ಚನ್ನಪಟ್ಟಣ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನದ ಮುಖ್ಯ ಉದ್ದೇಶ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನತೆಗೆ ತಮ್ಮ ಗ್ರಾಮ ವ್ಯಾಪ್ತಿಯಲ್ಲೆ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವುದು ಎಂದು ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರು ತಿಳಿಸಿದರು.
ತಾಲೂಕಿನ ವಂದರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಅಭಿಯಾನದ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮತನಾಡಿದರು. ಗ್ರಾಮದ ಜನರಿಗೆ ಉದ್ಯೋಗದ ಮಾಹಿತಿ ನೀಡುವ ಕೆಲಸ ಎಲ್ಲಾ ಗ್ರಾಮ ಪಂಚಾಯತಿ ಗಳ ವ್ಯಾಪ್ತಿಯಲ್ಲಿ ಜರುಗಬೇಕು ಎಂದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದ ಯೋಜನೆಯಾಗಿದ್ದು, ವಂದಾರಗುಪ್ಪೆ ಗ್ರಾಮೀಣ ಪ್ರದೇಶದ ಜನರು ಮಾತ್ರವಲ್ಲದೇ ರಾಮನಗರ ಜಿಲ್ಲಾದ್ಯಾಂತ ಗ್ರಾಮೀಣ ಪ್ರದೇಶದ ಜನರು ಯೋಜನೆಯ ಫಲಾನುಭವಿಗಳಾಗಿ ಉತ್ತಮ ರೀತಿಯಲ್ಲಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶದ ಜನರು ಗ್ರಾಮ ಪಂಚಾ ಯಿತಿಗಳಿಂದ ಜಾಬ್ ಕಾರ್ಡ್ ಅನ್ನು ಪಡೆದು ತಮ್ಮ ಗ್ರಾಮ ವ್ಯಾಪ್ತಿಯಲ್ಲೆ ಉದ್ಯೋಗ ಪಡೆದು ನಿರು ದ್ಯೋಗ ಮುಕ್ತರಾಗಬೇಕು ಎಂಬುವ ಉದ್ದೇಶವನ್ನು ದುಡಿಯೋಣ ಬಾ ಅಭಿಯಾನ ಒಳಗೊಂಡಿದೆ ಎಂದರು.
2022 ಏ. 1ರಿಂದ ನರೇಗಾ ಕೆಲಸಕ್ಕೆ ದಿನದ ಕೂಲಿ 289 ರೂ. ನಿಂದ 309 ರೂ. ಗೆ ಹೆಚ್ಚಳವಾಗಿದೆ. ಕೂಲಿಕಾರರು ತರುವ ಸಲಕರಣೆಗಳಿಗೆ 10 ರೂ ಹೆಚ್ಚು ವರಿ ವೆಚ್ಚವನ್ನು ಬರಿಸಲಾಗುತ್ತಿದೆ. ಇದರ ಪೂರ್ಣ ಉಪಯೋಗವನ್ನು ಗ್ರಾಮೀಣ ಜನರಿಗೆ ತಿಳಿಸುವ ಪ್ರಚಾರದ ಕೆಲಸ ಎಲ್ಲಾ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಜರುಗಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ದೊರಕುವಂತಾದರೆ ಜಿಲ್ಲಾ ಪಂಚಾ ಯತಿ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದರು.
ವಂದರಗುಪ್ಪೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಅವರು ಮಾತನಾಡಿ, ಗ್ರಾಮೀಣ ಭಾಗದ ರೈತರು ತಮ್ಮ ಜಮೀನಿನಲ್ಲಿ ಒಕ್ಕಣೆ ಕೆಲಸ ಮುಗಿಸಿ ಮುಂದಿನ ಬಿತ್ತನೆ ಕಾರ್ಯದವರೆಗೆ ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದ್ದು, ಇದನ್ನು ತಪ್ಪಿಸಲು ನಿಟ್ಟಿನಲ್ಲಿ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಂದಾರಗುಪ್ಪೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕುಮಾರ್, ಸೆಕ್ರೆಟರಿ ರಾಜೇಶ್, ರಾಮನಗರ ಜಿಲ್ಲಾ ಪಂಚಾಯಿತಿ ಡಿ.ಐ.ಇ.ಸಿ. ಅರುಣ್ ಕುಮಾರ್ ಸಿ.ಜಿ., ತಾಲೂಕು ಐ.ಇ.ಸಿ. ಸಂಯೋಜಕಿ ಭವ್ಯ ಶ್ರೀ, ಡಿ.ಇ.ಒ.ಗಳು, ಗ್ರಾಮ ಕಾಯಕ ಮಿತ್ರ, ಗ್ರಾಮ ಪಂಚಾಯಿತಿ ಸಿಬಂದಿ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.