Advertisement

ಅತಿಮಳೆ, ಪ್ರಕೃತಿ ಮೇಲಿನ ಹಸ್ತಕ್ಷೇಪ ಕೊಡಗು ಅನಾಹುತಕ್ಕೆ ಕಾರಣ

06:00 AM Sep 28, 2018 | Team Udayavani |

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅತಿಯಾದ ಮಳೆ ಮತ್ತು ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಕಾರಣವೆಂದು  ಜಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾದ ಹಿರಿಯ ವಿಜ್ಞಾನಿಗಳ ತಂಡ ವರದಿ ನೀಡಿದೆ.

Advertisement

ಕೊಡಗು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೂ ಜಿ.ಎಸ್‌.ಐ.ನ ಮೂವರು ಭೂವಿಜ್ಞಾನಿಗಳು ತಯಾರಿಸಿದ 279 ಪುಟಗಳ ಪ್ರಾಥಮಿಕ ವರದಿಯನ್ನು  ಸಲ್ಲಿಸಲಾಗಿದೆ.ಜಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ.ವಿ.ಮಾರುತಿ ಮತ್ತು ಭೂವಿಜ್ಞಾನಿಗಳಾದ ಅಂಕುರ್‌ ಕುಮಾರ್‌, ಶ್ರೀವಾಸ್ತವ್‌ ಮತ್ತು ಸುನಂದನ್‌ ಬಸು ಅವರುಗಳು ಜಿಲ್ಲೆಯ 105 ಪ್ರಕೃತಿ ವಿಕೋಪದ ಸ್ಥಳಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದ್ದಾರೆ. 

ಜುಲೈ 9ರಂದು ಜಿಲ್ಲೆಯ ಕೆಲವು ಭಾಗಗಳಲ್ಲಿ 3.4 ರಿಕ್ಟರ್‌ ಮಾಪನಾಂಕ ಪ್ರಮಾಣದ ಲಘು ಭೂಕಂಪ ಸಂಭವಿ ಸಿದ್ದು, ಭೂ ಕುಸಿತಕ್ಕೆ ಲಘು ಭೂಕಂಪ ಕಾರಣವಲ್ಲ ಎಂದು ತಮ್ಮ ಪ್ರಾಥಮಿಕ ವರದಿಯಲ್ಲಿ  ಸ್ಪಷ್ಟಪಡಿಸಿದ್ದಾರೆ. 

ಅತಿಯಾದ ಮಳೆ ಮತ್ತು ಪ್ರಾಕೃತಿಕವಾಗಿದ್ದ ಬೆಟ್ಟ ಶ್ರೇಣಿಗಳಲ್ಲಿ, ಗಿರಿಕಂದರಗಳು ಹಾಗೂ ಇಳಿಜಾರು ಪ್ರದೇಶಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ತೆರವು ಮಾಡಿರುವುದು ಮತ್ತು ತಡೆಗೋಡೆಗಳ ನಿರ್ಮಾಣದಲ್ಲೂ ವೈಜ್ಞಾನಿಕತೆ ಕಾಪಾಡಿಕೊಳ್ಳದಿರುವುದು ಭೂಕುಸಿತಗಳಿಗೆ ಮೂಲಕಾರಣವೆಂದು ವರದಿಯಲ್ಲಿ ಉಲ್ಲೇಖೀಸಿದ್ದಾರೆ.

ರಸ್ತೆ ನಿರ್ಮಾಣ, ಬೆಟ್ಟ ಇಳಿಜಾರು ಪ್ರದೇಶಗಳಲ್ಲಿ ವಾಣಿಜೋದ್ಯಮದ ರೆಸಾರ್ಟ್‌, ಹೋಂಸ್ಟೇ ನಿರ್ಮಿಸಿರುವುದು ಹಾಗೂ ಹೊಸ ಕಾಫಿತೋಟಗಳ ನಿರ್ಮಾಣಕ್ಕೆ ಭೂಮಿಯ ಭೌಗೋಳಿಕ ಲಕ್ಷಣವನ್ನು ಬದಲಿಸಿರುವುದು, ಒಳಚರಂಡಿ ವ್ಯವಸ್ಥೆಯ ನಿರ್ವಹಣೆ ಮಾಡದಿರುವುದು ಕೂಡ ಪ್ರಕೃತಿ ವಿಕೋಪಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದೆ ಎಂದು ವಿಜ್ಞಾನಿಗಳು ವರದಿಯಲ್ಲಿ ತಿಳಿಸಿದ್ದಾರೆ.

Advertisement

ಭಾರೀ ಮಳೆಯಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಇಳಿಜಾರು ಮತ್ತು ಬೆಟ್ಟ ತಪ್ಪಲುಗಳಲ್ಲಿ ದಿಕ್ಕು ಬದಲಿಸಿ ಹರಿದಿರುವುದು ಕೂಡ ಜಲಸ್ಫೋಟ ಅಥವಾ ಭೂಕುಸಿತಕ್ಕೆ ಕಾರಣವಾಗಿದೆ. ಮಡಿಕೇರಿಯ ಇಂದಿರಾನಗರವನ್ನು ತಮ್ಮ ವರದಿಯಲ್ಲಿ ಉದಾಹರಣೆಯಾಗಿ ತೆಗೆದುಕೊಂಡು ಅಧ್ಯಯನ ನಡೆಸಿರುವ ಭೂವಿಜ್ಞಾನಿಗಳು ನೈಸರ್ಗಿಕವಾಗಿದ್ದ ಇಳಿಜಾರಿನ ಬೆಟ್ಟವನ್ನು ಹಂತಹಂತವಾಗಿ ಕತ್ತರಿಸಿರುವುದು, ಅದೇ ಮಾದರಿಯಲ್ಲಿ ಬೆಟ್ಟತಪ್ಪಲುಗಳನ್ನು ಕಾಫಿ ಮತ್ತು ಕೃಷಿ ಚಟುವಟಿಕೆಗೆ ಭೌಗೋಳಿಕವಾಗಿ ಮಾರ್ಪಡಿಸಿರುವುದು ಕೂಡ ಭೂಕುಸಿತ, ಮರಗಳು ಧರೆಗುರುಳಲು ಕಾರಣವಾಗಿದೆ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ. ಈ ಹಿಂದೆಯೂ  ಪಶ್ಚಿಮಘಟ್ಟವನ್ನು ಮೈಕ್ರೋ ಸರ್ವೆ ನಡೆಸಿರುವ ಜಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳು, ಪಶ್ಚಿಮಘಟ್ಟದ ನೈಸರ್ಗಿಕ ಬದಲಾವಣೆ ಮತ್ತು ಅಲ್ಲಿ ನಡೆಯುವ ಪ್ರತಿಯೊಂದು ಪ್ರಾಕೃತಿಕ ಕ್ರಿಯೆಯನ್ನು ಅಧ್ಯಯನಕ್ಕೆ ಒಳಪಡಿಸಿ ವಿಶೇಷ ವರದಿಯನ್ನು ದತ್ತಾಂಶ ಸಹಿತ ದಾಖಲು ಮಾಡಿದ್ದಾರೆ.

ಮಾನವನ ತಿಳಿವಳಿಕೆಯ ಕೊರತೆಯಿಂದಾಗಿ ಕಾಫಿತೋಟಗಳ ಮೇಲ್ಭಾಗ ನಿರ್ಮಿಸುವ ಕೆರೆಕಟ್ಟೆಗಳು, ಕೃತಕ ಬಂಡೆಗಳಲ್ಲಿ ನೀರಿನಾಂಶ ಸೋರಿಕೆಯಾಗಿ ಬೆಟ್ಟಗಳು ಕುಸಿದು ತೋಟಗಳನ್ನು ಬಲಿಪಡೆದಿರುವುದಾಗಿ ವರದಿಯಲ್ಲಿ ದಾಖಲಿಸಿದ್ದಾರೆ. ಮಾತ್ರವಲ್ಲದೇ ಭೂಮಿಯ ಗರ್ಭದಲ್ಲಿ ಪದರಗಳ ಶಕ್ತಿ ಕುಂದಿರುವುದು ಕೂಡ ಭೂಕುಸಿತಕ್ಕೆ ಎಡೆಮಾಡಿದೆ ಎಂದು 279 ಪುಟಗಳ ವರದಿಯಲ್ಲಿ ವಿವರಿಸಲಾಗಿದೆ.

ಲಘು ಭೂಕಂಪನದಿಂದ ಭೂ ಕುಸಿತ ಸಂಭವಿಸಿದ್ದರೆ, ಅದು ಜುಲೈ 9ರಂದೇ ಸಂಭವಿಸಬೇಕಿತ್ತು ಎಂದು ಹೇಳಿರುವ ವಿಜ್ಞಾನಿಗಳು ಆಗಸ್ಟ್‌ 15ರಿಂದ 17ರ ಅವಧಿಯಲ್ಲಿ ಘಟಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ ಮಾತ್ರವಲ್ಲದೇ ಪ್ರಕೃತಿ ವಿಕೋಪಕ್ಕೆ ಕಾರಣಗಳನ್ನು ತಿಳಿಸಿರುವ ಜಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾದ ಹಿರಿಯ ಭೂವಿಜ್ಞಾನಿಗಳು ಅದನ್ನು ತಡೆಯುವ ಬಗ್ಗೆಯೂ ವರದಿಯಲ್ಲಿ ತಿಳಿಸಿದ್ದಾರೆ.

ರಸ್ತೆಗಳ ನಿರ್ಮಾಣದ ಸಂದರ್ಭ ತಜ್ಞರನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿರುವ ವಿಜ್ಞಾನಿಗಳು ಜಿಲ್ಲೆಯಲ್ಲಿ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿರು ವುದು ಮತ್ತು ಅವುಗಳ ನಿರ್ವಹಣೆ ಇಲ್ಲದಿರುವುದನ್ನು ಕೂಡ ಬೊಟ್ಟು ಮಾಡಿದ್ದಾರೆ. 

ಜಿಲ್ಲಾಡಳತದಿಂದ ಕ್ರಮ
ಎನ್‌ಡಿಆರ್‌ಎಫ್, ಜಿಯೋಫಿಸಿಕ್‌ ವಿಜ್ಞಾನಿಗಳು ಜಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳು ಪ್ರತ್ಯೇಕವಾದ ವರದಿಯನ್ನು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಸಲ್ಲಿಸುತ್ತವೆ. ಆ ಬಳಿಕ ಸರಕಾರ ನೀಡುವ ಸಲಹೆ, ನಿರ್ದೇಶನಗಳಂತೆ ಜಿಲ್ಲೆಯಲ್ಲಿ ಕೆಲವು ನಿಯಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಮಾಹಿತಿ ನೀಡಿದರು.

ಭೂ ವಿಜ್ಞಾನಿಗಳು ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದಾಗ ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮಗಳಿಗೆ ತೆರಳಲು ರಸ್ತೆ ವ್ಯವಸ್ಥೆ ಇರಲಿಲ್ಲ. ಇದೀಗ ಎಲ್ಲೆಡೆ ತೆರಳಲು ಸಾಧ್ಯವಿರುವ ಹಿನ್ನೆಲ್ಲೆಯಲ್ಲಿ ಮೈಕ್ರೋ ಸರ್ವೇಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ನ್ಯಾಷನಲ್‌ ಜಿಯೋಫಿಸಿಕ್‌ ಸಂಶೋ ಧನಾ ಸಂಸ್ಥೆ, ಗಾಳಿಬೀಡು ಮತ್ತು ಭಾಗ ಮಂಡಲದಲ್ಲಿ ಸಿಸ್ಮೋಗ್ರಾಫ್ ಮೀಟರ್‌ ಅಳವಡಿಸಿದ್ದು, ಭೂಕಂಪನದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಜನತೆ ಭೂ ಕಂಪನದ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪಶ್ಚಿಮ ಘಟ್ಟದಡಿಯಲ್ಲಿರುವ ಕೊಡಗು ಜಿಲ್ಲೆಯಲ್ಲಿ ಕೆಲವು ನಿರ್ಬಂಧರಹಿತ ಕೃಷಿ ಚಟುವಟಿಕೆಗಳು ನಡೆಯುತ್ತಿವೆ ಇವುಗಳಿಗೆ ಕಟ್ಟುನಿಟ್ಟಾಗಿ ನಿರ್ಬಂಧ ಹೇರಬೇಕು. ಭೂ ಪರಿವರ್ತನೆಯ ಮಿತಿ ಮತ್ತು ನಿಯಮಗಳು ಕೂಡ ಪರಿಸರ ಪೂರಕವಾಗಿಲ್ಲ. ಅವುಗಳನ್ನು ಕೂಡ ಶಿಸ್ತುಬದ್ಧವಾಗಿ ಮಾಡಬೇಕು. ನಗರ, ಪಟ್ಟಣಗಳ ರೂಪುರೇಷೆಗಳು ಕೂಡ ಕ್ರಮವಾಗಿಲ್ಲ, ಅಂಗೀಕೃತ ಮತ್ತು ವೈಜ್ಞಾನಿಕ ರೀತಿಯ ಯೋಜನೆಗಳು ನಗರ, ಪಟ್ಟಣಗಳಲ್ಲಿ ಇಲ್ಲ ಎಂದು ಕೆಲವು ದೋಷಗಳನ್ನು ಕೂಡ ವಿಜ್ಞಾನಿಗಳ ತಂಡ ವರದಿಯಲ್ಲಿ ಉಲ್ಲೇಖೀಸಿದ್ದು, ಅವುಗಳನ್ನು ಹತೋಟಿಗೆ ತರಬೇಕೆಂದು ಸಲಹೆ ನೀಡಿದ್ದಾರೆ.

ಜಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳು ಪಶ್ಚಿಮಘಟ್ಟ ಸಾಲಿನ ಪ್ರದೇಶವನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯ ಪ್ರಕೃತಿ ವಿಕೋಪದ ಪ್ರದೇಶಗಳನ್ನು ಸರ್ವೆ ನಡೆಸಿ ವರದಿ ನೀಡಿದೆ. ಇದೇ ಮಾದರಿಯಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾಗಿ ಮೈಕ್ರೋ ಸರ್ವೆ ನಡೆಸುವಂತೆ ಜಿಲ್ಲಾಡಳಿತ ರಾಜ್ಯ ಸರಕಾರದ ಮೂಲಕ ಜಿಯೋಲಾಜಿಕಲ್‌ ಸರ್ವೆ ಆಫ್ ಇಂಡಿಯಾ ಸಂಸ್ಥೆಯನ್ನು ಮನವಿ ಮಾಡಿದೆ. ಭವಿಷ್ಯದ ದಿನಗಳಲ್ಲಿ ಪ್ರಕೃತಿ ವಿಕೋಪಗಳನ್ನು ತಡೆಯುವುದು, ನಗರ, ಪಟ್ಟಣ, ಗ್ರಾಮ ಪ್ರದೇಶಗಳಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ನಿರ್ವಹಿಸಬೇಕಾದ ಮುಂಜಾಗ್ರತಾ ವ್ಯವಸ್ಥೆಗಳನ್ನು ಅಧ್ಯಯನ ನಡೆಸಲು ಮೈಕ್ರೋ ಸರ್ವೆ ಸಹಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next