Advertisement

ಭಕ್ತಿಭಾವದಿಂದ ಶ್ರೀ ಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠೆ

01:00 AM Mar 14, 2019 | Harsha Rao |

ಕಾಸರಗೋಡು: ನಗರದ ಹೃದಯ ಭಾಗದಲ್ಲಿ ರಾರಾಜಿಸುತ್ತಿರುವ ಇತಿಹಾಸ ಪ್ರಸಿದ್ಧ ನೂತನ ಶಿಲಾಮಯ ದೇಗುಲದಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪರುಷ ಮತ್ತು ಈಶಾನ ಎಂಬ ಪಂಚಮುಖಗಳಿಂದ ಶೋಭಿಸುವ ಸಾಕ್ಷಾತ್‌ ಪರಮ ಶಿವನಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃಪ್ರತಿಷ್ಠೆ  ಸಾವಿರಾರು ಭಕ್ತರ ಸಮಕ್ಷಮದಲ್ಲಿ ಭಕ್ತಿ, ಶ್ರದ್ಧೆ, ಸಡಗರ ಮತ್ತು ಸಂಭ್ರಮದಿಂದ ಬುಧವಾರ ಬೆಳಗ್ಗೆ ನಡೆಯಿತು.

Advertisement

ಕ್ಷೇತ್ರ ತಂತ್ರಿವರ್ಯರಾದ ಉಚ್ಚಿಲ ಶ್ರೀ ಪದ್ಮನಾಭ ತಂತ್ರಿಗಳ ದಿವ್ಯ ಸಾನ್ನಿಧ್ಯದಲ್ಲಿ ಮೀನ ಲಗ್ನ ರೋಹಿಣಿ ನಕ್ಷತ್ರ ಶುಭ ಮುಹೂರ್ತದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠೆ, ಜೀವಕಲಶಾಭಿಷೇಕ, ಅಷ್ಟಬಂಧ ಲೇಪನ, ಶ್ರೀ ಗಣಪತಿ, ಶ್ರೀ ಶಾಸ್ತಾವು ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಬಲಿ ಮೊದಲಾದ ವೈದಿಕ ಕ್ರಮಗಳು ಜರಗಿದವು. ಶ್ರೀ ಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠೆಯನ್ನು ವೀಕ್ಷಿಸಲು ಸಾವಿರಾರು ಭಕ್ತರು ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿದ್ದು, ಸಕಲ ವೈದಿಕ ವಿಧಿವಿಧಾನಗಳನ್ನು ವೀಕ್ಷಿಸಿ ಸಾರ್ಥಕತೆಯ ಮನೋಭಾವವನ್ನು ತುಂಬಿಕೊಂಡರು. ಸುಮಾರು ಎರಡು ವರ್ಷಗಳಿಂದ ಬಾಲಾಲಯದಲ್ಲಿದ್ದ ಬಿಂಬಗಳನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಜೆ ನಿತ್ಯ ನೈಮಿತ್ತಿಕೆಗಳ ಪುನರ್‌ ನಿರ್ಣಯ, ಅನುಷ್ಠಾನ ಪ್ರಾರ್ಥನೆ, ಕವಾಟ ಬಂಧನ, ಮಂಡಲ ಪೂಜೆ, ದೊಡ್ಡ ಬಲಿಕಲ್ಲು ಅಧಿವಾಸ ಮೊದಲಾದವು ನಡೆದವು.

ಇದೇ ಸಂದರ್ಭದಲ್ಲಿ ಬೆಳಗ್ಗೆ ಶ್ರೀ ವರದರಾಜ ವೆಂಕಟರಮಣ ಭಜನ ಸಂಘ ಕಾಸರಗೋಡು, ಶ್ರೀ ಸತ್ಯಸಾಯಿ ಸೇವಾ ಸಮಿತಿ ಕಾಸರಗೋಡು, ಭಜನ ಸಾಮ್ರಾಟ್‌ ಕೊಲ್ಯ ಮೊದಲಾದ ತಂಡಗಳಿಂದ ಭಜನೆ ಸಂಕೀರ್ತನೆ, ಕಯ್ನಾರಿನ ಮಹಿಳಾ ಯಕ್ಷಗಾನ ಕೂಟದಿಂದ “ಗಧಾಯುದ್ಧ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು. ರಾತ್ರಿ ಧರ್ಮಸ್ಥಳ ಹನುಮಗಿರಿ ಬಪ್ಪನಾಡು ಮೇಳಗಳ ಸುಪ್ರಸಿದ್ಧ ಕಲಾವಿದರಿಂದ “ಮಹಾಕಲಿ ಮಗಧೇಂದ್ರ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಗರುಡ ದರ್ಶನ: ಭಕ್ತರ ಪುಳಕ
ದೇಗುಲದಲ್ಲಿ ಬುಧವಾರ ಬೆಳಗ್ಗೆ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃಪ್ರತಿಷ್ಠೆಯ ಸಂದರ್ಭದಲ್ಲಿ ಪುನಃಪ್ರತಿಷ್ಠೆ ವೀಕ್ಷಿಸಲೋ ಎಂಬಂತೆ ಗರುಡವೊಂದು ಧ್ವಜಸ್ತಂಭದ ಮೇಲೆ ಕಾಣಿಸಿಕೊಂಡು ಭಕ್ತರಲ್ಲಿ ಪುಳಕ ಸೃಷ್ಟಿಸಿತು. ಗರುಡ ಧ್ವಜಸ್ತಂಭದ ಮೇಲೆ ಕುಳಿತು ಗರುಡ ಭಕ್ತರ ಕಣ್ಣಿಗೆ ಕಾಣಿಸಿಕೊಂಡಾಗ ಭಕ್ತರು ಜಯಕಾರವನ್ನು ಮೊಳಗಿಸಿದರು. ವಿಶೇಷವಾಗಿ ಗರುಡ ಕಾಣಿಸಿಕೊಂಡಾಗ ಭಕ್ತರಲ್ಲಿ ಹೊಸ ಚೈತನ್ಯ ಮೂಡಿದ ಅನುಭವ ಉಂಟಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next