ಬಸವಕಲ್ಯಾಣ : ಗ್ರಾಮೀಣ ಭಾಗದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ವಲಸೆ ಹೋಗುವುದು ಮತ್ತು ನರೇಗಾ ಯೋಜನೆಯಿಂದ ಹೊರಗುಳಿದ ಕುಟುಂಬಗಳು ಸಕ್ರಿಯವಾಗಿ ಭಾಗವಹಿಸಬೇಕೆಂಬ ನಿಟ್ಟಿನಲ್ಲಿ ಮಾ.15ರಿಂದ ಮೂರು ತಿಂಗಳು ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್ ಹೇಳಿದರು.
ಭೋಸಗಾ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ಒದಗಿಸುವುದೇ ಅಭಿಯಾನದ ಮೂಲ ಉದ್ದೇಶ. ಅಭಿಯಾನದಿಂದ ಪ್ರತಿ ಕುಟುಂಬ ವರ್ಷದಲ್ಲಿ 100 ದಿನ ಕೆಲಸ ಮಾಡಲು ಅವಕಾಶ ಇರುತ್ತದೆ ಎಂದರು.
ಬೇಸಿಗೆ ಅವ ಧಿಯಲ್ಲಿ 60 ದಿನ ಕೆಲಸ ಮಾಡಿದ್ದಲ್ಲಿ 16500 ರೂ. ಗಳಿಸಬಹುದು. ಇದರಿಂದ ಅಗತ್ಯ ಬೀಜ, ರಸಗೊಬ್ಬರ, ಮಕ್ಕಳ ಶಾಲೆ-ಕಾಲೇಜು ಶುಲ್ಕ ಭರಿಸಲು ಅನುಕೂಲವಾಗುತ್ತದೆ ಎಂಬ ಮಾಹಿತಿಯನ್ನು ಗ್ರಾಪಂ ಸಿಬ್ಬಂದಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ತಾಪಂ ಸಹಾಯಕ ಕಾರ್ಯದರ್ಶಿ ಸಂತೋಷ ಚವ್ಹಾಣ ಮಾತನಾಡಿ, ಅಭಿಯಾನದಡಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಟ 50 ರೈತರ ಜಮೀನುಗಳಲ್ಲಿ ಬದು, ಕೃಷಿ, ತೆರೆದಬಾವಿ ನಿರ್ಮಾಣ, ಸೋಕ್ ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ಬೋರ್‌ವೆಲ್ ರಿಚಾರ್ಜ್ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿ ಮಾಡಬಹುದು ಎಂದರು.
ಈ ವೇಳೆ ಟಿಸಿ ಶಿವರಾಜ ಪಾಟೀಲ, ತಾಲೂಕು ಐಇಸಿ ಸಂಯೋಜಕ ವೀರಾರೆಡ್ಡಿ. ಆರ್.ಎಸ್, ಗ್ರಾಪಂ ಕಾರ್ಯದರ್ಶಿ ಮಾರುತಿ ಜಮಾದಾರ್, ಅಶೋಕ, ಸುರೇಶ ರಾಠೊಡ, ಡಿಇಒ ಅಮಿತಾ ವಾಡೇಕರ್, ಬಿಎಫ್‌ಟಿ ರಾಮ ಸೇರಿದಂತೆ ಗ್ರಾಪಂ ಸದಸ್ಯರು, ಕೂಲಿ ಕಾರ್ಮಿಕರು ಇದ್ದರು. ನಂತರ ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್ ಕೂಲಿಕಾರ್ಮಿಕರ ಜತೆ ಸಂವಾದ ನಡೆಸಿದರು.