ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ನ ವಿವಿಧ ಸೌಲಭ್ಯಗಳ ಕುರಿತಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ವಿವರ ನೀಡಿದ್ದಾರೆ.
ಇದರಲ್ಲಿ ಆದಾಯ ತೆರಿಗೆ ಸಲ್ಲಿಸುವವರಿಗೂ ಸಿಹಿ ಸುದ್ದಿಯನ್ನು ವಿತ್ತ ಸಚಿವರು ನೀಡಿದ್ದಾರೆ. ಅದೆಂದರೆ, ಎಲ್ಲಾ ರೀತಿಯ ಆದಾಯ ತೆರಿಗೆ ಪಾವತಿಗಳ ಅಂತಿಮ ದಿನಾಂಕವನ್ನು ಈ ವರ್ಷದ ನವಂಬರ್ ತಿಂಗಳಿನವರೆಗೆ ವಿಸ್ತರಿಸಲಾಗಿದೆ.
ಇನ್ನು 2021ರ ಮಾರ್ಚ್ 31ರ ತನಕ ಮಾಡುವಂತಹ ವೇತನ ರಹಿತ ಪಾವತಿಗಳ ಟಿಡಿಎಸ್, ಟಿಸಿಎಸ್ ದರಗಳಲ್ಲಿ 25% ಕಡಿತವನ್ನು ಘೋಷಿಸಲಾಗಿದೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಪಾವತಿಯಾಗಬೇಕಿದ್ದ 50 ಸಾವಿರ ಕೋಟಿ ರೂಪಾಯಿಗಳು ಸ್ಥಳೀಯವಾಗಿ ಉಳಿದುಕೊಳ್ಳಲಿದೆ ಹಾಗೂ ತನ್ಮೂಲಕ ಈ ಮೊತ್ತ ಮಾರುಕಟ್ಟೆಯಲ್ಲಿ ಚಲಾವಣೆಗೆ ಬರಲಿದೆ ಎನ್ನುವುದು ವಿತ್ತ ಸಚಿವರ ಆಶಯವಾಗಿದೆ.
ಕೋವಿಡ್ ಸಂಕಷ್ಟದ ಬಳಿಕ ‘ಸ್ವಾವಲಂಬಿ’ ಭಾರತವನ್ನು ಕಟ್ಟುವ ಮಹತ್ವಾಕಾಂಕ್ಷೆಯೊಂದಿಗೆ ಪ್ರದಾನಿ ಮೋದಿ ಅವರು ಮಂಗಳವಾರವಷ್ಟೇ ‘ಆತ್ಮ ನಿರ್ಭರ ಭಾರತ’ ಯೋಜನೆಯಡಿ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ಪ್ಯಾಕೇಜ್ ನೆರವನ್ನು ಘೋಷಿಸಿದ್ದರು. ಮತ್ತಿದು ನಮ್ಮ ಜಿಡಿಪಿಯ 10 ಪ್ರತಿಶದಷ್ಟಾಗಲಿದೆ.
ಆರ್ಥಿಕತೆ, ಮೂಲಭೂತ ವ್ಯವಸ್ಥೆ, ಭೌಗೋಳಿಕತೆ ಹಾಗೂ ಬೇಡಿಕೆ ಎಂಬುದು ‘ಆತ್ಮ ನಿರ್ಭರ ಭಾರತ’ದ ಮೂಲಭೂತ ಸ್ತಂಭಗಳಾಗಿವೆ.