ಮಂಡ್ಯ: ಗ್ರಾಮೀಣ ಭಾಗದ ಕೂಲಿಗಾರರಿಗೆ ನಿರಂತರ ಕೆಲಸ ನೀಡುವ ಉದ್ದೇಶದಿಂದ ಮಾ.15ರಿಂದ ಜೂ.30ರವರೆಗೆ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಇದರಿಂದ ಜಲ ಸಂರಕ್ಷಣೆಗೆ ಜಲ ಮೂಲಗಳ ಪುನಶ್ಚೇತನ ಕಾಮಗಾರಿಗಳಾದ ಸಮಗ್ರ ಕೆರೆ ಅಭಿವೃದ್ಧಿ, ಬದು, ಕಾಲುವೆ ಸುಧಾರಣೆ, ಕೆರೆ ಮತ್ತು ಕಟ್ಟೆಗಳ ಹೂಳೆತ್ತುವ ಕಾಮಗಾರಿಗಳನ್ನು ಆದ್ಯತೆಯ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಾಪಂ ಇಒ ರಾಮಲಿಂಗಯ್ಯ ಹೇಳಿದರು.
ಮಳವಳ್ಳಿ ತಾಪಂ ಆವರಣದಲ್ಲಿ ದುಡಿಯೋಣ ಬಾ ಅಭಿಯಾನ ವಾಹಿನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಳೆಗಾಲಕ್ಕೂ ಮುನ್ನ ಜಲ ಮೂಲಗಳ ಪುನಶ್ಚೇತನವಾಗುವುದರೊಂದಿಗೆ ಬೇಸಿಗೆಯಲ್ಲಿ ತಾಲೂಕಿನ 39 ಗ್ರಾಮ ಪಂಚಾಯತಿಯ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಸಿಗಲಿದೆ. ಕೇಂದ್ರ ಸರ್ಕಾರ ಕೂಲಿ ಮೊತ್ತವನ್ನು 20 ರೂ. ಹೆಚ್ಚಿಸಿದ್ದು, ಇದರಿಂದ ಸಲಕರಣೆ ವೆಚ್ಚ ಸೇರಿ 319 ರೂ. ಸಿಗಲಿದೆ ಎಂದು ಹೇಳಿದರು.
ಕೂಲಿ ಪಾವತಿಯಲ್ಲಿ ಸಮಸ್ಯೆಯಿಲ್ಲ: ಮಹಿಳಾ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕೆಲಸದಲ್ಲಿ ಭಾಗವಹಿಸಿದರೆ ಮಹಿಳಾ ಕೂಲಿಗಾರರ ಸಬಲೀಕರಣವಾಗಲು ಸಾಧ್ಯವಾಗುತ್ತದೆ. ಕೂಲಿಕಾರರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರ ಎನ್ ಎಂಎಂಎಸ್ ಆ್ಯಪ್ ಮೂಲಕ ಹಾಜರಾತಿಯನ್ನು ತೆಗೆದುಕೊಳ್ಳುವುದರಿಂದ ಕೂಲಿ ಪಾವತಿಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ತಾಲೂಕು ಐಇಸಿ ಸಂಯೋಜಕ ಸುನಿಲ್‌ಕುಮಾರ್, ಎಂಐಎಸ್ ಸಂಯೋಜಕಿ ಶ್ವೇತ, ವಿಷಯ ನಿರ್ವಾಹಕ ಮಹದೇವಮ್ಮ, ತಾಂತ್ರಿಕ ಸಹಾಯಕರಾದ ಚಂದನ್, ಅರುಣ್, ಶೋಭ, ನಿತಿನ್, ಎನ್‌ಎಲ್‌ಆರ್‌ಎಂ ವ್ಯವಸ್ಥಾಪಕ ಮಂಜುನಾಥ್ ಹಾಜರಿದ್ದರು.