ಬೆಂಗಳೂರು: ಅನೇಕ ಮಂದಿ ರಾಷ್ಟ್ರೀಯ ತಂಡದ ಆಟಗಾರರನ್ನು ಒಳಗೊಂಡ 4 ತಂಡಗಳ ನಡುವಿನ “ದುಲೀಪ್ ಟ್ರೋಫಿ’ ಚತುರ್ದಿನ ಕ್ರಿಕೆಟ್ ಪಂದ್ಯಾವಳಿ ಗುರುವಾರ ಬೆಂಗಳೂರು ಮತ್ತು ಅನಂತಪುರದಲ್ಲಿ ಏಕಕಾಲಕ್ಕೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಬಿ; ಅನಂತಪುರದಲ್ಲಿ ಇಂಡಿಯಾ ಸಿ ಮತ್ತು ಇಂಡಿಯಾ ಡಿ ತಂಡಗಳು ಎದುರಾಗಲಿವೆ.
ಈ 4 ತಂಡಗಳ ನಾಯಕರೆಂದರೆ ಶುಭಮನ್ ಗಿಲ್, ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್.
ಈ ಪಂದ್ಯಾವಳಿ ಅನೇಕ ಯುವ ಆಟಗಾರರ ನಿಂತು ಆಡುವ ಸಾಮರ್ಥ್ಯಕ್ಕೊಂದು ಉತ್ತಮ ವೇದಿಕೆ ಆಗಲಿದೆ. ಹಾಗೆಯೇ ಪಾಕಿಸ್ಥಾನವನ್ನು ಕ್ಲೀನ್‌ಸ್ವೀಪ್ ಮಾಡಿರುವ ಬಾಂಗ್ಲಾದೇಶ ತಂಡ ಟೆಸ್ಟ್ ಸರಣಿಗಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಅಭ್ಯಾಸ ಪಂದ್ಯಾವಳಿಯೂ ಆಗಲಿದೆ.
ಸಿರಾಜ್ ಮೊದಲ ಸುತ್ತಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಸ್ಪರ್ಧೆಯಲ್ಲಿರುವ ರಾಹುಲ್, ಅಯ್ಯರ್, ಸರ್ಫರಾಜ್ ಅವರೆಲ್ಲ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಿದೆ. ಹಾಗೆಯೇ ರಸ್ತೆ ಅಪಘಾತದ ಬಳಿಕ ಟೆಸ್ಟ್ ಆಡದ ಪಂತ್ ಅವರಿಗೂ ಇದೊಂದು ಮಹತ್ವದ ಸರಣಿ ಆಗಲಿದೆ. ಇಶಾನ್ ಕಿಶನ್ ಸ್ನಾಯು ಸೆಳೆತಕ್ಕೆ ಸಿಲುಕಿರುವ ಕಾರಣ ಮೊದಲ ಪಂದ್ಯವನ್ನು ಆಡುವುದು ಅನುಮಾನ.