Advertisement

ಸಾಲಮನ್ನಾದಿಂದ ಬೆಳೆ ವಿಮೆಗೆ ಆಪತ್ತು!

06:00 AM Aug 05, 2018 | Team Udayavani |

ಕಲಬುರಗಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆಗೆ ಪ್ರೀಮಿಯಂ ತುಂಬುವ ದಿನಾಂಕ (ಜು.31) ಮುಕ್ತಾಯವಾಗಿದೆ. ಆದರೆ ಬೆಳೆ ವಿಮೆ ಮಾಡಿಸಿದವರ ಸಂಖ್ಯೆ ತೀರಾ ಇಳಿಮುಖವಾಗಿದೆ.

Advertisement

ರಾಜ್ಯದಲ್ಲಿ ಕಳೆದ ವರ್ಷ 17ಲಕ್ಷ ರೈತರು ಬೆಳೆವಿಮೆ ಮಾಡಿಸಿದ್ದರು. ಪ್ರಸಕ್ತ ವರ್ಷ ಈವರೆಗೆ 10.73 ಲಕ್ಷ ರೈತರು ಬೆಳೆವಿಮೆ ಮಾಡಿಸಿದ್ದಾರೆ. ಕಲಬುರಗಿಯಲ್ಲೇ  ಕಳೆದ ವರ್ಷ 90 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಕೇವಲ 40 ಸಾವಿರ ರೈತರು ಮಾತ್ರ ವಿಮೆ ಮಾಡಿಸಿದ್ದಾರೆ. ಆ. 10ರೊಳಗೆ ಆನ್‌ಲೈನ್‌ ಮೂಲಕ 10 ಸಾವಿರ ರೈತರು ವಿಮೆ ಮಾಡಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತಿ ಹೆಚ್ಚು ಬೀದರ್‌ ಜಿಲ್ಲೆಯಲ್ಲಿ (1.40ಲಕ್ಷ ರೈತರು) ಅತಿ ಕಡಿಮೆ ಯಾದಗಿರಿಯಲ್ಲಿ (13ಸಾವಿರ) ರೈತರು ವಿಮೆ ಮಾಡಿಸಿದ್ದಾರೆ.

ಕಾರಣ: ಸಾಲ ಮನ್ನಾ ಆಗುತ್ತಿರುವುದರಿಂದ ರೈತರು ಹೊಸದಾಗಿ ಸಾಲ ಪಡೆದಿಲ್ಲ. ಜತೆಗೆ ಸಾಲ ನವೀಕರಿಸಿಲ್ಲ. ಹೀಗಾಗಿ ರೈತರಿಂದ ಬೆಳೆ ವಿಮೆಗೆಂದು ಪ್ರೀಮಿಯಂ ಅನ್ನು ಬ್ಯಾಂಕ್‌ಗಳು ಪಡೆದಿಲ್ಲ. ಸಾಲ ಮನ್ನಾ ಆಗಿದೆ ಎನ್ನುವುದಾದರೆ ಸಾಲದ ಪ್ರಶ್ನೆಯೇ ಎದುರಾಗುವುದಿಲ್ಲ. ವಿಮೆ ಮಾಡಿಸುವ ಅವಕಾಶವೇ ಇಲ್ಲದಂತಾಗುತ್ತದೆ.

ಹೈಕ ಭಾಗದ ಜಿಲ್ಲೆಗಳಲ್ಲಿ, ಮುಂಬೈ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರಸ್ತುತ ಬರಗಾಲ ಎದುರಾಗಿದೆ. ಅಲ್ಪಾವಧಿ ಬೆಳೆಗಳು ನಾಶವಾಗಿವೆ. ಬಿತ್ತನೆ ಮಾಡಲಾದ ಬೆಳೆಗಳು ಮೇಲೇಳದಿದ್ದರೆ ಶೇ.25ರಷ್ಟು ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ವಿಮೆಯಿಂದ ಸಿಗುತ್ತಿತ್ತು. ಒಂದು ವೇಳೆ ಹೆಚ್ಚು ರೈತರು ಬೆಳೆ ವಿಮೆ ಮಾಡಿಸಿದ್ದಲ್ಲಿ ಪ್ರಮಾಣ ಹೆಚ್ಚಾಗಿ ವಿಮೆ ಮಂಜೂರಾಗುವ ಸಾಧ್ಯತೆಯಿತ್ತು. ಈಗ ಅದೂ ಅನುಮಾನ ಎನ್ನಲಾಗಿದೆ.

Advertisement

ಈ ಸಮಸ್ಯೆ ಪರಿಹಾರಕ್ಕೆ ಹಾಗೂ ಇನ್ನೊಂದಿಷ್ಟು ರೈತರಿಗೆ ಸಹಾಯ ಆಗಬೇಕೆಂದರೆ ಬೆಳೆವಿಮೆ ನೋಂದಣಿ ದಿನಾಂಕವನ್ನು ಆ.15ರವರೆಗೆ ವಿಸ್ತರಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ರೈತರು. ಈ ಕುರಿತಂತೆ  ರಾಜ್ಯ ಕೃಷಿ ಅಧಿಕಾರಿಗಳು, ಕೃಷಿ ಸಚಿವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಒಪ್ಪುವ ವಿಚಾರದಲ್ಲಿ ಅನುಮಾನಗಳಿವೆ.

ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿರುವುದರಿಂದ ಇನ್ನೂ ಹೊಸದಾಗಿ ಬೆಳೆಸಾಲ ಸಿಗದಿರುವುದು ಹಾಗೂ ಸಾಲ ನವೀಕರಣಗೊಂಡು ಬೆಳೆವಿಮೆ ಪ್ರೀಮಿಯಂ ತುಂಬದೇ ಇರುವುದರಿಂದ ಬೆಳೆವಿಮೆಯಲ್ಲಿ ರೈತರ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಆದರೂ ಕೆಲ ರೈತರು ಬೆಳೆ ವಿಮೆ ಮಾಡಿಸಿದ್ದಾರೆ.
– ಗೋಪಾಲ ಚವ್ಹಾಣ, ವ್ಯವಸ್ಥಾಪಕ ನಿರ್ದೇಶಕರು, ಡಿಸಿಸಿ ಬ್ಯಾಂಕ್‌, ಕಲಬುರಗಿ

ಆ.15ರವರೆಗೆ ವಿಸ್ತರಿಸುವಂತೆ ಕೃಷಿ ಸಚಿವರ ಸಭೆಯಲ್ಲಿ ನಿರ್ಧರಿಸಿ ಕೇಂದ್ರಕ್ಕೆ ಇಲಾಖೆಯಿಂದ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಆದರೆ ಕೇಂದ್ರದಿಂದ ಯಾವುದೇ ನಿರ್ಧಾರ ಬಂದಿಲ್ಲ.
– ರತೀಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕರು, ಕಲಬುರಗಿ

ವಿಮೆ ಮಾಡಿಸಿದ ಪ್ರಮಾಣ
ಜಿಲ್ಲೆ    ವಿಮಾ ಸಂಖ್ಯೆ
ಗದಗ    1ಲಕ್ಷ
ಕಲಬುರುಗಿ 90ಸಾವಿರ
ಬಾಗಲಕೋಟೆ  80ಸಾವಿರ
ಹಾವೇರಿ    72ಸಾವಿರ
ಧಾರವಾಡ    77ಸಾವಿರ
ವಿಜಯಪುರ 64ಸಾವಿರ
ಬೆಳಗಾವಿ    40ಸಾವಿರ
ಬಳ್ಳಾರಿ 16ಸಾವಿರ
ಕೊಪ್ಪಳ 59ಸಾವಿರ
ರಾಯಚೂರದಲ್ಲಿ 62ಸಾವಿರ
ತುಮಕೂರು  61ಸಾವಿರ
ದಾವಣಗೆರೆ 16ಸಾವಿರ
ಚಿತ್ರದುರ್ಗ 36ಸಾವಿರ
ಹಾಸನ 31ಸಾವಿರ,
ಯಾದಗಿರಿ    13ಸಾವಿರ

– ಹಣಮಂತರಾವ ಭೈರಾಮಡಗಿ
 

Advertisement

Udayavani is now on Telegram. Click here to join our channel and stay updated with the latest news.

Next