Advertisement

Udupi: ಅತಿವೃಷ್ಟಿ, ಅನಾವೃಷ್ಟಿಗೆ ಧರ್ಮ, ಸಂಸ್ಕೃತಿ ನಾಶ ಕಾರಣ-ಅದಮಾರು ಶ್ರೀ 

11:22 AM Aug 02, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಕೃಷ್ಣ ಲೀಲೋತ್ಸವವನ್ನು ಸಾಂಪ್ರದಾಯಿಕವಾಗಿ ಮತ್ತು ವೈಭವ ಪೂರ್ಣವಾಗಿ ಆಚರಿಸುವ ಪ್ರಯುಕ್ತ ಆ.1ರಿಂದ ಸೆ.1ರ ವರೆಗೆ ನಡೆಯಲಿರುವ ಶ್ರೀ ಕೃಷ್ಣ ಮಾಸೋತ್ಸವದ ಉದ್ಘಾಟನೆ ಗುರುವಾರ ನೆರವೇರಿತು.

Advertisement

ರಾಜಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವದಿಸಿ, ಜೀವನದ ಪ್ರತಿದಿನವೂ ಗೊಂದಲ ಇರುತ್ತದೆ. ನಿವಾರಣೆಗೆ ಶ್ರೀ ಕೃಷ್ಣನ ಯೋಗೇಶ್ವರಾಯ ನಮಃ ನಾಮಸ್ಮರಣೆ ಉತ್ತಮ ದಾರಿ. ಮಕ್ಕಳನ್ನು ಚಿಕ್ಕಂದಿನಲ್ಲಿಯೇ ತಿದ್ದಬೇಕು. ನಮ್ಮ ದೇಶಕ್ಕೆ ಸಂಸ್ಕೃತಿ ಯನ್ನು ತಿಳಿಸುವ ಬಹುದೊಡ್ಡ ಸಂಪತ್ತು ಭಗವದ್ಗೀತೆಯಾಗಿದೆ. ನಮಗೂ  ಗೊಂದಲ ಬಂದಾಗ ನಮಗೆ ಪ್ರೇರಕವಾಗುವ ಮಂತ್ರ ಶ್ರೀ ಯೋಗೀಶ್ವರಾಯ ನಮಃ. ಒಂದು ತಿಂಗಳು ಶ್ರೀ ಕೃಷ್ಣ
ಜನ್ಮೋತ್ಸವ ಮಾಡುವುದರಿಂದ ವಿವಿಧ ಜಯಂತಿಗಳನ್ನು ಮಾಡುವ ಅಗತ್ಯ ಇದೆಯೋ ಇಲ್ಲವೋ ಎಂಬುದು ತಿಳಿಯಬಹುದು ಎಂದರು.

ನೆಲ, ಜಲಗಳು ಮಲಿನವಾದ ಬಳಿಕ ಶುದ್ಧ ಮಾಡುವುದಕ್ಕಿಂತ ಮೊದಲೇ ಶುದ್ಧ ಮಾಡುವುದು ಪ್ರಶಸ್ತವಾಗಿದೆ. ಶ್ರೀ ಕೃಷ್ಣನನ್ನು ಪ್ರತಿದಿನ ಉಪಾಸನೆ ಮಾಡುವ ಕೆಲಸವಾಗಬೇಕು. ಧರ್ಮ, ಸಂಸ್ಕೃತಿಯ ನಾಶಕ್ಕೆ ಪ್ರಯತ್ನ ಮಾಡುವ ಸಂದರ್ಭದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತದೆ. ಪ್ರತಿದಿನವೂ ಮನೆಯಲ್ಲಿ ಕೃಷ್ಣ ಲೀಲೋತ್ಸವ ಮಾಡಿದಂತೆ ಮನಸ್ಸಿನಲ್ಲಿಯೂ ಪ್ರತಿ ದಿನ ಲೀಲೋತ್ಸವ ಆಗಬೇಕು ಎಂದರು.

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಶ್ರೀಕೃಷ್ಣ ಉತ್ಸವ ಮಹತ್ತರ ಉತ್ಸವವಾಗಿದೆ. ಭಗವಂತನು ಬೇರೆ ಬೇರೆ ರೂಪಗಳಿಂದ ನಮ್ಮ ಉದ್ದೇಶಗಳನ್ನು ಪೂರೈಸುತ್ತಾನೆ. ಕೃಷ್ಣನ ಉಪಾಸನೆಯಿಂದ ಎಲ್ಲವೂ ನಮಗೆ ಪ್ರಾಪ್ತಿಯಾಗುತ್ತದೆ. ಎಲ್ಲವೂ ಒಂದೆಡೆ ಸಿಗಬೇಕೆಂದರೆ ಅದು ಕೃಷ್ಣಾವತಾರ. ಕಲಿಯುಗದ ಜನರಿಗೆ ಕೃಷ್ಣಾವತಾರ.

ಪ್ರಧಾನಿಗೂ ಶ್ರೀ ಕೃಷ್ಣ ಮಠಕ್ಕೆ ಬರಲು ಇಚ್ಛೆಯಿದೆ. ಆದರೆ ಭದ್ರತೆ ಸಮಸ್ಯೆ ಇದೆ. ಶ್ರೀ ಕ್ರಷ್ಣನಿಗೂ ಭೂಮಿಗೆ ಬರುವ ಇಚ್ಛೆ ಇದೆ. ಆದರೆ ಕಲಿಯುಗದಲ್ಲಿ ಶೇ.75ರಷ್ಟು ಕೆಟ್ಟ ಜನರಿರುವ ಕಾರಣ ಭದ್ರತೆಯ ಸಮಸ್ಯೆ ಇದೆ! ಈ ಕಾರಣಕ್ಕೆ ದ್ವಾಪರ ಯುಗದ ಕಾಂಪೌಂಡ್‌ನ‌ಲ್ಲಿ  ನಿಂತು ಶ್ರೀ ಕೃಷ್ಣ ಆಶೀರ್ವಾದ ಮಾಡುತ್ತಾನೆ. ಈ ಮೂಲಕ ಎಲ್ಲರ ಆಸೆ ಈಡೇರಿಸುತ್ತಾನೆ. ಆತನ ಅವತಾರ ಗಳನ್ನು ಸಂಭ್ರಮಿಸಬೇಕು ಎಂದರು.

Advertisement

ಭಂಡಾರಕೇರಿ ಮಠಾಧೀಶರಾದ ವಿದ್ಯೆಶ ತೀರ್ಥ ಶ್ರೀಪಾದರು ಮಾತನಾಡಿ, ಕರ್ಮಯೋಗ, ಜ್ಞಾನ ಯೋಗ, ಭಕ್ತಿಯೋಗದ ಬಗ್ಗೆ
ವಿಶೇಷವಾಗಿ ಗಮನ ಹರಿಸಬೇಕು. ಉತ್ಸವದ ಮಾರ್ಗದಲ್ಲಿ ಜನರು ಪಾಲ್ಗೊಂಡು ಭಗವಂತನ ಪ್ರೀತಿಗೆ ಪಾತ್ರವಾಗಬಹುದು ಎಂದರು.ಮನಸ್ಸು ಶುದ್ಧವಾಗಿರಬೇಕು. ಸತ್ಕರ್ಮ ಮನಸ್ಸನ್ನು ತೊಳೆಯುತ್ತದೆ ಎಂದರು.

ಪುತ್ರಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮಾಹೆಯ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ನ್ಯಾಯವಾದಿ ಪ್ರದೀಪ್‌ ರಾವ್‌, ಉದ್ಯಮಿಗಳಾದ ಕಿಶೋರ್‌ ಕುಮಾರ್‌ ಗುರ್ಮೆ, ಪ್ರಸಾದ್‌ರಾಜ್‌ ಕಾಂಚನ್‌, ಪ್ರೊ| ರಾಧಾಕೃಷ್ಣ, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ರತ್ನಾಕರ್‌ ಇಂದ್ರಾಳಿ ಉಪಸ್ಥಿತರಿದ್ದರು. ಗೋಪಾಲ
ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.

ವಸ್ತ್ರ ಸಂಹಿತೆ ಒತ್ತಡ
ಬೆಳಗ್ಗೆ ರಾಜಾಂಗಣದಲ್ಲಿ ಕೈಮಗ್ಗ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವದಿಸಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಬರುತ್ತಿವೆ. ಕೆಲವು ದೇವಸ್ಥಾನಗಳು ಈಗಾಗಲೇ ವಸ್ತ್ರಸಂಹಿತೆ ಜಾರಿಗೆ ತಂದಿದೆ. ಕೆಲವು ದೇವಸ್ಥಾನಗಳು ವಸ್ತ್ರಸಂಹಿತೆ ಜಾರಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿವೆ. ಉಡುಪಿ ಶ್ರೀ ಕೃಷ್ಣಮಠದಲ್ಲೂ ವಸ್ತ್ರಸಂಹಿತೆ ಜಾರಿ ಮಾಡಬೇಕು ಎಂಬ ಒತ್ತಡ ಇದೆ. ವಸ್ತ್ರಸಂಹಿತೆ ಜಾರಿ ಮಾಡುವುದರಿಂದ ದೇವಸ್ಥಾನಕ್ಕೆ ಸೀರೆ ಉಟ್ಟು ಬರುವವರ ಸಂಖ್ಯೆ ಹೆಚ್ಚಲಿದೆ. ಇದರಿಂದ ಸೀರೆ ಉದ್ಯಮವೂ ಬೆಳೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next