಲೋ, ಕಾಲೇಜು ದಿನಗಳಲ್ಲೋ ಹಿರಿಯಣ್ಣ ಗೋಂಟುವಿನಂಥವರು ಸಹಪಾಠಿಗಳಾಗಿ, ನಿಮ್ಮ ನೆನಪಿನ ಕದ ತಟ್ಟುತ್ತಿರುತ್ತಿರುತ್ತಾರೆ.
Related Articles
ಪ್ರತೀ ತರಗತಿಯಲ್ಲೂ ಆಗೆಲ್ಲ ಒಬ್ಬ ಗೊಂಟುವಿನಂಥವನು ಇರುತ್ತಿದ್ದ. ನಿಮ್ಮ ಅಣ್ಣ ಓದುವಾಗ ಅಣ್ಣನಿಗೆ ಕ್ಲಾಸ್‌ಮೇಟ್ ಆಗಿರುತ್ತಿದ್ದ ಅವನು, ಅಣ್ಣ ಪಾಸಾಗಿ, ಕೆಲಸಕ್ಕೆ ಸೇರಿದ ಬಳಿಕ ನೀವು ಅದೇ ಕ್ಲಾಸ್‌ಗೆ ಬಂದಾಗಲೂ ಅವನು ಅಲ್ಲೇ ಇರುತ್ತಿದ್ದ. ಮೇಸ್ಟ್ರೆಗಳಿಂದ ನೂರಾರು ಪೆಟ್ಟುಗಳನ್ನು ತಿಂದು ವರ್ಷ ವರ್ಷವೂ ಅದೇ ಉತ್ತರ ಪತ್ರಿಕೆಯ ಬಿಳಿ ಹಾಳೆಗಳಲ್ಲಿ ಅಕ್ಷರ ಮೂಡಿಸುವ ಕನಸ ಕಂಡರೂ ಮೂಡಿಸಲಾಗದೇ, ಮತ್ತೂಂದು ತರಗತಿಗೆ ಜಿಗಿಯುವ ಆಸೆ ಇದ್ದರೂ ಜಿಗಿಯಲಾಗದೇ ಮಳೆಯ ಆಸರೆಗಾಗಿ ಕಾಯುವ ಕಪ್ಪೆಯಂತಿರುತ್ತಿದ್ದ. ಮತ್ತೆ ಮತ್ತೆ ಫಲಿತಾಂಶ ಬರುವಾಗಲೂ ಕೆಂಪು ಇಂಕಿಗೆ ಬಂಧಿಯಾಗಿ ನಪಾಸ್ ಆಗಿ ಕಣ್ಣಲ್ಲಿ ಚಿಮ್ಮುವ ಹನಿ ನೀರನ್ನು ತೋರಿಸಿಕೊಳ್ಳಲಾಗದೇ ನಾಪತ್ತೆಯಾಗುತ್ತಿದ್ದ ಈ ಹಿರಿಯಣ್ಣರು ಈಗಿನ ಬದಲಾದ ಪಠ್ಯಕ್ರಮದ ತರಗತಿಗಳಲ್ಲಿಲ್ಲ. ಅನುತ್ತೀರ್ಣಗೊಂಡು ಮತ್ತದೇ ತರಗತಿಯಲ್ಲಿ ಕೂರುವ ಅನಿವಾರ್ಯತೆಯೂ, ಸನ್ನಿವೇಶವೂ ಈಗ ಬದಲಾಗಿರುವುದರಿಂದ ಈ ಹಿರಿಯಣ್ಣನ ಮಹಿಮೆ ಈಗಿನ ಹೊಸ ಹುಡುಗ- ಹುಡುಗಿಯರಿಗೆ ತಿಳಿದೇ ಇಲ್ಲ.
Advertisement
ಬೇಕಾದವನೂ, ಬೇಡವಾದವನೂ…ಆ ಹಿರಿಯಣ್ಣನೋ, ತರಗತಿಯ ಭೀಮ! ಮುಖದ ಮೇಲೆ ತೆಳ್ಳಗಿನ ಮೀಸೆ, ಗಡ್ಡ ಮೂಡಿಸಿಕೊಂಡು, ಗಟ್ಟಿ ತಿಂದುಕೊಂಡು ಗುಡಾಣದಂತಿರುತ್ತಿದ್ದ. ಒಂದೇ ತರಗತಿಯಲ್ಲಿ ಕೂತು ಕೂತು ಸಂಭಾವಿತನಂತೆ, ವಯಸ್ಸಾದ ಗಂಡನಂತೆ ಕಾಣುತ್ತಿದ್ದ ಈತ ಇಡೀ ತರಗತಿಗೆ ಸೂಪರ್ ಸೀನಿಯರ್. ಈತನ ಸೀನಿಯಾರಿಟಿ ಎದುರು ಆ ತರಗತಿಯಲ್ಲಿ ಮಿಕ್ಕವರೆಲ್ಲರೂ ಏನೂ ಅಲ್ಲ. ನೂರಾರು ಪಾಠಗಳನ್ನು ಕೇಳಿದರೂ, ನೂರಾರು ಪೆಟ್ಟುಗಳನ್ನು ತಿಂದರೂ ವಿಚಲಿತನಾಗದೇ ಪಾಠಕ್ಕಿಂತ ಅನುಭವ ಪಾಠವೇ ಶ್ರೇಷ್ಠ ಅಂತ ಅನುಭವವನ್ನು ತನ್ನ ಬಳಗದವರಿಗೂ ಉಣಿಸುತ್ತಿದ್ದ. ಈ ಭೀಮ ಎಲ್ಲದಕ್ಕೂ ಬೇಕಾಗುವವನು, ಆದರೆ ಯಾವುದಕ್ಕೂ ಬೇಡದವನೂ ಆಗಿದ್ದ. ಆದರೂ ತನ್ನ ಸೀನಿಯಾರಿಟಿ ಆಧಾರದ ಮೇಲೆ ಶಾಲಾ- ಕಾಲೇಜಿಗೆ ಸಂಬಂಧಪಟ್ಟ ಎಲ್ಲ ಸೂಕ್ಷ¾ ವಿವರಗಳನ್ನೂ ಕಂಠಪಾಠ ಮಾಡಿಕೊಂಡಿದ್ದ. ಹೆಡ್ ಮಾಸ್ಟರ್‌ರಿಂದ ಹಿಡಿದು ಆಫೀಸ್ ಪಿಯೋನ್‌ವರೆಗೂ ಯಾರಿಗೆಲ್ಲ ಆರಾಮಾಗಿ ಟೋಪಿ ಹಾಕಬಹುದು, ಅವರನ್ನು ಮಂಗ ಮಾಡುವ ಸರಳ ವಿಧಾನಗಳಾವುವು? ವ್ಯವಸ್ಥೆಗಳಿಂದ ತೂರಿಕೊಳ್ಳಲು ಇರುವ ಶಾರ್ಟ್‌ಕಟ್‌ಗಳೇನು? ಎಂದು ಹೇಳಿಕೊಡುತ್ತಿದ್ದ ಚಾಣಾಕ್ಷ ಈ ಹಿರಿಯಣ್ಣ. ಬರೀ ಒಂದು ವರ್ಷ ಆ ತರಗತಿಯಲ್ಲಿದ್ದು, ಆ ಮೇಲೆ ಬೇರೆ ತರಗತಿಗಳಿಗೆ ಜಿಗಿಯುತ್ತಿದ್ದ ಹುಡುಗರಿಗೆ ತಮ್ಮ ತರಗತಿಯ ಮೇಲೆ ಅಭಿಯಾನ ಕಡಿಮೆ. ಆದರೆ, ಈ ಹಿರಿಯಣ್ಣ ಹಾಗಲ್ಲ. ಅವನು ತನ್ನ ತರಗತಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸುತ್ತಿರಲಿಲ್ಲ. ತರಗತಿ ಎನ್ನುವುದು ಅವನಿಗೆ ಆತ್ಮ. ಅಗತ್ಯವಿದ್ದರೆ, ತರಗತಿಯ ಕಿಟಕಿ ರಿಪೇರಿ ಮಾಡುವ ಜಾಣ. ತರಗತಿಯ ಕೋಣೆಗಳ ಯೋಗ-ಕ್ಷೇಮ ವಿಚಾರಿಸುವ ಡಾಕ್ಟರ್ ಕೂಡ ಆತನೇ. ಸೀನಿಯಾರಿಟಿಯ ಹಕ್ಕಿನಿಂದ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸುವ ಮೂಲಭೂತ ಹಕ್ಕೊಂದು ಅವನಿಗಿತ್ತು. ಶಾಲೆಯ ಕ್ರಿಕೆಟ್ ಪಿಚ್‌ನ ಬಗ್ಗೆ ನಿಖರವಾಗಿ ಗೊತ್ತಿದ್ದ ಅವನಿಂದಲೇ ಪ್ರತಿ ವರ್ಷವೂ ಅವನ ಗೆಳೆಯರು ಗೆಲ್ಲುತ್ತಿದ್ದರು. ಬೇರೆ ತರಗತಿಗಳ ಜತೆ ಮಹಾಯುದ್ಧವೇನಾದರೂ ನಡೆದುಬಿಟ್ಟರೆ, “ಬಾಹುಬಲಿ’ಯ ಕಟ್ಟಪ್ಪನಂತೆ ತನ್ನ ಕ್ಲಾಸಿನ ದಿಗ್ವಿಜಯಕ್ಕೆ ಹೆಗಲಾಗುತ್ತಿದ್ದ. ಶಾಲೆಯ ಕೋಣೆ ಕೋಣೆಗಳಲ್ಲೂ ಯಾವೆಲ್ಲ ವಸ್ತುಗಳಿವೆ ಅಂತ ಹಿರಿಯಣ್ಣನಿಗೆ ಚೆನ್ನಾಗಿ ಗೊತ್ತು. ಕೆಲವೊಂದು ವಸ್ತುಗಳಿಗೂ ಅವನಷ್ಟೇ ವಯಸ್ಸು. ಅವನು ಈ ಕ್ಲಾಸ್‌ಗೆ ಬರೋವಾಗ ಆಗಷ್ಟೇ ಶಾಲೆಗೆ ಬಂದಿದ್ದ ಗಣಿತ ಶಿಕ್ಷಕಿಗೆ ಮದುವೆಯಾಗಿ ಎರಡು ಮಕ್ಕಳಾದರೂ ಅವನು ಮಾತ್ರ ಒಂದೇ ತರಗತಿಯಲ್ಲೇ ಕುಳಿತು ಬೆಂಚು ಸವೆಸುತ್ತಿದ್ದ. ಮೇಸ್ಟ್ರೆಗಳಿಂದ ಈ ಹಿರಿಯಣ್ಣ ಪೆಟ್ಟು ತಿಂದಷ್ಟು, ಉಗಿಸಿಕೊಂಡಷ್ಟು, ಬೇರಾರೂ ಉಗಿಸಿಕೊಳ್ಳುತ್ತಿರಲಿಲ್ಲ. “ನೀನು ದಂಡ ಪಿಂಡ, ಮೀಸೆ ಬಂದವನು, ಬೆಪ್ಪುತಕ್ಕಡಿ, ಬೋಳೇ ಶಂಕರ… ಇನ್ನು ಇದೇ ಕ್ಲಾಸಲ್ಲಿ ಮನೆ ಕಟ್ಟಿಕೋ’ ಅಂತ ಹೀಯಾಳಿಸಿದ ಮೇಸ್ಟ್ರ ಮಾತಿನ ಇರಿತಕ್ಕೆ ಅವನೊಳಗೊಂಡು ಮೂಕ ಕಂಪನವಾಗುತ್ತಿತ್ತು. ಗೆಳೆಯರಿಗೆ ಓದುವ, ಆಟವಾಡುವ, ಬಚಾವ್ ಆಗುವ, ಖುಷಿಯತ್ತ ಸಾಗುವ ದಾರಿ ತೋರಿಸುತ್ತಿದ್ದ ಈ ಹಿರಿಯಣ್ಣ, ಮೇಸ್ಟ್ರ ಬೈಗುಳಕ್ಕೆ ಮುಖ ಕೆಳಗೆ ಹಾಕಿ ಸೋಲುಂಡ ವೀರನಂತೆ ನಿಂತಿರುವುದನ್ನು ಗೊಂಬೆ ಕುಣಿಯುತ್ತಿರುವಂತೆ ನೋಡುತ್ತಿದ್ದ ಅವನ ಗೆಳೆಯರು ಮುಸಿ ಮುಸಿ ನಗುತ್ತಿದ್ದರು. ಆದರೂ ಹಿರಿಯಣ್ಣ ತನ್ನೊಳಗೆ ಹರಿದ ಮೂಕ ಅಳುವನ್ನು ನುಂಗಿಕೊಳ್ಳುತ್ತಾ, ಮತ್ತೆ ಮತ್ತೆ ತನ್ನ ಸ್ವಾಭಿಮಾನಕ್ಕೆ ಬೀಳುವ, ಏಟುಗಳನ್ನು ತಿಂದು ಸಹಿಸಿಕೊಳ್ಳುತ್ತಾ, ಆ ಕ್ಷಣವನ್ನು ಹೇಗೋ ಸಂಭಾಳಿಸಿ ತನಗೆ ಏನೂ ಆಗಿಲ್ಲ ಎಂದು ಗೆಳೆಯರೆದುರು ತೋರಿಸಿಕೊಳ್ಳಲೆತ್ನಿಸುತ್ತಿದ್ದ, ನಗಲು ಶ್ರಮಪಡುತ್ತಿದ್ದ. ಈ ಸಲವಾದರೂ ಜಾಣ ಗೆಳೆಯರು ತನ್ನ ಕಿವಿ ಹಿಂಡಿ ಪಾಠ ಹೇಳಿಯಾರು, ನಾನು ಪಾಸಾಗಬಹುದು ಅಂತ ದೇವರಿಗಾಗಿ ಕಾಯುವಂತೆ ತರಗತಿಯ ನೆರಳಿನಡಿ ಪುಟ್ಟ ಬೆಳಕಿಗಾಗಿ ಹಂಬಲಿಸುತ್ತಲೇ ಕೂರುತ್ತಿದ್ದ. ಪರೀಕ್ಷೆ ಮುಗಿಯುತ್ತದೆ. ಮತ್ತೆ ತಾನು ಫೇಲಾದರೆ, ಮತ್ತೆ ಇದೇ ತರಗತಿ ಗತಿಯಾದರೆ ಅನ್ನೋ ಭಯ ಅವನನ್ನು ಬಿಡುತ್ತಿರಲಿಲ್ಲ. ಫಲಿತಾಂಶ ಹೊರಬಿದ್ದ ದಿನ ಹಿರಿಯಣ್ಣ ಶಾಲೆಗೆ ಖಂಡಿತಾ ಬರುತ್ತಲೇ ಇರಲಿಲ್ಲ. ಯಾರೂ ಇಲ್ಲದ ಇರುಳ ಹೊತ್ತಿಗೆ ಬಂದು ಫಲಿತಾಂಶ ನೋಡುತ್ತಲೋ, “ನೀನು ಈ ಸಲಾನೂ ಡುಮ್ಕಿ ಮಾರಾಯ’ ಅಂತ ಯಾರೋ ಹೇಳುವ ಪ್ರತೀ ಸಲದ ಕರಾಳ ಸತ್ಯ ಕೇಳುತ್ತಲೋ ಹಿರಿಯಣ್ಣ ತನ್ನೊಳಗೇ ಮೌನವಾಗುತ್ತಿದ್ದ. ಮತ್ತದೇ ಪರಿಚಿತ ತರಗತಿಗೆ ಬಂದಾಗ ಹೊಸ ಗೆಳೆಯರು ಕೂತು ಅವನ ಭೀಮಕಾಯ ನೋಡಿ ನಗುತ್ತಿದ್ದರು. ಆದರೂ ಹಿರಿಯಣ್ಣ ಭರವಸೆ ಕಳಕೊಳ್ಳದೇ ಆ ತರಗತಿಯನ್ನೂ, ತನ್ನನ್ನೂ ನಂಬುತ್ತಾ ದಿನದೂಡುತ್ತಿದ್ದ. ನಂತರ ಮತ್ತೆ ಹಿಂದಿನ ವರ್ಷ ಕೇಳಿದ್ದೇ ಪಾಠ, ಬೈಗುಳಗಳು ಅವನ ಕಿವಿಗೂಡಲ್ಲಿ ಹಳೇ ಕ್ಯಾಸೆಟ್ಟಿನಂತೆ ಪ್ಲೇ ಆಗುತ್ತಿದ್ದವು!
– – – ಎರಡು ಮಾತು…
– ಅದೇ ಕ್ಲಾಸ್‌ನಲ್ಲಿ ಮತ್ತೆ ಮತ್ತೆ ಕೂರುವ ಹಿರಿಯಣ್ಣ ಈಗಿಲ್ಲದಿದ್ದರೂ ಫೇಲ್ ಆಗಿ ಸ್ವಾಭಿಮಾನಕ್ಕೆ ಧಕ್ಕೆಯಾಯಿತು ಅನ್ನೋರು ತರಗತಿಗಳಲ್ಲಿರುತ್ತಾರೆ. ಗೆಳೆಯರಾದವರು ಅವರನ್ನು ಮುನ್ನಡೆಸಬೇಕು, ಪಾಠ ಹೇಳಿಕೊಡಬೇಕು. ಅವರ ಪ್ರತಿಭೆ ಗುರುತಿಸಿ ಬೆನ್ನು ತಟ್ಟಬೇಕು. -ಫೇಲ್ ಆದ ಎನ್ನುವ ಕಾರಣಕ್ಕೆ ಶಿಕ್ಷಕರೂ ವಿದ್ಯಾರ್ಥಿಗಳಿಗೆ ಹೀನಾಮಾನ ಬೈಯ್ಯುವುದು ಸರಿಯಲ್ಲ. ಅವರ ವಯಸ್ಸು, ಜಾತಿ, ವೈಯಕ್ತಿಕ ಬದುಕನ್ನು ಫೇಲ್ ಆದ ಎನ್ನುವ ಕಾರಣಕ್ಕೆ ಜಾಲಾಡುವುದು ಇನ್ನೊಂದು ತಪ್ಪು. ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. – ಪ್ರಸಾದ್ ಶೆಣೈ ಆರ್.ಕೆ.