ಬೆಂಗಳೂರು: ಬಿಡಿಎ ಅಧಿಕಾರಿಗಳ ಮಟ್ಟದಲ್ಲಿ ರೂಪುರೇಷೆ ಸಿದ್ಧವಾಗದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆ ಪ್ರಕ್ರಿಯೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಿವರಾಮ ಕಾರಂತ ಬಡಾವಣೆಯ ಪ್ರತಿ ಚದರ ಅಡಿಗೆ 3,650 ರೂ. ನಿಗದಿಪಡಿಸಿ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ.
ಬಡಾವಣೆಯ ಮಾರುಕಟ್ಟೆ ದರ ಪರಿಶೀಲಿಸಿ ಪ್ರತಿ ಚದರ ಅಡಿಗೆ 5 ಸಾವಿರಕ್ಕೆ ಹೆಚ್ಚಿಸಲು ಚರ್ಚೆಗಳು ನಡೆದಿವೆ. ಆದರೆ, ಬಡಾ ವಣೆಯ ನಿವೇಶನಕ್ಕೆ ಅಂತಿಮ ದರ ನಿಗದಿಪಡಿಸಿ, ರೂಪು ರೇಷೆ ಸಿದ್ಧಪಡಿಸದಿರುವುದು ನಿವೇಶನ ಹಂಚಿಕೆ ಪ್ರಕ್ರಿಯೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
3,705 ಎಕರೆಯಲ್ಲಿ ಬಡಾವಣೆ ನಿರ್ಮಾಣ: ಉತ್ತರ ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ ಶಿವರಾಮ ಕಾರಂತ ಬಡಾವಣೆಯ 34 ಸಾವಿರ ನಿವೇಶನಗಳ ಪೈಕಿ 28 ಸಾವಿರ ಸಿದ್ಧವಾಗಿವೆ. ಇವುಗಳಲ್ಲಿ 20ಗಿ30, 30ಗಿ40, 60ಗಿ40, 50ಗಿ80 ಹಾಗೂ ಮೂಲೆ ನಿವೇಶನವೂ ಸೇರಿದೆ. ಈ ಬಡಾವಣೆಗೆ 3 ಸಾವಿರ ರೈತರು ಭೂಮಿ ಕೊಟ್ಟಿದ್ದಾರೆ. ಮೊದಲ ಅಧಿಸೂಚನೆಯಲ್ಲಿ 3,456 ಎಕರೆ, ಎರಡನೇ ಅಧಿಸೂಚನೆಯಲ್ಲಿ 249 ಎಕರೆ ಸೇರಿ 3,705 ಎಕರೆ ವಿಶಾಲವಾದ ಜಾಗದಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆ ತಲೆ ಎತ್ತಲಿದೆ. ಇದರಲ್ಲಿ ಶೇ.40 ಭಾಗ ಅಂದರೆ 12 ಸಾವಿರ ನಿವೇಶನಗಳು ಭೂಮಿ ಕಳೆದುಕೊಂಡ ರೈತರ ಪಾಲಾಗಲಿದೆ. ಉಳಿದವುಗಳು ಸಾರ್ವಜನಿಕರಿಗೆ ಲಭ್ಯವಿರಲಿದೆ. ಸದ್ಯ 2,900 ಎಕರೆ ಭೂ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಸೂಚಿಸಿದೆ. ಈ ಪೈಕಿ 160 ಎಕರೆ ರಾಜೀವ್ ಗಾಂಧಿ ವಸತಿ ನಿಗಮದ ಸುಪರ್ದಿಗೆ ನೀಡುವಂತೆ ಸೂಚನೆ ಬಂದಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಮಿಟಿ ಮುಂದುವರಿಸದಿದ್ರೆ ಸಮಸ್ಯೆ ಜಟಿಲ?: ಬಡಾವಣೆಯಲ್ಲಿ ನಿರ್ಮಾಗೊಂಡಿರುವ ಕಟ್ಟಡಗಳನ್ನು ಕ್ರಮ ಬದ್ಧಗೊಳಿಸುವಿಕೆ, ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆ ಬಗೆಹರಿಸುವುದು, ಅರ್ಹತಾ ಪ್ರಮಾಣ ಪತ್ರ ನೀಡುವುದು, ನಿವೇಶನ ನಿರ್ಮಾಣ ಹಾಗೂ ಬಡಾವಣೆ ಪರಿಶೀಲಿಸಿ ಜನರಿಗೆ ಹಂಚುವ ಜವಾಬ್ದಾರಿ ಸೇರಿ ಬಡಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಕಮಿಟಿಯೇ ನಿರ್ವಹಣೆ ಮಾಡುತ್ತಿತ್ತು. ಹೀಗಾಗಿ, ಮಾರ್ಚ್‌ನಲ್ಲಿ ಕಮಿಟಿ ಬಡಾವಣೆ ಕೆಲಸ ಪ್ರಾರಂಭಿಸಿದರೂ ವೇಗವಾಗಿ ಹಲವು ಪ್ರಕ್ರಿಯೆ ಮುಗಿಸಿದೆ. ಡಿ.31ರಂದು ಕಮಿಟಿ ಅವಧಿ ಮುಕ್ತಾಯಗೊಳ್ಳಲಿದೆ. ಬಡಾವಣೆ ನಿರ್ವಹಣೆ ಮತ್ತೆ ಕಮಿಟಿ ಜವಾಬ್ದಾರಿಗೆ ಒಳಪಟ್ಟರೆ 2024ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಿವೇಶನ ಮಾರಾಟ ಪ್ರಕ್ರಿಯೆ ನಡೆಯಬಹುದು. ಕಮಿಟಿ ಅವಧಿ ಮುಂದುವರಿಸದಿದ್ದರೆ ಬಡಾವಣೆ ನಿರ್ವಹಣೆಯ ಜವಾಬ್ದಾರಿ ಬಿಡಿಎಗೆ ಹೋಗಲಿದೆ. ಸರ್ಕಾರ ಮಧ್ಯಪ್ರವೇಶಿಸಿ ನಿವೇಶನ ಮಾರಾಟವು ಇನ್ನಷ್ಟು ವಿಳಂಬವಾಗಲಿದೆ ಎಂದು ಬಡಾವಣೆಗೆ ಭೂಮಿ ಕೊಟ್ಟ ರೈತರ ಹೇಳಿಕೆ ಆಗಿದೆ.
ಸೈಟ್ ಹಣ ಪೆರಿಫೆರಲ್ ರಸ್ತೆಗೆ: ಬಡಾವಣೆ ಪಕ್ಕದಲ್ಲಿ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಹಾದು ಹೋಗಲಿದೆ. ಶಿವರಾಮ್ ಕಾರಂತ ಬಡಾವಣೆಯ ನಿವೇಶನ ಮಾರಾಟದಲ್ಲಿ ಬಂದ ದುಡ್ಡನ್ನು ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಕಾರ್ಯಕ್ಕೆ ಬಳಸಲು ಚಿಂತನೆ ನಡೆಸಲಾಗಿದೆ.
ಬಡಾವಣೆ ನಿರ್ಮಾಣಕ್ಕೆ ಇರುವ ತೊಡಕುಗಳೇನು?: ಶಿವರಾಮ ಕಾರಂತ ಬಡಾವಣೆಯಲ್ಲಿ 400 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಬಾಕಿ ಇದೆ. ಭೂ ಮಾಲೀಕರಿಗೆ ಇದುವರೆಗೆ ಶೇ.15 ಅರ್ಹತಾ ಪ್ರಮಾಣ ಪತ್ರ(ಇಸಿ) ಕೊಡಲಾಗಿದೆ. ಭೂ ಮಾಲೀಕರಿಗೆ ಶೇ.100 ಇ.ಸಿ. ಕೊಟ್ಟ ಮೇಲೆ ಸಾರ್ವಜನಿಕರಿಗೆ ನಿವೇಶನ ಕೊಡಬಹುದಾಗಿದೆ. ಇ.ಸಿ. ನೀಡದೇ ರೇರಾ ನೋಂದಣಿ ಅಸಾಧ್ಯ. ಇದರಿಂದ ಎಲ್ಲವೂ ವಿಳಂಬವಾಗುತ್ತದೆ.
ಶಿವರಾಮ ಕಾರಂತ ಬಡಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸಿದ್ಧಗೊಂಡಿರುವ ನಿವೇಶನಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಶೀಘ್ರ ನಿವೇಶನ ಮಾರಾಟ ಬಗ್ಗೆ ಮಾಹಿತಿ ನೀಡಲಾಗುವುದು.
●ಎನ್.ಜಯರಾಂ, ಬಿಡಿಎ ಆಯುಕ್ತ
–ಅವಿನಾಶ್ ಮೂಡಂಬಿಕಾನ