Advertisement

ದೇಶಕ್ಕಾಗಿ ದುಡಿದವರನ್ನು ದೇವರನ್ನಾಗಿಸಿದ್ದು ಸರಿಯಲ್ಲ

03:10 PM Apr 12, 2017 | Team Udayavani |

ಧಾರವಾಡ: ದೇಶದಲ್ಲಿ ಜ್ಞಾನಕ್ಕಾಗಿ ಕೆಲಸ ಮಾಡಿದವರನ್ನು ದೇವರನ್ನಾಗಿಸಿರುವುದು ಸರಿಯಲ್ಲ ಎಂದು ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಸವರಾಜ ಸ್ವಾಮಿ ಅಭಿಪ್ರಾಯಪಟ್ಟರು. ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಕರ್ತ ಮೊಹರೆ ಹಣಮಂತರಾಯ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು.

Advertisement

ಬದುಕಿನ ಅನುಭವದ ಹಿನ್ನೆಲೆಯಲ್ಲಿ ಜ್ಞಾನಕ್ಕಾಗಿ ಕೆಲಸ ಮಾಡಿದ ವ್ಯಕ್ತಿಗಳನ್ನು ಇಂದು ದೇವರನ್ನಾಗಿಸಿದ್ದೇವೆ. ಹನ್ನೆರಡನೆ ಶತಮಾನದಲ್ಲಿಯೇ ಸಾಮಾಜಿಕ ಸಮಾನತೆಗೆ ಹೋರಾಡಿದ ಬಸವಣ್ಣನವರನ್ನು ದೇವರನ್ನಾಗಿಸಿದ್ದೇವೆ ಎಂದರು. ವಿದ್ಯಾರ್ಥಿಗಳಿಗೆ ಅನುಭವ ಜನ್ಯ ತಿಳಿವಳಿಕೆ ಅಗತ್ಯ.

ಅನುಭವವನ್ನು ಓರೆಗಲ್ಲಿಗೆ ಹಚ್ಚಬೇಕು. ಸದ್ಯ ದೇಶದಲ್ಲಿ ಮುದ್ರಣ ಮಾಧ್ಯಮ ಪರವಾಗಿಲ್ಲ, ಆದರೆ ಇಲೆಕ್ಟ್ರಾನಿಕ್‌ ಮೀಡಿಯಾ ಕೆಟ್ಟಿದೆ. ಇಲ್ಲಿ ಕೆಲಸ ಮಾಡುವ  ಬಹಳಷ್ಟು ಜನರಿಗೆ ಸರಿಯಾಗಿ ಮಾಧ್ಯಮದ ಹಿನ್ನೆಲೆ ಇರುವುದಿಲ್ಲ. ಹಣ ಪಡೆಯಲು ಉನ್ನತ ಸ್ಥಾನದಲ್ಲಿರುವವರನ್ನು ದುರ್ಬಳಕೆ ಮಾಡಲಾಗುತ್ತಿದೆ.

ಮೂವತ್ತು-ನಾಲ್ವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯನ್ನು ಒಂದೇ ಒಂದು ಶಬ್ದದ ಬಳಕೆ ಮೂಲಕ ಕೊಲೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಾಧ್ಯಮದಲ್ಲಿರುವವರಿಗೆ ಭಾವ(ಗೆಳೆತನ) ಹೆಚ್ಚಬೇಕು. ದುರ್ಭಾವ( ದ್ವೇಷ) ಕಡಿಮೆ ಇರಬೇಕು.

ಪತ್ರಕರ್ತರ ಮನೋಭಾವನೆಗಳಿಗೆ ಬೇಸತ್ತು ಕೆಲ ಉದ್ದಿಮೆದಾರರು ಸ್ವತಃ ಟಿವಿ,ಪೇಪರ್‌ ಮಾಡಿದರು. ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ಖ್ಯಾತ ಪತ್ರಕರ್ತರನ್ನು ಎಸ್‌.ಎಂ.ಎಸ್‌. ಸಂದೇಶದ ಮೂಲಕ ಮನೆಗೆ ಕಳಿಸಿರುವ ಘಟನೆ ನಡೆಯುವ ಹಂತಕ್ಕೆ ಪತ್ರಿಕೋದ್ಯಮ ಬಂದು ನಿಂತಿರುವುದು ದುರ್ದೈವ ಎಂದರು. 

Advertisement

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥರು ಹಾಗೂ ಸಮಾಜ ನಿಕಾಯ ಡೀನ್‌ ಪೊ|ವಿ.ಎ.ಅಮ್ಮಿನಭಾವಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜಗತ್ತು ಸಕಾರಾತ್ಮಕ ಮತ್ತು ನಕಾರಾತ್ಮಕ ಮನೋಭಾವ ಮೇಲೆ ನಿಂತಿದೆ ಎಂದರು. ಸಹ ಪ್ರಾಧ್ಯಾಪಕ ಡಾ|ಜೆ.ಎಂ.ಚಂದುನವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷಯ ಜೋಶಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ|ಸಂಜಯ ಮಾಲಗತ್ತಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next