Advertisement

ಹೆಸರು ತೆಗೆಯಲು ಸ್ಥಳಾಂತರ ಕಾರಣ

12:57 AM Apr 22, 2019 | Team Udayavani |

ಬೆಂಗಳೂರು: ಹಿಂದೆಂದಿಗಿಂತ ಈ ಬಾರಿ ಅತ್ಯಧಿಕ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವ ಬಗ್ಗೆ ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಡೀ ಪ್ರಕ್ರಿಯೆಯ ಪರಾಮರ್ಶೆ ನಡೆಯುತ್ತಿದ್ದು, ವಂಚಿತರಲ್ಲಿ ಬಹುತೇಕರು ಒಂದು ಕಡೆಯಿಂದ ಮತ್ತೊಂದೆಡೆ ಸ್ಥಳಾಂತರಗೊಂಡವರೇ ಆಗಿದ್ದಾರೆ.

Advertisement

2018ರ ಜನವರಿಯಿಂದ 2019ರ ಜನವರಿವರೆಗೆ ನಗರದಲ್ಲಿ 7.52 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದು, ಇದರಲ್ಲಿ ಅಕ್ಟೋಬರ್‌-ಜನವರಿ ಅವಧಿಯಲ್ಲೇ 1.76 ಲಕ್ಷ ಹೆಸರುಗಳನ್ನು ಆಯೋಗ ತೆಗೆದುಹಾಕಿದೆ. ಪಟ್ಟಿಯಿಂದ ಒಟ್ಟಾರೆ ಒಂದು ವರ್ಷದಲ್ಲಿ ಕೈಬಿಟ್ಟ ಹೆಸರುಗಳಲ್ಲಿ 4.72 ಲಕ್ಷ ಮತದಾರರು ಅಂದರೆ ಶೇ.63ರಷ್ಟು ಸ್ಥಳಾಂತರಗೊಂಡವರಾಗಿದ್ದಾರೆ. ಹೀಗೆ ಡಿಲೀಟ್‌ ಮಾಡುವ ಭರದಲ್ಲಿ ಸಾವಿರಾರು ಮತದಾರರೂ ಹಕ್ಕು ವಂಚಿತರಾಗಿದ್ದಾರೆ.

ಇದು ಆಯೋಗಕ್ಕೂ ತಲೆನೋವಾಗಿದ್ದು, ಜಿಲ್ಲಾ ಮಟ್ಟದ ಚುನಾವಣಾ ಸಿಬ್ಬಂದಿ ಲೋಪವೂ ಇದಕ್ಕೆ ಕಾರಣ ಎಂದು ಹೇಳಲಾಗಿದೆ. “ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕೆಲವು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಂದೇ ಒಂದು “ಡಿಲೀಷನ್‌’ ಕೂಡ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಚುನಾವಣಾ ಆಯೋಗವು ಬೆಂಗಳೂರು ನಗರ ವ್ಯಾಪ್ತಿಯ ಚುನಾವಣಾ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿತ್ತು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೊಂದರಲ್ಲೇ 1,400 ಮತಗಟ್ಟೆಗಳಲ್ಲಿ 2018ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಒಂದು ಹೆಸರು ಕೂಡ ಡಿಲೀಟ್‌ ಆಗಿರಲಿಲ್ಲ. ಹಾಗಾಗಿ, ಉದ್ದೇಶಪೂರ್ವಕವಾಗಿ ಈ ಸಲ ತೆಗೆದುಹಾಕುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಚುನಾವಣಾ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಸ್ಥಳಾಂತರಗೊಂಡು ಸೇರ್ಪಡೆ ಮರೀತಾರೆ: ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಯಲಹಂಕ, ಬೆಂಗಳೂರು ದಕ್ಷಿಣ ಸೇರಿದಂತೆ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟ 7.52 ಲಕ್ಷ ಮತದಾರರಲ್ಲಿ 1.92 ಲಕ್ಷ ಮೃತಪಟ್ಟವರಿದ್ದು, 80 ಸಾವಿರ ಪುನರಾವರ್ತಿತರು ಆಗಿದ್ದಾರೆ.

Advertisement

ಉಳಿದ 4.72 ಲಕ್ಷ ಸ್ಥಳಾಂತರಗೊಂಡವರಾಗಿದ್ದಾರೆ. ಇದರಲ್ಲಿ ರಾಜರಾಜೇಶ್ವರಿ ನಗರ, ಮಹದೇವಪುರ, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಪುಲಕೇಶಿನಗರ, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅತ್ಯಧಿಕವಾಗಿದ್ದು, ಕನಿಷ್ಠ 6,500ರಿಂದ ಗರಿಷ್ಠ 12 ಸಾವಿರ ಹೆಸರುಗಳನ್ನು “ಶಿಫrಡ್‌’ ಹೆಸರಿನಲ್ಲಿ ತೆಗೆದುಹಾಕಲಾಗಿದೆ (2019ರ ಜ. 1ರವರೆಗೆ).

ನಗರದಲ್ಲಿ ಹೀಗೆ ಜನ ಸ್ಥಳಾಂತರಗೊಳ್ಳುವುದು ಸರ್ವೇಸಾಮಾನ್ಯ. ಆದರೆ, ಅವರಲ್ಲಿ ಬಹುತೇಕರು ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದುಹಾಕಿ, ಸ್ಥಳಾಂತರಗೊಂಡ ಪ್ರದೇಶ ವ್ಯಾಪ್ತಿಯಲ್ಲಿನ ಪಟ್ಟಿಗೆ ಸೇರ್ಪಡೆ ಮಾಡುವುದೇ ಇಲ್ಲ. ಇದರಿಂದ ಸಮಸ್ಯೆ ಆಗುತ್ತದೆ. ಒಟ್ಟಾರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಸ್ಥಳಾಂತರ ಕುರಿತು ಮತದಾರರಿಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

“ಇದೆಲ್ಲವೂ ಸ್ವತಃ ಮತಗಟ್ಟೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಲ್ಲಿಸಿದ ಮಾಹಿತಿಗಳನ್ನು ಆಧರಿಸಿವೆ. ಅಷ್ಟಕ್ಕೂ ಹೆಸರುಗಳನ್ನು ತೆಗೆದುಹಾಕಿದ ನಂತರ ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿತ್ತು. ಆದರೆ, ಆ ಸಮಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬರಲಿಲ್ಲ. ಒಮ್ಮೆಲೆ ಮತದಾನದ ದಿನ ಹೆಸರು ಬಿಟ್ಟುಹೋಗಿದೆ ಎಂದು ಆರೋಪಿಸುವುದು ಎಷ್ಟು ಸರಿ’ ಎಂದು ಅಧಿಕಾರಿಗಳು ಕೇಳುತ್ತಾರೆ.
ಡಿಲೀಟ್‌ ಮಾಡಲೇಬೇಕೆಂಬ ಉತ್ಸಾಹ ತಜ್ಞರು

“ಡಿಲೀಟ್‌ ಮಾಡಿರುವುದು ತಪ್ಪಲ್ಲ; ಆದರೆ, ಸಾಧ್ಯವಾದಷ್ಟು ಹೆಚ್ಚು ಡಿಲೀಟ್‌ ಮಾಡಲೇಬೇಕೆಂಬ ಉತ್ಸಾಹದಲ್ಲಿ ಹೀಗೆ ಬೇಕಾಬಿಟ್ಟಿ ತೆಗೆದುಹಾಕಲಾಗಿದೆ. ಉದಾಹರಣಗೆ ಶಿವಾಜಿನಗರದ ಮತಗಟ್ಟೆ ಸಂಖ್ಯೆ 43ರಲ್ಲಿ 735 ಮತದಾರರಿದ್ದಾರೆ. ಆ ಪೈಕಿ 215 ಹೆಸರು ಡಿಲೀಟ್‌ ಆಗಿವೆ. ಅಂದರೆ, ಅಷ್ಟೊಂದು ಜನ ಒಂದೇ ಕಡೆ ಸ್ಥಳಾಂತರಗೊಂಡಿದ್ದಾರೆಯೇ? ವಿವಿ ಪುರದಲ್ಲಿ ಒಂದೇ ಬೀದಿಯಲ್ಲಿ 24 ಮತದಾರರ ಹೆಸರು ಕೈಬಿಡಲಾಗಿದೆ.

ಈ ಹಿನ್ನೆಲೆಯಲ್ಲಿ “ಡಿಲೀಷನ್‌’ ಪ್ರಕ್ರಿಯೆ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಒಂದೇ ವಿಳಾಸದಲ್ಲಿ ಮಾಲಿಕ ಮತ್ತು ಬಾಡಿಗೆದಾರ ಇರುತ್ತಾರೆ. ಮಾಲಿಕ ತನ್ನ ಮನೆ ಬಾಡಿಗೆ ಕೊಟ್ಟು ಬೇರೆ ಕಡೆ ವಾಸವಾಗಿದ್ದರೂ, ಮತವನ್ನು ಮೂಲ ವಿಳಾಸದಿಂದಲೇ ಚಲಾವಣೆ ಮಾಡುತ್ತಿರುತ್ತಾನೆ. ಆದರೆ, ಈ ಬಾರಿ ಅಂತಹವರ ಹೆಸರೂ ತೆಗೆದುಹಾಕಲಾಗಿದೆ’ ಎಂದು ಚುನಾವಣಾ ಕಾರ್ಯಕರ್ತ ಆನಂದ ತೀರ್ಥ ವಿವರಿಸುತ್ತಾರೆ.

ಪಕ್ಷಾತೀತವಾಗಿ ಡಿಲೀಷನ್‌?: ನಿರ್ದಿಷ್ಟ ರಾಜಕೀಯ ಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಮತದಾರರ ಹೆಸರು ಡಿಲೀಟ್‌ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ, 2018ರ ವಿಧಾನಸಭಾ ಚುನಾವಣಾ ಫ‌ಲಿತಾಂಶ ಅವಲೋಕಿಸಿದರೆ, ಈ ಪ್ರಕ್ರಿಯೆಯು ಪಕ್ಷಾತೀತವಾಗಿ ನಡೆಯುತ್ತಿರುವುದನ್ನು ಕಾಣಬಹುದು.

8514 ಮತಗಟ್ಟೆಗಳ ಪೈಕಿ 7,485ರಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಮೂರು ರಾಜಕೀಯ ಪಕ್ಷಗಳು ಅತಿ ಹೆಚ್ಚು ಮತಗಳನ್ನು ಪಡೆದ ಬೂತ್‌ಗಳನ್ನು ವಿಶ್ಲೇಷಿಸಿದಾಗ, ಅಲ್ಲೆಲ್ಲಾ ಹೆಚ್ಚು-ಕಡಿಮೆ ಡಿಲೀಷನ್‌ ಪ್ರಮಾಣ ಒಂದೇ ರೀತಿಯಾಗಿದೆ ಎಂದು ಚುನಾವಣಾ ವಿಶ್ಲೇಷಕ ವಿಂಗ್‌ ಕಮಾಂಡರ್‌ ಪಿ.ಜಿ. ಭಟ್‌ ತಿಳಿಸುತ್ತಾರೆ.

2018ರಲ್ಲಿ 7514 ಮತಗಟ್ಟೆಗಳ ಪೈಕಿ ಬಿಜೆಪಿಯು 3,809 ಮತಗಟ್ಟೆಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದು, ಆ ಪೈಕಿ 1,174 ಮತಗಟ್ಟೆಗಳಲ್ಲಿ ಶೇ. 2ಕ್ಕಿಂತ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ. ಅದರ ಪ್ರತಿಶತ ಪ್ರಮಾಣ ಶೇ. 30.82ರಷ್ಟಾಗುತ್ತದೆ.

ಅದೇ ರೀತಿ, 2,899 ಮತಗಟ್ಟೆಗಳಲ್ಲಿ ಕಾಂಗ್ರೆಸ್‌ ಲೀಡ್‌ನ‌ಲ್ಲಿದ್ದು, 890 ಮತಗಟ್ಟೆಗಳಲ್ಲಿ ಶೇ. 2ಕ್ಕಿಂತ ಹೆಚ್ಚು ಹೆಸರು ಡಿಲೀಟ್‌ ಆಗಿವೆ. ಅದರ ಪ್ರತಿಶತ ಪ್ರಮಾಣ ಶೇ. 30.70 ಇದೆ. ಇನ್ನು 757 ಮತಗಟ್ಟೆಗಳಲ್ಲಿ ಜೆಡಿಎಸ್‌ ಮುಂಚೂಣಿಯಲ್ಲಿದ್ದು, 228 ಮತಗಟ್ಟೆಗಳಲ್ಲಿ ಶೇ. 2ಕ್ಕಿಂತ ಅಧಿಕ ಹೆಸರುಗಳನ್ನು ಕೈಬಿಟ್ಟಿದ್ದು, ಹೀಗೆ ಶೇ.30.12ರಷ್ಟು ಹೆಸರು ತೆಗೆದುಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಡಿಲೀಟ್‌ಗೆ ಕಾರಣಗಳು (2018ರ ಜ.1ರಿಂದ 2019ರ ಜ.1)
-ಸ್ಥಳಾಂತರ 4,72,510
-ಮೃತಪಟ್ಟ ಕಾರಣ 1,95,013
-ಪುನರಾವರ್ತನೆ 80,010
-ಇತರರು 5,368
-ಒಟ್ಟಾರೆ ಡಿಲೀಷನ್‌ಗಳು 7,52,901

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next