Advertisement

Duleep Trophy ಸೆಮಿಫೈನಲ್‌: ದಕ್ಷಿಣದ ಗೆಲುವಿಗೆ 215 ರನ್‌ ಗುರಿ

10:04 PM Jul 07, 2023 | Team Udayavani |

ಬೆಂಗಳೂರು: ದುಲೀಪ್‌ ಟ್ರೋಫಿ ಪಂದ್ಯಾವಳಿಯ ಫೈನಲ್‌ ಪ್ರವೇಶಿಸಲು ಆತಿಥೇಯ ದಕ್ಷಿಣ ವಲಯ 215 ರನ್ನುಗಳ ಸವಾಲು ಪಡೆದಿದೆ. ಮಳೆಯಿಂದ ಶುಕ್ರವಾರದ ಆಟ ಬೇಗನೇ ಕೊನೆಗೊಂಡಾಗ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿತ್ತು.

Advertisement

ಕರ್ನಾಟಕದ ಬಲಗೈ ಮಧ್ಯಮ ವೇಗಿ ವೈಶಾಖ್‌ ವಿಜಯ್‌ಕುಮಾರ್‌ 76ಕ್ಕೆ 5 ವಿಕೆಟ್‌ ಉಡಾಯಿಸಿ ಉತ್ತರ ವಲಯಕ್ಕೆ ಬಿಸಿ ಮುಟ್ಟಿಸಿದರು. ಮೂರೇ ರನ್ನುಗಳ, ಆದರೆ ಬಹುಮೂಲ್ಯ ಲೀಡ್‌ ಪಡೆದಿದ್ದ ಉತ್ತರ ವಲಯ ತನ್ನ ದ್ವಿತೀಯ ಸರದಿಯನ್ನು 211ಕ್ಕೆ ಮುಗಿಸಿತು.

ಫೈನಲ್‌ ಪ್ರವೇಶಿಸಬೇಕಾದರೆ ದಕ್ಷಿಣ ವಲಯ ಸ್ಪಷ್ಟ ಗೆಲುವು ಸಾಧಿಸ ಬೇಕಾ ದುದು ಅನಿವಾರ್ಯ. ಅಕಸ್ಮಾತ್‌ ಅಂತಿಮ ದಿನದಾಟಕ್ಕೆ ಮಳೆಯಿಂದ ಅಡಚಣೆ ಯಾಗಿ ಪಂದ್ಯ ಡ್ರಾಗೊಂಡರೆ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಉತ್ತರ ವಲಯ ಪ್ರಶಸ್ತಿ ಸುತ್ತು ತಲುಪಲಿದೆ.

ಉತ್ತರ ವಲಯದ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಮಿಂಚಿದ ಆಟಗಾರನೆಂದರೆ ಕೀಪರ್‌ ಪ್ರಭ್‌ಸಿಮ್ರಾನ್‌. ಅವರು 63 ರನ್‌ ಹೊಡೆದರು. ಹರ್ಷಿತ್‌ ರಾಣಾ ಅನಂ ತರದ ಹೆಚ್ಚಿನ ಸ್ಕೋರರ್‌ (38). ಅಂಕಿತ್‌ ಕಲ್ಸಿ 29, ಅಂಕಿತ್‌ ಕುಮಾರ್‌ 26 ರನ್‌ ಹೊಡೆದರು. ಸಾಯಿ ಕಿಶೋರ್‌ (28ಕ್ಕೆ 3) ಮತ್ತು ವಿದ್ವತ್‌ ಕಾವೇರಪ್ಪ (47ಕ್ಕೆ 2) ಅವರಿಂದ ವಿಜಯ್‌ಕುಮಾರ್‌ಗೆ ಉತ್ತಮ ಬೆಂಬಲ ಲಭಿಸಿತು.

ಮೊದಲ ಸರದಿಯಲ್ಲಿ ಮಿಂಚಿದ ಮಾಯಾಂಕ್‌ ಅಗರ್ವಾಲ್‌ 15 ಹಾಗೂ ಸಾಯಿ ಸುದರ್ಶನ್‌ 5 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಪಿಚ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವ ಕಾರಣ ಹನುಮ ವಿಹಾರಿ ಬಳಗ ತೀವ್ರ ಎಚ್ಚರಿಕೆಯಿಂದ ಚೇಸಿಂಗ್‌ ನಡೆಸಬೇಕಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ಉತ್ತರ ವಲಯ- 198 ಮತ್ತು 211 (ಪ್ರಭ್‌ಸಿಮ್ರಾನ್‌ 63, ಹರ್ಷಿತ್‌ ರಾಣಾ 38, ಅಂಕಿತ್‌ ಕಲ್ಸಿ 29, ಅಂಕಿತ್‌ ಕುಮಾರ್‌ 26, ವಿಜಯ್‌ಕುಮಾರ್‌ ವೈಶಾಖ್‌ 76ಕ್ಕೆ 5, ಸಾಯಿ ಕಿಶೋರ್‌ 28ಕ್ಕೆ 3, ವಿದ್ವತ್‌ ಕಾವೇರಪ್ಪ 47ಕ್ಕೆ 2). ದಕ್ಷಿಣ ವಲಯ-195 ಮತ್ತು ವಿಕೆಟ್‌ ನಷ್ಟವಿಲ್ಲದೆ 21 (ಅಗರ್ವಾಲ್‌ ಬ್ಯಾಟಿಂಗ್‌ 15, ಸಾಯಿ ಸುದರ್ಶನ್‌ ಬ್ಯಾಟಿಂಗ್‌ 5).

ಪೂಜಾರ ಶತಕದ ಆಟ
ಆಲೂರು: ಟೆಸ್ಟ್‌ ತಂಡದಿಂದ ಬೇರ್ಪಟ್ಟ ಚೇತೇಶ್ವರ್‌ ಪೂಜಾರ ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿ ತನ್ನ ಆಟವಿನ್ನೂ ಮುಗಿದಿಲ್ಲ ಎಂದು ಸಾರಿದ್ದಾರೆ. ಇವರ 133 ರನ್‌ ಸಾಹಸದಿಂದ ಮಧ್ಯ ವಲಯ ವಿರುದ್ಧ ಪಶ್ಚಿಮ ವಲಯ 9 ವಿಕೆಟಿಗೆ 292 ರನ್‌ ಗಳಿಸಿದೆ. ಒಟ್ಟು ಮುನ್ನಡೆಯನ್ನು 384ಕ್ಕೆ ವಿಸ್ತರಿಸಿ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.
ಈ ಪಂದ್ಯಕ್ಕೂ ಮಳೆಯಿಂದ ಅಡಚಣೆಯಾಯಿತು. ಪಶ್ಚಿಮ ವಲಯ 3ಕ್ಕೆ 149 ರನ್‌ ಗಳಿಸಿದಲ್ಲಿಂದ ತೃತೀಯ ದಿನದಾಟ ಮುಂದುವರಿಸಿತ್ತು. ಪೂಜಾರ 50 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ದಿನದ ಮೊದಲ ಎಸೆತದಲ್ಲೇ ಸಫ‌ìರಾಜ್‌ ವಿಕೆಟ್‌ ಬಿತ್ತು. ಅವರ ಗಳಿಕೆ ಆರೇ ರನ್‌.

ಒಂದೆಡೆ ವಿಕೆಟ್‌ ಉರುಳುತ್ತ ಹೋದರೂ ಪೂಜಾರ ಕ್ರೀಸ್‌ ಆಕ್ರಮಿಸಿಕೊಂಡು ಇನ್ನಿಂಗ್ಸ್‌ ಬೆಳೆಸುತ್ತ ಹೋದರು. ಲಂಚ್‌ ವೇಳೆ 92 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಬಳಿಕ ಸೌರಭ್‌ ಖಾನ್‌ ಓವರ್‌ನಲ್ಲಿ 2 ಬೌಂಡರಿ ಬಾರಿಸಿ ಸೆಂಚುರಿ ಪೂರೈಸಿದರು.

ಶತಕದ ಬಳಿಕ ಪೂಜಾರ ಬಿರುಸಿನ ಆಟಕ್ಕಿಳಿದರು. ಅವರ 133 ರನ್‌ 278 ಎಸೆತಗಳಿಂದ ಬಂತು. ಇದರಲ್ಲಿ 14 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಅವರು 9ನೇ ವಿಕೆಟ್‌ ರೂಪದಲ್ಲಿ ರನೌಟ್‌ ಆಗಿ ಪೆವಿಲಿಯನ್‌ ಸೇರಿಕೊಂಡರು.

ಪೂಜಾರ ಹೊರತುಪಡಿಸಿದರೆ ಶುಕ್ರವಾರದ ಆಟದಲ್ಲಿ ಎರಡಂಕೆಯ ಗಡಿ ತಲುಪಿದ ಪಶ್ಚಿಮ ವಲಯದ ಏಕೈಕ ಆಟಗಾರನೆಂದರೆ ಕೀಪರ್‌ ಹೆಟ್‌ ಪಟೇಲ್‌ (27). ಶನಿವಾರ ಪಂದ್ಯದ ಅಂತಿಮ ದಿನ. ಪಂದ್ಯ ಡ್ರಾಗೊಂಡರೆ ಪಶ್ಚಿಮ ವಲಯ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಫೈನಲ್‌ ಪ್ರವೇಶಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಪಶ್ಚಿಮ ವಲಯ-220 ಮತ್ತು 9 ವಿಕೆಟಿಗೆ 292 (ಪೂಜಾರ 133, ಸೂರ್ಯ 52, ಹೆಟ್‌ ಪಟೇಲ್‌ 27, ಪೃಥ್ವಿ ಶಾ 25, ಸೌರಭ್‌ ಕುಮಾರ್‌ 79ಕ್ಕೆ 4, ಸಾರಾಂಶ್‌ ಜೈನ್‌ 56ಕ್ಕೆ 3). ಮಧ್ಯ ವಲಯ-128.

Advertisement

Udayavani is now on Telegram. Click here to join our channel and stay updated with the latest news.

Next