Advertisement

Duleep Trophy: 2 ವಿಕೆಟ್‌ ಜಯ- ದಕ್ಷಿಣ ವಲಯಕ್ಕೆ ಫೈನಲ್‌ ಲಕ್‌

10:41 PM Jul 08, 2023 | Team Udayavani |

ಬೆಂಗಳೂರು: ಉತ್ತರ ವಲಯ ವಿರುದ್ಧ ಎರಡು ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಆತಿಥೇಯ ದಕ್ಷಿಣ ವಲಯ ದುಲೀಪ್‌ ಟ್ರೋಫಿ ಫೈನಲ್‌ಗೆ ಲಗ್ಗೆ ಇರಿಸಿದೆ. ಜು. 12ರಿಂದ ಬೆಂಗಳೂರಿನಲ್ಲೇ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಹಾಲಿ ಚಾಂಪಿಯನ್‌ ಪಶ್ಚಿಮ ವಲಯವನ್ನು ಎದುರಿಸಲಿದೆ.

Advertisement

ಇದು ಕಳೆದ 2022-23ನೇ ಸಾಲಿನ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯದ ಪುನರಾವರ್ತನೆಯಾಗಿದೆ. ಅಂದು ಕೊಯಮತ್ತೂರಿನಲ್ಲಿ ನಡೆದ ಫೈನಲ್‌ನಲ್ಲಿ ಪಶ್ಚಿಮ ವಲಯ 294 ರನ್ನುಗಳ ಪ್ರಚಂಡ ಗೆಲುವು ಸಾಧಿಸಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶವೊಂದು ದಕ್ಷಿಣ ವಲಯದ ಮುಂದಿದೆ.

215 ರನ್ನುಗಳ ಗುರಿ ಪಡೆದಿದ್ದ ದಕ್ಷಿಣ ವಲಯ 8 ವಿಕೆಟ್‌ ಕಳೆದುಕೊಂಡು 219 ರನ್‌ ಮಾಡಿತು. ನೋಲಾಸ್‌ 21 ರನ್‌ ಮಾಡಿದಲ್ಲಿಂದ ಅಂತಿಮ ದಿನದಾಟ ಮುಂದುವರಿಸಿತು. ಅಂತಿಮ ದಿನವಾದ ಶನಿವಾರ ಮಾಯಾಂಕ್‌ ಅಗರ್ವಾಲ್‌ ಮತ್ತು ನಾಯಕ ಹನುಮ ವಿಹಾರಿ ಉತ್ತಮ ಹೋರಾಟ ಸಂಘಟಿಸಿದರು. ಮಳೆಯ ಭೀತಿ ಇದ್ದುದರಿಂದ ಬಿರುಸಿನ ಆಟಕ್ಕೆ ಇಳಿದರು. ಆದರೂ ಪಂದ್ಯ ತೂಗುಯ್ನಾಲೆಯಾಡುತ್ತ ಸಾಗಿತು. ಯಾರೂ ಗೆಲ್ಲಬಹುದಾದ ಸ್ಥಿತಿ ನಿರ್ಮಾಣಗೊಂಡಿತು.

ಮಳೆಯಿಂದ ಅಡ್ಡಿ
ಎರಡು ಸಲ ಮಳೆಯಿಂದ ಅಡಚಣೆ ಯಾದರೂ ಪಂದ್ಯ ಪೂರ್ತಿ ಗೊಳ್ಳುವಂತಾದದ್ದು ದಕ್ಷಿಣ ವಲಯದ ಅದೃಷ್ಟಕ್ಕೆ ಸಾಕ್ಷಿ. ಅಂತಿಮ ಅವಧಿಗೂ ಮುನ್ನ 2 ಗಂಟೆ ಕಾಲ ಮಳೆಯಿಂದ ಆಟ ಸ್ಥಗಿತಗೊಂಡಿತ್ತು. ಆಗ ದಕ್ಷಿಣ ವಲಯದ ಜಯಕ್ಕೆ 32 ರನ್‌ ಅಗತ್ಯವಿತ್ತು. ರಿಕ್ಕಿ ಭುಯಿ ಮತ್ತು ತಿಲಕ್‌ ವರ್ಮ ಕ್ರೀಸ್‌ ಆಕ್ರಮಿಸಿಕೊಂಡಿದ್ದರು. ಆದರೆ ಸ್ಕೋರ್‌ 191ರಿಂದ 213ಕ್ಕೆ ತಲುಪುವಷ್ಟರಲ್ಲಿ 4 ವಿಕೆಟ್‌ ಉರುಳಿದಾಗ ವಿಹಾರಿ ಪಡೆಗೆ ಆತಂಕ ಎದುರಾದದ್ದು ಸುಳ್ಳಲ್ಲ.

ಅಗರ್ವಾಲ್‌ ಮತ್ತೆ ಫಿಫ್ಟಿ
ಮೊದಲ ಇನ್ನಿಂಗ್ಸ್‌ನಲ್ಲಿ 3 ರನ್‌ ಹಿನ್ನಡೆಗೆ ಸಿಲುಕಿದ ಕಾರಣ ದಕ್ಷಿಣ ವಲಯಕ್ಕೆ ಸ್ಪಷ್ಟ ಗೆಲುವು ಅನಿವಾರ್ಯವಾಗಿತ್ತು. ಸ್ಥಳೀಯ ಬ್ಯಾಟಿಂಗ್‌ ಹೀರೋ ಮಾಯಾಂಕ್‌ ಅಗರ್ವಾಲ್‌ ಸತತ 2 ಅರ್ಧ ಶತಕದೊಂದಿಗೆ ತಂಡಕ್ಕೆ ರಕ್ಷಣೆ ಒದಗಿಸಿದರು. ಮೊದಲ ಇನ್ನಿಂಗ್ಸ್‌ ನ‌ಲ್ಲಿ 76 ರನ್‌ ಮಾಡಿದ್ದ ಅಗರ್ವಾಲ್‌, ದ್ವಿತೀಯ ಸರದಿಯಲ್ಲಿ 54 ರನ್‌ ಕೊಡುಗೆ ಸಲ್ಲಿಸಿದರು (57 ಎಸೆತ, 7 ಬೌಂಡರಿ). ಈ ಪಂದ್ಯದಲ್ಲಿ ದಕ್ಷಿಣ ವಲಯ ಪರ ಅಗರ್ವಾಲ್‌ ಹೊರತುಪಡಿಸಿ ಬೇರೆ ಯಾರಿಂದಲೂ ಆರ್ಧ ಶತಕ ದಾಖಲಾಗಲಿಲ್ಲ.

Advertisement

ಹನುಮ ವಿಹಾರಿ 42 ಎಸೆತ ಎದುರಿಸಿ 43 ರನ್‌ ಹೊಡೆದರು (8 ಬೌಂಡರಿ). ರಿಕ್ಕಿ ಭುಯಿ 34, ತಿಲಕ್‌ ವರ್ಮ 25, ಕೊನೆಯಲ್ಲಿ ಆರ್‌. ಸಾಯಿಕಿಶೋರ್‌ 15 ರನ್‌ ಮಾಡಿ ಅಜೇಯರಾಗಿ ಉಳಿದರು. ಆರ್‌. ಸಮರ್ಥ್ (5) ಮತ್ತು ವಾಷಿಂಗ್ಟನ್‌ ಸುಂದರ್‌ (2) ವೈಫ‌ಲ್ಯ ಫೈನಲ್‌ ತಯಾರಿಗೆ ಹಿನ್ನಡೆಯಾಗಿ ಪರಿಣಮಿಸುವ
ಸಾಧ್ಯತೆ ಇದೆ.

ಸಂಕ್ಷಿಪ್ತ ಸ್ಕೋರ್‌
ಉತ್ತರ ವಲಯ-198 ಮತ್ತು 211. ದಕ್ಷಿಣ ವಲಯ-195 ಮತ್ತು 8 ವಿಕೆಟಿಗೆ 219 (ಅಗರ್ವಾಲ್‌ 54, ವಿಹಾರಿ 43, ರಿಕ್ಕಿ ಭುಯಿ 34, ತಿಲಕ್‌ ವರ್ಮ 25, ಸಾಯಿ ಸುದರ್ಶನ್‌ 17, ಸಾಯಿಕಿಶೋರ್‌ ಔಟಾಗದೆ 15, ಹರ್ಷಿತ್‌ ರಾಣಾ 84ಕ್ಕೆ 3, ವೈಭವ್‌ ಆರೋರಾ 46ಕ್ಕೆ 2, ಬಲ್‌ತೇಜ್‌ ಸಿಂಗ್‌ 47ಕ್ಕೆ 2). ಪಂದ್ಯಶ್ರೇಷ್ಠ: ಮಾಯಾಂಕ್‌ ಅಗರ್ವಾಲ್‌.

ಪಶ್ಚಿಮ ವಲಯಕ್ಕೆ 34ನೇ ಫೈನಲ್‌
ಆಲೂರು: ಮಹತ್ವದ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಹಾಲಿ ಚಾಂಪಿಯನ್‌ ಪಶ್ಚಿಮ ವಲಯ “ದುಲೀಪ್‌ ಟ್ರೋಫಿ’ ಫೈನಲ್‌ ತಲುಪಿದೆ. ಇದರೊಂದಿಗೆ ತನ್ನ ಫೈನಲ್‌ ದಾಖಲೆಯನ್ನು 34ಕ್ಕೆ ವಿಸ್ತರಿಸಿದೆ. ಸದ್ಯ ಪಶ್ಚಿಮ ವಲಯ 18 ಸಲ ಚಾಂಪಿಯನ್‌ ಆಗಿ ಉತ್ತರ ವಲಯದೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದೆ.
ಮಳೆಪೀಡಿತ ಅಂತಿಮ ದಿನದಾಟದಲ್ಲಿ ಕೇವಲ 36 ಓವರ್‌ಗಳ ಆಟ ಸಾಧ್ಯವಾಯಿತು. ಆಗ ಗೆಲುವಿಗೆ 399 ರನ್ನುಗಳ ಕಠಿನ ಗುರಿ ಪಡೆದಿದ್ದ ಮಧ್ಯ ವಲಯ 4 ವಿಕೆಟ್‌ ಕಳೆದುಕೊಂಡು 128 ರನ್‌ ಗಳಿಸಿತ್ತು.

ಉಳಿದ 6 ವಿಕೆಟ್‌ಗಳನ್ನು ಉರುಳಿಸಿ ಸ್ಪಷ್ಟ ಗೆಲುವನ್ನು ಕಾಣಲೇಬೇಕೆಂಬ ತರಾತುರಿ ಪಶ್ಚಿಮ ವಲಯಕ್ಕೇನೂ ಇರಲಿಲ್ಲ. ಅದು ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್ನುಗಳ ದೊಡ್ಡ ಲೀಡ್‌ ಗಳಿಸಿ ಆಗಲೇ ಫೈನಲ್‌ ಪ್ರವೇಶವನ್ನು ಖಾತ್ರಿಗೊಳಿಸಿತ್ತು.

3ನೇ ದಿನದಾಟದ ಮುಕ್ತಾಯಕ್ಕೆ ಪಶ್ಚಿಮ ವಲಯ 9 ವಿಕೆಟಿಗೆ 292 ರನ್‌ ಮಾಡಿತ್ತು. ಶನಿವಾರ 297ಕ್ಕೆ ಆಲೌಟ್‌ ಆಯಿತು. ಚೇಸಿಂಗ್‌ ಮಾಡಲಿಳಿದ ಮಧ್ಯ ವಲಯ ಆರಂಭಿಕರಾದ ಹಿಮಾಂಶು ಮಂತ್ರಿ (4) ಮತ್ತು ವಿವೇಕ್‌ ಸಿಂಗ್‌ (9) ಅವರನ್ನು ಬೇಗನೇ ಕಳೆದುಕೊಂಡಿತು. ಅನಂತರ ಧ್ರುವ ಜುರೆಲ್‌ (25), ಅಮನ್‌ದೀಪ್‌ ಖಾರೆ (ಔಟಾಗದೆ 27), ರಿಂಕು ಸಿಂಗ್‌ (40) ಮತ್ತು ಉಪೇಂದ್ರ ಯಾದವ್‌ (ಔಟಾಗದೆ 18) ಸೇರಿ ಕುಸಿತವನ್ನು ತಡೆದರು.

ಭೋಜನ ವಿರಾಮದ ವೇಳೆ ಮಧ್ಯ ವಲಯ 3ಕ್ಕೆ 101 ರನ್‌ ಮಾಡಿತ್ತು. ರಿಂಕು ಸಿಂಗ್‌ ಬಿರುಸಿನ ಆಟ ಪ್ರದರ್ಶಿಸಿದರು. ಅವರ 40 ರನ್‌ 30 ಎಸೆತಗಳಲ್ಲಿ ಬಂತು. ಸಿಡಿಸಿದ್ದು 3 ಸಿಕ್ಸರ್‌ ಹಾಗೂ 3 ಫೋರ್‌.

ಸಂಕ್ಷಿಪ್ತ ಸ್ಕೋರ್‌: ಪಶ್ಚಿಮ ವಲಯ-220 ಮತ್ತು 297. ಮಧ್ಯ ವಲಯ-128 ಮತ್ತು 4 ವಿಕೆಟಿಗೆ 128. ಪಂದ್ಯಶ್ರೇಷ್ಠ: ಅತೀತ್‌ ಶೇs….

Advertisement

Udayavani is now on Telegram. Click here to join our channel and stay updated with the latest news.

Next