ಹಾನಗಲ್ಲ: ನೆರೆ ಹಾವಳಿ ಪರಿಣಾಮದಿಂದ ಚೇತರಿಕೊಂಡು ಬೆಳಕಿನ ಹಬ್ಬ ದೀಪಾವಳಿ ವ್ಯಾಪಾರಿಗಳ ಪಾಲಿಗೆ ಬೆಳಕಾಗುವ ಬದಲು ಕಗ್ಗತ್ತಲಾಗಿದೆ.
ಹಬ್ಬದ ಸಂತೆ ಎನಿಸಿದ ಶುಕ್ರವಾರ ಎಡಬಿಡದೆ ಸುರಿಯುತ್ತಿರುವ ಮಳೆ ಮಧ್ಯದಲ್ಲಿ ಸಾಲು ಸಂತಿಯ ವ್ಯಾಪಾರಿಗಳು ಸೇರಿದಂತೆ,ಕಾಯಿಪಲೆ, ಹಣ್ಣು ಹಂಪಲು ವ್ಯಾಪಾರಸ್ಥರು ಗಿರಾಕಿಗಳಿಲ್ಲದೆ ಪರದಾಡುವಂತಾಗಿದೆ. ವರ್ಷದಲ್ಲಿ ದೊಡ್ಡ ಹಬ್ಬವಾಗಿ ಅತ್ಯುತ್ತಮ ವ್ಯಾಪಾರದ ಸಂತೆಯಾಗಬೇಕಾದ ಶುಕ್ರವಾರ ಹಾನಗಲ್ಲ ಸಂತೆ ಗಿರಾಕಿಗಳಿಲ್ಲದೆ ಬಣಗುಡುತ್ತಿತ್ತು.ಅಂತರ್ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಸ್ಥರು ಇಡೀ ದಿನ ಸುಮ್ಮನೇ ಕಾಲ ಕಳೆಯುವಂತಾಗಿತ್ತು.
ವ್ಯಾಪಾರವಿಲ್ಲ: ದೀಪಾವಳಿ ಎಂದರೆ ಪ್ರತಿ ಮನೆಯಲ್ಲೂ ಸಂಭ್ರಮ, ಹೆಚ್ಚಾಗಿ ಕೃಷಿ ಬದುಕಿನಲ್ಲಿ ಸಂಗಾತಿಗಳಾದ ಹೋರಿ-ಎತ್ತುಗಳನ್ನು ಸಿಂಗರಿಸಿ ಓಡಿಸಿ ಖುಷಿ ಪಡಲು ಹೊಸ ಹೊಸ ಬಣ್ಣ ಬಣ್ಣದ ಹಗ್ಗ, ಹುರಿ, ಬಾರಿಕೋಲು ಖರೀ ದಿಸುವ ಈ ಸಂತೆಯ ದಿನ ಹಗ್ಗಗಳ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ನಿರಾಶೆಗೊಳಗಾಗಿದ್ದರು.
ಕಗ್ಗತ್ತಲು ದೀಪಾವಳಿ: ಹಬ್ಬದ ಸಂತೆ ದಿನ ದೊಡ್ಡ ಪ್ರಮಾಣದಲ್ಲಿ ಹಣ್ಣು-ಹೂವಿನ ವ್ಯಾಪಾರ ಜೋರಾಗಿ ನಡೆಯಬೇಕಾಗಿತ್ತು. ಆದರೆ ಹಣ್ಣು-ಹೂವಿನ ಅಂಗಡಿಗಳೂ ವ್ಯಾಪಾರವಿಲ್ಲದೆ ಬಣಗುಡುತ್ತಿದ್ದವು. ಬಟ್ಟೆಯಂಗಡಿಯಲ್ಲಂತೂ ವ್ಯಾಪಾರ ತೀರ ಕಡಿಮೆಯಾಗಿದ್ದು ಕಂಡು ಬಂದಿದೆ. ಹೀಗಾಗಿ ವ್ಯಾಪಾರಸ್ಥರ ಪಾಲಿಗೆ ಈ ದೀಪಾವಳಿ ಕಗ್ಗತ್ತಲ ದೀಪಾವಳಿ ಎಂಬಂತಾಗಿದೆ. ನೆರೆ ಹಾವಳಿಯಿಂದ ಕೃಷಿ ಭೂಮಿಯಲ್ಲಿ ನೆಚ್ಚಿದ ಪೈರು ಕೈಕೊಟ್ಟಿದ್ದರಿಂದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ನೆರೆಗೆ ಕಳೆದುಕೊಂಡ ಪೈರಿನ ಹೊಲದಲ್ಲಿ ಮತ್ತೆ ಹೊಸ ಪೈರು ಬಿತ್ತಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಮತ್ತೆ ಬಿಡಲಾರದ ಮಳೆ ರೈತರ ಶಕ್ತಿ ಕುಂದಿಸಿದೆ.
-ರವಿ ಲಕ್ಷ್ಮೇಶ್ವರ