ಧಾರವಾಡ: ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಬಿಐ, ಸಾಕ್ಷಾಧಾರಗಳ ಕೊರತೆಯ ಕಾರಣ ನೀಡಿ ಪ್ರಕರಣ ಮುಕ್ತಾಯಗೊಳಿಸಿದ್ದು, ಇದಕ್ಕೆ ಸಚಿವ ಎಚ್.ಕೆ.ಪಾಟೀಲ ನೇತೃತ್ವದ ಕ್ಯಾಬಿನೆಟ್ ಉಪ ಸಮಿತಿಯ ವೈಫಲ್ಯವೇ ಕಾರಣವಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆರೋಪಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 12,228 ಕೋಟಿ ಮೌಲ್ಯದ ಮೂರು ಕೋಟಿ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣಕ್ಕೆ ಸಂಬಂ ಧಿಸಿದಂತೆ ದೂರು ದಾಖಲಿಸಿಕೊಂಡಿದ್ದ ಸಿಬಿಐ, ನ್ಯಾ| ಸಂತೋಷ್ ಹೆಗ್ಡೆ ಹಾಗೂ ತನಿಖಾ ಸಂಸ್ಥೆ ಮುಖ್ಯಸ್ಥ ಡಾ|ಯು.ವಿ.ಸಿಂಗ್ ನೀಡಿದ ವರದಿಯನ್ನು ಕನಿಷ್ಠ ಗಣನೆಗೂ ತೆಗೆದುಕೊಳ್ಳದೆ ಪ್ರಕರಣ ಮುಕ್ತಾಯಕ್ಕೆ ಪತ್ರ ಬರೆದಿದೆ.
ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಯಾಬಿನೆಟ್ ಉಪ ಸಮಿತಿ ಮುಖ್ಯಸ್ಥ ಎಚ್.ಕೆ.ಪಾಟೀಲ್ ಹಾಗೂ ಗಣಿ ಮತ್ತು ಭೂವಿಜ್ಞಾನ ಮಂತ್ರಿ ವಿನಯ ಕುಲಕರ್ಣಿ, ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗಿದೆ ಎಂದರು. ಹಿಂದಿನ ಸರ್ಕಾರದಲ್ಲಿನ ಗಣಿ ಅಕ್ರಮಗಳ ಕುರಿತಂತೆ ಮಾತನಾಡಿದ್ದ ಸಿದ್ದರಾಮಯ್ಯ, ಪಾರದರ್ಶಕ ಆಡಳಿತ ನೀಡುವುದಾಗಿ ಹೇಳಿ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ್ದರು.
ಆದರೆ ಅಧಿಕಾರ ಸಿಕ್ಕ ನಂತರ ಅಕ್ರಮ ಗಣಿಗಾರಿಕೆಯ ವಿಷಯವನ್ನು ಪ್ರಸ್ತಾಪಿಸದೆ ಜಾಣ ಮೌನಕ್ಕೆ ಶರಣಾಗಿದ್ದಾರೆ. ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಸವಿವರವಾದ ವರದಿ ನೀಡಿದ್ದರೂ ಅದನ್ನು ಪರಿಗಣಿಸದೆ, ತನಿಖಾ ಸಂಸ್ಥೆಗೆ ಸೂಕ್ತ ದಾಖಲೆ ನೀಡದೆ ಪ್ರಕರಣ ಮುಚ್ಚಿ ಹೋಗುವಂತೆ ಮಾಡಿದ್ದಾರೆ ಎಂದು ದೂರಿದರು.
“ಬಿ’ ಶ್ರೇಣಿ ಗಣಿಗಾರಿಕೆಯಲ್ಲಿ 72 ಗಣಿ ಕಂಪೆನಿಗಳಿಂದ ಅಕ್ರಮವಾಗಿ ರಫ್ತಾಗಿರುವ ಅದಿರಿನ ಸಾವಿರಾರು ಕೋಟಿ ರೂಪಾಯಿ ವಸೂಲಾಗದೆ ಬಾಕಿ ಉಳಿದಿದೆ. ನೈಸರ್ಗಿಕ ಸಂಪತ್ತು, ಕುಡಿಯುವ ನೀರು, ಸ್ಥಳಿಯರ ಬದುಕು ಮೂರಾಬಟ್ಟೆಯಾಗಿದ್ದರೂ ಈ ಸರ್ಕಾರ ಕನಿಷ್ಠ ಪಕ್ಷ ಕಾಳಜಿ ತೋರದಿರುವುದು ಬೇಸರದ ಸಂಗತಿ. ಜನರೇ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.