ಹೊಸದಿಲ್ಲಿ: ಮತ್ತೆ ಫಿಟ್ ಆಗಿರುವ ಅಜಿಂಕ್ಯ ರಹಾನೆ ಅವರು ದುಲೀಪ್ ಟ್ರೋಫಿಯಲ್ಲಿ ಬಲಿಷ್ಠ ಪಶ್ಚಿಮ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕೂಟವು ತಮಿಳುನಾಡಿನಲ್ಲಿ ಸೆ. 8ರಿಂದ 25ರ ವರೆಗೆ ನಡೆಯಲಿದೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ರಹಾನೆ ದುಲೀಪ್ ಟ್ರೋಫಿ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳುತ್ತಿದ್ದಾರೆ. ರಣಜಿ ಫೈನಲಿಸ್ಟ್ ಮುಂಬಯಿ ತಂಡದಿಂದ ಖ್ಯಾತ ಆಟಗಾರರಾದ ಪೃಥ್ವಿ ಶಾ ಮತ್ತು ಶಾದೂìಲ್ ಠಾಕೂರ್ ಸಹಿತ ಯಶಸ್ವಿ ಜೈಸ್ವಾಲ್, ಶ್ಯಾಮ್ಸ್ ಮುಲಾನಿ, ಹಾರ್ದಿಕ್ ತಾಮೋರೆ ಮತ್ತು ತನುಷ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ಸೌರಾಷ್ಟ್ರದಿಂದ ಜಯದೇವ್ ಉನಾದ್ಕತ್ ಸಹಿತ ರಾಹುಲ್ ತ್ರಿಪಾಠಿ ಅವರನ್ನು ಪಶ್ಚಿಮ ವಲಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತ್ರಿಪಾಠಿ ಇತ್ತೀಚೆಗೆ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದರು.ಮಧ್ಯ ವಲಯ ತಂಡವೂ ತನ್ನ ತಂಡವನ್ನು ಪ್ರಕಟಿಸಿದೆ. ಕರಣ್ ಶರ್ಮ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ರಣಜಿ ಟ್ರೋಫಿ ಚಾಂಪಿಯನ್ ಮಧ್ಯ ಪ್ರದೇಶ ತಂಡದ ಬಹುತೇಕ ಆಟಗಾರರು ಈ ತಂಡದಲ್ಲಿ ಸೇರಿದ್ದಾರೆ. ಯಶ್ ದುಬೆ, ಶುಭಂ ಶರ್ಮ, ಕುಮಾರ್ ಕಾರ್ತಿಕೇಯ, ಅಂಕಿತ್ ರಜಪೂತ್ ಸೇರಿದಂತೆ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ತಂಡದಲ್ಲಿರುವ ಪ್ರಮುಖರು.