ಬೆಂಗಳೂರು: ಚಿತ್ರರಂಗದ ಮತ್ತು ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಬಿಡುಗಡೆಗೆ ಮುಂದಾಗಿದ್ದ ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿದ್ದ ‘ಸತ್ಯದೇವ್ ಐಪಿಎಸ್’ ಚಿತ್ರದ ಪ್ರದರ್ಶನಗಳನ್ನೇ ರಾಜ್ಯದ ನಿಗದಿಯಾಗಿದ್ದ ಎಲ್ಲಾ ಚಿತ್ರಮಂದಿರಗಳಲ್ಲಿ ರದ್ದು ಮಾಡಲಾಗಿದೆ.
ಡಬ್ಬಿಂಗ್ ಚಿತ್ರ ಬಿಡುಗಡೆಗೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಮತ್ತು ಚಿತ್ರರಂಗದ ಒಕ್ಕೂಟ ತೀವ್ರ ಪ್ರತಿಭಟನೆ ನಡೆಸಿದ್ದು, ಇಂದು ಶುಕ್ರವಾರ ಬೆಳಗ್ಗೆ ನಿಗದಿಯಾಗಿದ್ದ ಚಿತ್ರಮಂದಿರಗಳ ಬಳಿ ಪ್ರೇಕ್ಷಕರ ಸುಳಿವೇ ಇರಲಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ಎಲ್ಲೂ ಚಿತ್ರ ಪ್ರದರ್ಶನವನ್ನೇ ಕಾಣಲಿಲ್ಲ.
ಬೆಂಗಳೂರಿನ ಯೂನಿಯನ್ ಚಿತ್ರಮಂದಿರಲ್ಲಿ ಚಿತ್ರ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ. ಹುಬ್ಬಳ್ಳಿ ರೂಪಂ ಚಿತ್ರ ಮಂದಿರದಲ್ಲಿ ಕನ್ನಡ ಪರ ಸಂಘಟನೆಗೆಳು ಪೋಸ್ಟರ್‌ಗಳನ್ನು ಹರಿದು ಹಾಕಿ ಡಬ್ಬಿಂಗ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಫಿಲ್ಮ್ ಚೇಂಬರ್ ಬಳಿ ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಮೈಸೂರಿನಲ್ಲಿ ಪಾಲಿಕೆ ಸದಸ್ಯ, ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಂ ಡಬ್ಬಿಂಗ್ ವಿರುದ್ಧ ಏಕಾಂಗಿ ಹೋರಾಟ ನಡೆಸಿದರು. ಮೈಸೂರಿನ ಉಮಾ ಚಿತ್ರ ಮಂದಿರದಲ್ಲಿ ಪ್ರದರ್ಶನ ರದ್ದು ಮಾಡಲಾಗಿದ್ದು , ಚಿತ್ರದುರ್ಗ,ಕೊಪ್ಪಳದಲ್ಲೂ ಪ್ರದರ್ಶನ ರದ್ದು ಮಾಡಲಾಗಿದೆ.