Advertisement

Duleep Trophy: ದಕ್ಷಿಣ ವಲಯಕ್ಕೆ 3 ರನ್‌ ಹಿನ್ನಡೆ

10:36 PM Jul 06, 2023 | Team Udayavani |

ಬೆಂಗಳೂರು: ಉತ್ತರ ವಲಯ ವಿರುದ್ಧದ ದುಲೀಪ್‌ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮುನ್ನಡೆ ಸಾಧಿಸುವಲ್ಲಿ ದಕ್ಷಿಣ ವಲಯ ವಿಫ‌ಲವಾಗಿದೆ. ಉತ್ತರದ 198 ರನ್ನು ಗಳ ಸಾಮಾನ್ಯ ಮೊತ್ತಕ್ಕೆ ಜವಾಬು ನೀಡುವ ಹಾದಿಯಲ್ಲಿ 195ಕ್ಕೆ ಆಲೌಟ್‌ ಆಗಿದೆ. ಮಳೆಯ ಅಡಚಣೆಯಿಂದಾಗಿ ದ್ವಿತೀಯ ದಿನದಾಟವನ್ನು ಈ ಹಂತಕ್ಕೇ ನಿಲ್ಲಿಸಲಾಯಿತು.

Advertisement

ದಕ್ಷಿಣ ವಲಯ 4ಕ್ಕೆ 63 ರನ್‌ ಗಳಿಸಿ ದಲ್ಲಿಂದ ದ್ವಿತೀಯ ದಿನದಾಟ ಮುಂದು ವರಿಸಿತ್ತು. ಈ 4 ವಿಕೆಟ್‌ 35 ರನ್ನಿಗೆ ಉದುರಿ ಹೋಗಿತ್ತು. ಸಾಯಿ ಸುದರ್ಶನ್‌ (8), ಆರ್‌. ಸಮರ್ಥ್ (1), ನಾಯಕ ಹನುಮ ವಿಹಾರಿ (1) ಮತ್ತು ಕೀಪರ್‌ ರಿಕ್ಕಿ ಭುಯಿ (ಗೋಲ್ಡನ್‌ ಡಕ್‌) ತಂಡದ ರಕ್ಷಣೆಗೆ ನಿಲ್ಲುವಲ್ಲಿ ವಿಫ‌ಲರಾಗಿದ್ದರು.

ಗುರುವಾರದ ಆಟದಲ್ಲಿ ತಂಡವನ್ನು ಆಧರಿಸಿ ನಿಂತವರೆಂದರೆ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಮತ್ತು ತಿಲಕ್‌ ವರ್ಮ ಮಾತ್ರ. ಇವರು 5ನೇ ವಿಕೆಟಿಗೆ 110 ರನ್‌ ಪೇರಿಸಿ ದಕ್ಷಿಣ ವಲಯವನ್ನು ಮೇಲೆತ್ತಿದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಮತ್ತೆ ಉತ್ತರ ವಲಯದ ಬೌಲರ್ ಮೇಲುಗೈ ಸಾಧಿಸಿದರು. 50 ರನ್‌ ಅಂತರದಲ್ಲಿ ಆತಿಥೇಯರ 6 ವಿಕೆಟ್‌ ಉರುಳಿ ಹೋಯಿತು.

ಮಾಯಾಂಕ್‌ ಅಗರ್ವಾಲ್‌ 115 ಎಸೆತಗಳನ್ನು ನಿಭಾಯಿಸಿ 76 ರನ್‌ ಹೊಡೆದರು (10 ಬೌಂಡರಿ). ಇದು ಈ ಪಂದ್ಯದಲ್ಲಿ ದಾಖಲಾದ ಮೊದಲ ಅರ್ಧ ಶತಕ. ಟಿ20 ತಂಡಕ್ಕೆ ಆಯ್ಕೆಯಾದ ಖುಷಿಯಲ್ಲಿದ್ದ ತಿಲಕ್‌ ವರ್ಮ 101 ಎಸೆತ ಎದುರಿಸಿ 46 ರನ್‌ ಮಾಡಿದರು (5 ಬೌಂಡರಿ, 1 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌: ಉತ್ತರ ವಲಯ-198. ದಕ್ಷಿಣ ವಲಯ-195 (ಅಗರ್ವಾಲ್‌ 76, ತಿಲಕ್‌ ವರ್ಮ 46, ಸಾಯಿ ಕಿಶೋರ್‌ 21, ಜಯಂತ್‌ ಯಾದವ್‌ 38ಕ್ಕೆ 3, ವೈಭವ್‌ ಅರೋರ 57ಕ್ಕೆ 3, ಬಲ್‌ತೇಜ್‌ ಸಿಂಗ್‌ 40ಕ್ಕೆ 2, ಹರ್ಷಿತ್‌ ರಾಣಾ 41ಕ್ಕೆ 2).

Advertisement

ಪೂಜಾರ, ಸೂರ್ಯ ಅರ್ಧ ಶತಕ
ಆಲೂರು: ದುಲೀಪ್‌ ಟ್ರೋಫಿ ಪಂದ್ಯಾವಳಿಯ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮಧ್ಯ ವಲಯದ ವಿರುದ್ಧ ಹಾಲಿ ಚಾಂಪಿಯನ್‌ ಪಶ್ಚಿಮ ವಲಯ ಉತ್ತಮ ಹಿಡಿತ ಸಾಧಿಸಿದೆ. ಚೇತೇಶ್ವರ್‌ ಪೂಜಾರ ಮತ್ತು ಸೂರ್ಯಕುಮಾರ್‌ ಯಾದವ್‌ ಅರ್ಧ ಶತಕ ಬಾರಿಸಿ ಮಿಂಚಿದರು.

ಪಶ್ಚಿಮ ವಲಯದ 220 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ಮಧ್ಯ ವಲಯ 128ಕ್ಕೆ ಕುಸಿಯಿತು. 92 ರನ್‌ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಪ್ರಿಯಾಂಕ್‌ ಪಾಂಚಾಲ್‌ ಬಳಗ 3ಕ್ಕೆ 149 ರನ್‌ ಗಳಿಸಿ ದ್ವಿತೀಯ ದಿನದಾಟ ಮುಗಿಸಿದೆ. ಲೀಡ್‌ 241ಕ್ಕೆ ಏರಿದೆ.

ಟೆಸ್ಟ್‌ ತಂಡದಿಂದ ಬೇರ್ಪಟ್ಟಿರುವ ಪೂಜಾರ 50 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 103 ಎಸೆತಗಳನ್ನು ಎದುರಿಸಿದ್ದು, 5 ಬೌಂಡರಿ ಹೊಡೆದಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಅವರದು ಬಿರುಸಿನ ಆಟವಾಗಿತ್ತು. ಅವರು 58 ಎಸೆತಗಳಿಂದ 52 ರನ್‌ ಬಾರಿಸಿದರು (8 ಬೌಂಡರಿ, 1 ಸಿಕ್ಸರ್‌). ಪೃಥ್ವಿ ಶಾ 25, ಪಾಂಚಾಲ್‌ 15 ರನ್‌ ಮಾಡಿ ವಾಪಸಾಗಿದ್ದಾರೆ.

ಗುಜರಾತ್‌ನ ಎಡಗೈ ಮಧ್ಯಮ ವೇಗಿ ಅರ್ಜಾನ್‌ ನಾಗಸ್ವಾಲ 5 ವಿಕೆಟ್‌ ಕಿತ್ತು ಮಧ್ಯ ವಲಯವನ್ನು ಕಾಡಿದರು. ಅತೀತ್‌ ಶೇಖ್‌ 3, ಚಿಂತನ್‌ ಗಜ 2 ವಿಕೆಟ್‌ ಉರುಳಿಸಿದರು. 48 ರನ್‌ ಮಾಡಿದ ರಿಂಕು ಸಿಂಗ್‌ ಮಧ್ಯ ವಲಯದ ಟಾಪ್‌ ಸ್ಕೋರರ್‌ (69 ಎಸೆತ, 6 ಬೌಂಡರಿ). ಧ್ರುವ ಜುರೆಲ್‌ 46 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next